ಕೊನೆಗೂ ಅವಿಶ್ವಾಸ ಅಂಗೀಕಾರ
ರಾಯಚೂರು: ನಗರಸಭೆ ಅಧ್ಯಕ್ಷರ ಪರ ಪ್ರತಿಭಟನೆಗಳ ಹೊರತಾಗಿಯೂ ಇಲ್ಲಿನ ನಗರಸಭೆ ಅಧ್ಯಕ್ಷೆ ಮಹಾದೇವಿ ನಾಯಕ ಅವರ ವಿರುದ್ಧ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯು ಸೋಮವಾರ ನಡೆದ ಅವಿಶ್ವಾಸ ಸಭೆಯಲ್ಲಿ ಅಂಗೀಕಾರವಾಯಿತು.
ನಗರದ ನಗರಸಭೆಯ ಸಭಾಂಗಣದಲ್ಲಿ ಉಪಾಧ್ಯಕ್ಷೆ ಪದ್ಮಾವತಿ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಅವಿಶ್ವಾಸ ಸಭೆಯಲ್ಲಿ ಒಟ್ಟು 34 ಜನ ಸದಸ್ಯರ ಪೈಕಿ 33 ಜನ ಸದಸ್ಯರು ಅವಿಶ್ವಾಸದ ಪರ ಮತಗಳನ್ನು ಹಾಕುವ ಮೂಲಕ ಅವಿಶ್ವಾಸಕ್ಕೆ ಗೆಲುವಾಯಿತು ಎಂದು ಪೌರಾಯುಕ್ತ ಬಸಪ್ಪ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಕಳೆದ ತಿಂಗಳು ಜಿಲ್ಲಾಧಿಕಾರಿಗೆ ನಗರಸಭೆಯ ಸದಸ್ಯರು ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅವಿಶ್ವಾಸ ಅರ್ಜಿ ಸಲ್ಲಿಸಿದ್ದರು. ಆನಂತರ ಅಧ್ಯಕ್ಷೆ ಮಹಾದೇವಿ ನಾಯಕ ಅವರೂ ಜಿಲ್ಲಾಡಳಿತಕ್ಕೆ ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಯಾಗಿ ಮೌನ ಪ್ರತಿಭಟನೆ ಮೂಲಕ ಪ್ರತ್ಯಾರೋಪ ಮಾಡಿದ್ದರು. ಅದಕ್ಕೆ ಮತ್ತೆ ಸದಸ್ಯರು ಜಿಲ್ಲಾಡಳಿತಕ್ಕೆ ಸಮಜಾಯಿಷಿ ನೀಡಿದ್ದರು. ಆನಂತರ ಅಧ್ಯಕ್ಷರು ಅವಿಶ್ವಾಸ ಸಭೆ ಕರೆಯದೇ ಹೋಗಿದ್ದರಿಂದ ಉಪಾಧ್ಯಕ್ಷರಿಗೆ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯಲು ಸದಸ್ಯರು ಮನವಿ ಮಾಡಿದ್ದರು. ಅದರಂತೆಯೇ ಉಪಾಧ್ಯಕ್ಷರು ಸೋಮವಾರ ಸಭೆ ನಿಗದಿಗೊಳಿಸಿದ್ದರು.
ಸಭೆ ನಿಗದಿಯಾಗುತ್ತಿದ್ದಂತೆಯೇ ನಗರಸಭೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದ ಎಲ್ಲ ಸದಸ್ಯರು ಪ್ರವಾಸ ಕೈಗೊಂಡಿದ್ದರು. ಸಭೆಯ ದಿನವಾದ ಸೋಮವಾರವಷ್ಟೇ ನಗರಕ್ಕೆ ಆಗಮಿಸಿ ಅವಿಶ್ವಾಸ ಸಭೆಯಲ್ಲಿ ಪಾಲ್ಗೊಂಡರು. ಇದಕ್ಕೂ ಪೂರ್ವದಲ್ಲಿ ಅವಿಶ್ವಾಸ ಸಭೆಯಲ್ಲಿ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಮೊದಲಿಗೆ ಉಪಾಧ್ಯಕ್ಷರ ಕೊಠಡಿಯಲ್ಲಿ ಸದಸ್ಯರು ಪರಸ್ಪರ ಚರ್ಚೆ ನಡೆಸಿದರು.
ಸದಸ್ಯರ ಬಲಾಬಲ: ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ನ 14, ಬಿಜೆಪಿಯ 7 ಹಾಗೂ ಜೆಡಿಎಸ್ನ 9 ಹಾಗೂ ಪಕ್ಷೇತರರು ಐವರಿದ್ದು, ಸದಸ್ಯ ಗೋರಾ ಮಾಸೂಮ್ ಹೊರತುಪಡಿಸಿ ಉಳಿದವರು ಸಭೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದರು.
ಬಿಗಿ ಕಾವಲು: ನಗರಸಭೆಯ ಅವಿಶ್ವಾಸ ಸಭೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆ ತಡೆಯಲು ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಾರ್ವಜನಿಕರನ್ನು ನಗರಸಭೆಯ ಸಭಾಂಗಣದತ್ತ ಸುಳಿಯದಂತೆ ತಡೆಯೊಡ್ಡಲಾಗಿತ್ತು. ಅಷ್ಟೇ ಅಲ್ಲ ಮಾಧ್ಯಮದವರನ್ನೂ ಸಭಾಂಗಣದತ್ತ ತೆರಳಲು ಅವಕಾಶ ನೀಡದ ಪೊಲೀಸರು, ಅವಿಶ್ವಾಸ ಸಭೆಯ ನಂತರವೂ ಮಾಧ್ಯಮದವರಿಗೆ ಮಾಹಿತಿ ಪಡೆಯಲು ಅವಕಾಶ ನೀಡದ್ದರಿಂದ ಕೆಲಕಾಲ ಮಾಧ್ಯಮದವರು ಮತ್ತು ಪೊಲೀಸರ ಮಧ್ಯೆ ವಾಗ್ಯುದ್ಧ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

