ರಾಜ್ಯಕ್ಕೆ 60 ಸಾವಿರ ಕೋಟಿ ಆದಾಯ ತೆರಿಗೆ ಸಂಗ್ರಹ ಗುರಿ
ರಾಯಚೂರು: ದೇಶದಲ್ಲಿ 6.13 ಲಕ್ಷ ಕೋಟಿ ಆದಾಯ ತೆರಿಗೆ ಸಂಗ್ರಹವಾಗುತ್ತಿದ್ದು, ಅದರಲ್ಲಿ ಕರ್ನಾಟಕ ವಲಯದ ಪಾಲು 60 ಸಾವಿರ ಕೋಟಿ ಆಗಿದೆ ಎಂದು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಹಿರಿಯ ಆಯುಕ್ತ ಕೆ. ಸತ್ಯನಾರಾಯಣ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಆದಾಯ ತೆರಿಗೆ ಸಂಗ್ರಹದ ಒಟ್ಟು ಗುರಿ 60 ಸಾವಿರ ಕೋಟಿ ಪೈಕಿ ಈಗಾಗಲೇ 40 ಸಾವಿರ ಕೋಟಿ ಸಂಗ್ರಹಿಸಲಾಗಿದೆ. ಸಾಫ್ಟ್‌ವೇರ್, ಬ್ಯಾಂಕಿಂಗ್, ಕೈಗಾರಿಕೆಗಳಿಂದಲೇ ಹೆಚ್ಚಿನ ಪ್ರಮಾಣದ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದರು.
18 ಲಕ್ಷ ತೆರಿಗೆ ಪಾವತಿದಾರರು: ಪ್ರತಿ ವರ್ಷ ಆದಾಯ ತೆರಿಗೆ ಸಂಗ್ರಹದ ಗುರಿಯನ್ನು ವೈಜ್ಞಾನಿಕವಾಗಿ ನಿಗದಿ ಮಾಡಲಾಗುತ್ತದೆ. ತಂತ್ರಜ್ಞಾನದ ಬಳಕೆ ಮೂಲಕ ಗುರಿ ನಿಗದಿ ಮಾಡಲಾಗುತ್ತದೆ ಎಂದ ಅವರು, ಆದಾಯ ತೆರಿಗೆ ಪಾವತಿಸುವಂಥವರಿಗೆ ವಿವಿಧ ಸವಲತ್ತುಗಳನ್ನು ಒದಗಿಸುವಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದರು.
ಆದಾಯ ತೆರಿಗೆ ಇಲಾಖೆಯು ಜನಸ್ನೇಹಿಯಾಗುವತ್ತ ಹೆಚ್ಚೆಚ್ಚು ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಸೇವೆ ಕೇಂದ್ರಗಳನ್ನು ಈಗಾಗಲೇ ವಿವಿಧೆಡೆ ಆರಂಭಿಸಲಾಗುತ್ತಿದೆ ಎಂದ ಅವರು, ರಾಜ್ಯದ ಕಾರ್ಪೋರೇಟ್ ವಲಯದಲ್ಲಿ 18 ಲಕ್ಷ ತೆರಿಗೆ ಪಾವತಿದಾರರಿದ್ದಾರೆಂದು ಹೇಳಿದರು.
ತೆರಿಗೆ ಪಾವತಿ ಬಗ್ಗೆ ಜಾಗೃತಿ: ಹುಬ್ಬಳ್ಳಿ ವಲಯದ ಹಿರಿಯ ಆಯುಕ್ತ ಪಿ.ಕೆ. ಶರ್ಮಾ ಮಾತನಾಡಿ, ಬಳ್ಳಾರಿಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ನಂತರದಲ್ಲಿ ಆದಾಯ ತೆರಿಗೆ ಸಂಗ್ರಹದಲ್ಲಿ ಕುಸಿತವಾಗಿತ್ತು. ಆದರೆ ಈಚೆಗೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಗಣಿಗಾರಿಕೆ ಪುನಾ ಚಾಲನೆ ದೊರೆತಿದ್ದು, ಆದಾಯ ಸಂಗ್ರಹಣೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಗುಲ್ಬರ್ಗ ವಲಯದ ವ್ಯಾಪ್ತಿಯಲ್ಲಿರುವ ಬಳ್ಳಾರಿ ಜಿಲ್ಲೆಯಿಂದಲೇ ಹುಬ್ಬಳ್ಳಿ ವಿಭಾಗದಲ್ಲಿ ಅತೀ ಹೆಚ್ಚು ಆದಾಯ ತೆರಿಗೆ ಸಂಗ್ರಹವಾಗುತ್ತದೆ. ಒಟ್ಟು ಆದಾಯ ತೆರಿಗೆ ಸಂಗ್ರಹ ಗುರಿಯ ಶೇ.50ರಷ್ಟು ಬಳ್ಳಾರಿಯಿಂದಲೇ ಸಂಗ್ರಹವಾಗುತ್ತಿದೆ ಎಂದು ತಿಳಿಸಿ, ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಹುಬ್ಬಳ್ಳಿ ವಲಯದ ವ್ಯಾಪ್ತಿಯಲ್ಲಿನ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿದ್ದು ಅಂಥ ಉದ್ದಿಮೆಗಳಿಂದ ಯಾವುದೇ ರೀತಿಯ ತೆರಿಗೆ ಸಂಗ್ರಹವಾಗುತ್ತಿಲ್ಲ. ಒಂದೆರಡು ಸಕ್ಕರೆ ಕಾರ್ಖಾನೆಗಳು ಮಾತ್ರ ಆದಾಯ ತೆರಿಗೆ ಪಾವತಿಸುತ್ತಿವೆ. ಅಕ್ಕಿ ಗಿರಣಿಗಳಿಂದ ಸಾಕಷ್ಟು ಪ್ರಮಾಣದ ಆದಾಯ ಸಂಗ್ರಹವಾಗುತ್ತಿದೆ ಎಂದು ಅವರು ವಿವರಿಸಿದರು.
ಗುಲ್ಬರ್ಗ ವಲಯ ಕಚೇರಿಯ ಆಯುಕ್ತ ಗಣೇಶನ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

