ರಾಯಚೂರು

ಟಿಪ್ಪು ಜಯಂತಿ- ರಜೆ ನೀಡಲು ಆಗ್ರಹ; ಹೋರಾಟದ ಎಚ್ಚರಿಕೆ

Published On :

ರಾಯಚೂರು: ಎಲ್ಲ ಜಾತಿ, ಜನಾಂಗಗಳ ಮಹಾನ್ ನಾಯಕರ ಜಯಂತಿ ದಿನದಂದು ಸರ್ಕಾರ ರಜೆ ಘೋಷಿಸಿದೆ. ಆದರೆ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ ಟಿಪ್ಪು ಸುಲ್ತಾನ್ರ ಜಯಂತಿ ದಿನವನ್ನು ರಜೆ ದಿನವಾಗಿ ಘೋಷಿಸಲಾಗದು ಎಂದು ಹೇಳಿಕೆ ನೀಡಿರುವ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಜಿಲ್ಲಾ ಟಿಪ್ಪು ಸುಲ್ತಾನ್ ಸಂಘ ಒತ್ತಾಯಿಸಿದೆ.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಸಂಚಾಲಕ ಸೈಯದ್ ಹುಸೇನ್, ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಕೋಮಿನ ಅನೇಕ ನಾಯಕರು ಹೋರಾಟ ಮಾಡಿದ್ದಾರೆ. ಅಂಥವರಲ್ಲಿ 'ಮೈಸೂರಿನ ಹುಲಿ' ಟಿಪ್ಪು ಸುಲ್ತಾನ್ ಸಹ ಒಬ್ಬರಾಗಿದ್ದಾರೆ. ಅಂಥ ಮಹಾನ್ ನಾಯಕರ ಜಯಂತಿ ದಿನವನ್ನು ರಜೆ ದಿನವಾಗಿ ಘೋಷಿಸುವುದಿಲ್ಲ ಎಂದು ಸಚಿವರು ನೀಡಿದ ಹೇಳಿಕೆ ಖಂಡನೀಯ ಎಂದು ಟೀಕಿಸಿದರು.
ಆಸೆ ಮೂಡಿಸಿ ನಂತರ ನಿರಾಸೆ: ಜಾತ್ಯತೀತ ರಾಷ್ಟ್ರದಲ್ಲಿ ಮುಸ್ಲಿಂರನ್ನು ಓಲೈಸಿ ಮತ ಗಳಿಸಲು ವಿವಿಧ ಪೊಳ್ಳು ಭರವಸೆ ನೀಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿವಿ ಸ್ಥಾಪಿಸುವುದಾಗಿ ಹೇಳಿ ಈಗಾಗಲೇ ಮುಸ್ಲಿಂ ರಿಗೆ ವಂಚಿಸಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಸಹ ಮುಸ್ಲಿಂರಿಗೆ ಸುಳ್ಳು ಭರವಸೆ ನೀಡುವುದರಲ್ಲಿಯೇ ಕಾಲಹರಣ ಮಾಡಿದೆ. ಸಾಚಾರ್ ವರದಿ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಯಾವುದೇ ಸರ್ಕಾರ ಟಿಪ್ಪು ಸುಲ್ತಾನ್ ವಿವಿ ಸ್ಥಾಪನೆಯ ಬಗ್ಗೆ ಹೇಳಿಕೆ ನೀಡಿರಲಿಲ್ಲ. ಆದರೆ ಸದ್ಯದ ಸರ್ಕಾರಗಳು ಅಂಥ ಆಸೆ ಮೂಡಿಸಿ ನಂತರ ನಿರಾಸೆ ಮಾಡಿವೆ ಎಂದು ಆರೋಪಿಸಿದರು.
ಸಂಪುಟದಿಂದ ಜಯಚಂದ್ರ ವಜಾಗೊಳಿಸಿ: ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕರೆಂದು ಹೇಳಿಕೊಂಡಿದ್ದು, ಅವರು ಅಲ್ಪಸಂಖ್ಯಾತರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿಯಂದು ರಜೆ ಘೋಷಿಸಲು ಸಿಎಂ ನಿರಾಕರಿಸಿದ್ದು ಖಂಡನೀಯ ಎಂದ ಅವರು, ಟಿಪ್ಪು ಸುಲ್ತಾನ್ ರಾಜ್ಯದಲ್ಲಿ ಆಡಳಿತ ನಡೆಸಿದ ಒಬ್ಬ ಮುಸ್ಲಿಂ ಮಹಾರಾಜ ಎಂಬ ಕಾರಣಕ್ಕೆ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗದು ಎಂದು ಹೇಳಿಕೆ ನೀಡಿರುವ ಸಚಿವ ಜಯಚಂದ್ರ ವರ್ತನೆಯನ್ನು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಸಚಿವ ಜಯಚಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ನ.10ರಂದು ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಸರ್ಕಾರವೇ ಆಚರಿಸುವ ನಿಟ್ಟಿನಲ್ಲಿ ರಜೆ ಪ್ರಕಟಿಸಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಮುಸ್ಲಿಂ ಸಮಾಜದ ಪ್ರಮುಖರು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.
ತಪ್ಪಿದಲ್ಲಿ ಸರ್ಕಾರದ ವಿರುದ್ಧ ಎಲ್ಲ ಮುಸ್ಲಿಂ ಸಮಾಜದವರು ಮತ ಹಾಕುವಂತೆ ಮುಂಬರುವರ ಲೋಕಸಭೆ ಚುನಾವಣೆಯಲ್ಲಿ ಟಿಪ್ಪು ಸುಲ್ತಾನ್ ಸಂಘವು ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಆಮೀರ್ ಬೇಗ್, ಮೊಯಿನ್ ಖಾನ್, ಜಾವೇದ್ ಖಾನ್, ರಹಮತ್ ಅಲಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.