ಐಟಿಐ ಪರೀಕ್ಷೆ 20 ದಿನ ಮುಂದಕ್ಕೆ; ಎಐಡಿವೈಒ
ರಾಯಚೂರು: ಐಟಿಐನಲ್ಲಿ ಸೆಮಿಸ್ಟರ್ ಪದ್ಧತಿ ಕೈಬಿಡುವಂತೆ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಸಮೀಪಿಸುತ್ತಿರುವ ಈ ಸಂದರ್ಭ ಪರೀಕ್ಷೆಗಳನ್ನು 20 ದಿನ ಮುಂದೂಡಲಾಗಿದೆ ಎಂದು ಎಐಡಿವೈಒ ತಿಳಿಸಿದೆ. ಥಿಯರಿ ಪರೀಕ್ಷೆಗಳ ನಂತರ ಪ್ರಾಕ್ಟಿಕಲ್ ಪರೀಕ್ಷೆಗಳು ನಡೆಯಲಿದ್ದು, ಫೆ.5ರಂದು ಆರಂಭವಾಗಬೇಕಿದ್ದ ಪರೀಕ್ಷೆಗಳು ಫೆ.25ರಿಂದ ಆರಂಭವಾಗಲಿವೆ. ಸೆಮಿಸ್ಟರ್ ಪದ್ಧತಿ ಜಾರಿಗೆ ಬಂದರೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂಬ ಭರವಸೆ ಸಿಕ್ಕಿದೆ ಎಂದು ಸಂಘಟನೆ ತಿಳಿಸಿದೆ. ಪ್ರತಿ ವಿದ್ಯಾರ್ಥಿಗೆ ಶೇ.10ರಷ್ಟು ಕೃಪಾಂಕವನ್ನು ನೀಡಿ, ವಿದ್ಯಾರ್ಥಿಗಳು ಉತ್ತೀರ್ಣರಾಗಲು ಅನುಕೂಲ ಮಾಡಲಾಗಿದೆ. ಎಂಪ್ಲಾಯಬಲಿಟಿ ಸ್ಕಿಲ್ ವಿಷಯ ಕುರಿತು 50 ಗಂಟೆ ಪಾಠ ಬೋಧನೆ ನಡೆದಿಲ್ಲವಾದ್ದರಿಂದ ಆ ವಿಷಯದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಜರುಗಿಸುವುದಾಗಿ ಭರವಸೆ ಸಂಘಟನೆಗೆ ನೀಡಲಾಗಿದೆ ಎಂದು ತಿಳಿಸಿದೆ. ಪರೀಕ್ಷಾ ನಿಯಮಗಳಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಯ ಭಾಷೆಯ ಸಮಸ್ಯೆಯ ಬಗ್ಗೆ ಮತ್ತಿತರೆ ವಿಚಾರಗಳಿಗೆ ವಿದ್ಯಾರ್ಥಿಗಳಿಗೆ ಪೂರಕವಾಗಿ ಮಾರ್ಪಾಟು ಮಾಡಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆದಲ್ಲಿ, ಪರೀಕ್ಷೆಗಳ ಸಂದರ್ಭದಲ್ಲಿ ಇನ್ನಾವುದೇ ರೀತಿಯ ಒತ್ತಡ ಇತ್ಯಾದಿ ಕಂಡುಬಂದರೆ, ಐಟಿಐ ವಿದ್ಯಾರ್ಥಿಗಳ ಹೋರಾಟ ಮುಂದುವರಿಯಲಿದೆ ಎಂದು ಎಐಡಿವೈಒ ಸಂಘಟನೆಯ ಚನ್ನಬಸವ ಜಾನೇಕಲ್, ಶರಣಪ್ಪ ಉದ್ಬಾಳ್ ತಿಳಿಸಿದ್ದಾರೆ.
ಕವನಗಳಿಗೆ ಆಹ್ವಾನ
ಸಿಂಧನೂರು: ಸಿಂಧನೂರು ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕು ಮಟ್ಟದ ಕವನ ಸಂಕಲನವನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ತಾಲೂಕಿನ ಆಸಕ್ತ ಕವಿಗಳು ಪ್ರಕಟವಾಗದ ತಮ್ಮ ಸ್ವರಚಿತ ಎರಡು ಕವನಗಳನ್ನು ಸ್ವಪರಿಚಯ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಫೆ.8ರ ಒಳಗಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀಶೈಲ್ ಕೌದಿ ಮೊ. 9972592686 ಅಥವಾ ವೀರೇಶ ಗೋನವಾರ ಮೊ. 9620091050 ಅವರ ಬಳಿ ಕೊಡಲು ಕೋರಿದ್ದಾರೆ.
ಸ್ಪರ್ಧೆಯಲ್ಲಿ ಸಾಧನೆ
ರಾಯಚೂರು: ಬೆಂಗಳೂರು ಕಬ್ಬನ್ ಪಾರ್ಕ್ನ ಬಾಲ ಭವನದಲ್ಲಿ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಭಿತ್ತಿಚಿತ್ರ ರಚನೆ ಸ್ಪರ್ಧೆಯಲ್ಲಿ ಮಾನವಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಎಂ.ಎನ್. ವಿಷ್ಣುತೀರ್ಥ ಉತ್ತಮ ಸಾಧನೆ ಮಾಡಿದ್ದಾನೆ. ಜಿಲ್ಲೆಯಿಂದ ಭಾಗವಹಿಸಿದ್ದ ಮಾನವಿ ಆದರ್ಶ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಎಂ.ಎನ್. ವಿಷ್ಣುತೀರ್ಥ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದರು. ಅದೇ ರೀತಿ ಚರ್ಚಾ ಸ್ಪರ್ಧೆಯಲ್ಲಿ ಗುರುಗುಂಟಾ ಗ್ರಾಮದ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶರಣಬಸವ ಸಮಾಧಾನಕರ ಬಹುಮಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಷ್ಣು ಹೆಸರು; ಸಂತಸ
ರಾಯಚೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಬನಶಂಕರಿ-ಕೆಂಗೇರಿ ರಸ್ತೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಡಾ. ವಿಷ್ಣುವರ್ಧನ್ ಅವರ ಹೆಸರಿಟ್ಟಿದ್ದಕ್ಕೆ ಇಲ್ಲಿನ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಸಂತಸ ವ್ಯಕ್ತಪಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಪಲುಗುಳ ನಾಗರಾಜ್, ಕಾಂಗ್ರೆಸ್ ಸರ್ಕಾರ ವಿಷ್ಣು ಸ್ಮಾರಕವನ್ನು ನಿರ್ಮಿಸಿ ಚಿತ್ರರಂಗದ ಚಟುವಟಿಕೆಯ ಕೇಂದ್ರವಾಗಿ ರೂಪಿಸಿದರೆ ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅವರು ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

