ರಾಯಚೂರು

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ರಾಯಚೂರು: ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಕಿತ್ತಾಡುತ್ತಿದ್ದು, ಜನರ ಸಮಸ್ಯೆಗಳ ಪರಿಹರಿಸುವಲ್ಲಿ ನಿರ್ಲಕ್ಷ್ಯ ತಾಳಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಈ ಕುರಿತು ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ ನಾಯಕ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಕಾರ್ಯಕರ್ತರು, ಜಿಲ್ಲೆಗೆ ಸರ್ಕಾರದಿಂದ ವಸತಿ ಯೋಜನೆ ಅಡಿ ಮನೆಗಳು ಮಂಜೂರಾಗಿವೆ. ಆದರೆ ಅನುದಾನ ಬಿಡುಗಡೆ ಮಾಡದಿರುವುದರಿಂದ ಬಡವರು ಅರ್ಧ ನಿರ್ಮಿಸಿದ ಮನೆಗಳಲ್ಲಿ ಹಾಗೂ ಬಯಲಿನಲ್ಲಿಯೇ ವಾಸವಾಗಿದ್ದಾರೆಂದು ದೂರಿದರು.
ಖೊಟ್ಟಿ ಬಿಲ್ ಸಲ್ಲಿಸಿ ಅನುದಾನ ದುರ್ಬಳಕೆ: ಮಳೆಯ ಅಭಾವದಿಂದ ಜಿಲ್ಲೆಯ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಸರ್ಕಾರದಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಅನುದಾನ ದೊರೆತಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜಿಪಂ ಎಂಜಿನಿಯರ್ ಹುದ್ದೆಯು ಪ್ರಭಾರಿ ಅಧಿಕಾರಿಯಿಂದಲೇ ನಿರ್ವಹಿಸಲಾಗುತ್ತಿದೆ. ಹಾಗಾಗಿ ಅಕ್ರಮಗಳಿಗೆ ಇಲ್ಲಿ ಕೊನೆಯಿಲ್ಲದಂತಾಗಿದೆ ಎಂದು ದೂರಿದರು.
ಸಮಾಜ ಕಲ್ಯಾಣ ಇಲಾಖೆಯು ವಿವಿಧ ಯೋಜನೆಗಳಡಿ ಕಾಮಗಾರಿಯನ್ನು ಭೂ ಸೇನೆಗೆ ಒಪ್ಪಿಸಿದ್ದು, ಅದರಿಂದ ಕಾಮಗಾರಿ ಪೂರ್ಣಗೊಳ್ಳದೇ ಖೊಟ್ಟಿ ಬಿಲ್ ಸಲ್ಲಿಸಿ ಅನುದಾನ ದುರ್ಬಳಕೆ ಮಾಡಿಕೊಂಡಂಥ ಅನೇಕ ಉದಾಹರಣೆಗಳಿವೆ ಎಂದು ಸಂಘಟನೆಯವರು ಆರೋಪಿಸಿದರು.
ನಿರ್ಲಕ್ಷ್ಯ: ಅಕ್ರಮ ಮತ್ತು ಅವ್ಯವಹಾರದ ಕುರಿತು ಜಿಲ್ಲಾಡಳಿತದ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅದೇ ರೀತಿ ಜನಪ್ರತಿನಿಧಿಗಳೂ ನಿರ್ಲಕ್ಷ್ಯ ತೋರಿದ್ದಾರೆಂದು ದೂರಿದರು. ಕಾರಣ ಕೂಡಲೇ ಸಮಸ್ಯೆಗಳಿಗೆ ಪರಿಹಾರ ಹುಡುಕುವತ್ತ ಗಮನಹರಿಸುವಂತೆ ಒತ್ತಾಯಿಸಿದರು. ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ, ಚನ್ನಬಸವ ಯಕ್ಲಾಸಪುರ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.