ಕೂಲಿ ದರ ಹೆಚ್ಚಳಕ್ಕೆ ಆಗ್ರಹ
ಕ.ಪ್ರ. ವಾರ್ತೆ ರಾಯಚೂರು ಫೆ.17
ಕನಿಷ್ಠ ಕೂಲಿ ದರ ಏರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ಧರಣಿ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ದೇಶದ ಮಾನವ ಸಂಪನ್ಮೂಲ ಬೆಳವಣಿಗೆ ನಿಟ್ಟಿನಲ್ಲಿ ಅಂಗನವಾಡಿ ನೌಕರರು ಕಳೆದ 38 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಇಂಥ ಮಹಿಳಾ ಶ್ರಮಿಕರ ಸೇವೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಟೀಕಿಸಿದರು.
ಜೀವನ ನಿರ್ವಹಣೆಗೆ ತೊಂದರೆ: ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಷ್ಟೇ ಅಲ್ಲ, ಸರ್ಕಾರದ ಇನ್ನಿತರ ಕೆಲಸ ಕಾರ್ಯಗಳಲ್ಲಿಯೂ ಅಂಗನವಾಡಿ ನೌಕರರ ಸೇವೆ ಪಡೆಯಲಾಗುತ್ತಿದೆ. ಇಂಥ ಒತ್ತಡದ ಮಧ್ಯೆಯೂ ಸರಿಯಾದ ಕೂಲಿಯನ್ನು ಕೆಲಸಗಾರರಿಗೆ ನೀಡುತ್ತಿಲ್ಲ. ಇದರಿಂದಾಗಿ ನೌಕರರು ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ಜ. 27ರಂದು ನಡೆದ ಅಂಗನವಾಡಿ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಬಜೆಟ್ನಲ್ಲಿ ಅಂಗನವಾಡಿ ನೌಕರರಿಗೆ 1 ಸಾವಿರ ಗೌರವಧನದಲ್ಲಿ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ಹುಸಿಗೊಳಿಸಿದ್ದಾರೆಂದು ಟೀಕಿಸಿದರು.
ನೌಕರರಿಗೆ ಸಿಎಂ ಅನ್ಯಾಯ: ಈಚೆಗೆ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಗೌರವ ಧನವನ್ನು ಕಾರ್ಯಕರ್ತರಿಗೆ 500 ಹಾಗೂ ಸಹಾಯಕರಿಗೆ 250 ಹೆಚ್ಚಳ ಮಾಡಲಾಗಿದೆ. ಆ ಮೂಲಕ ನೌಕರರಿಗೆ ಅನ್ಯಾಯ ಮಾಡಲಾಗಿದೆ. ದಿನವೂ ಆರೂವರೆ ಗಂಟೆ ದುಡಿಯುವ ನೌಕರರಿಗೆ ಸರ್ಕಾರ ಸಮರ್ಪಕ ಕೂಲಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೂಲಿ ನಿಗದಿ ಮಾಡಿಲ್ಲ. ಕೂಡಲೇ ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿ ಮಾರುಕಟ್ಟೆಯಲ್ಲಿನ ಬೆಲೆಯೇರಿಕೆಗೆ ತಕ್ಕಂತೆ ಗೌರವಧನ ಹೆಚ್ಚಳ ಮಾಡಿ ಆದೇಶ ಹೊರಡಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಎಚ್.ಪದ್ಮಾ, ವರಲಕ್ಷ್ಮಿ, ಕೆ.ಜಿ. ವೀರೇಶ್, ಸಂಧ್ಯಾ, ಪಾರ್ವತಿ, ರಂಗಮ್ಮ, ಶೇಕಮ್ಮ, ಆದಿಲಕ್ಷ್ಮಿ, ನಸೀಮಾ, ವಿಜಯಲಕ್ಷ್ಮಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

