ರಾಯಚೂರು

20 ತಿಂಗಳಲ್ಲಿ ಸ್ವಚ್ಛ, ಜನಪರ ಆಡಳಿತ ನೀಡಿ

Published On :

ಸಿಂಧನೂರು: ನೂತನವಾಗಿ ಆಯ್ಕೆಯಾದ ಜಿಪಂ ಅಧ್ಯಕ್ಷೆ- ಉಪಾಧ್ಯಕ್ಷರು ತಮ್ಮ 20 ತಿಂಗಳ ಆಡಳಿತಾವಧಿಯಲ್ಲಿ ಸರ್ಕಾರದ ವಿವಿಧ ಅನುದಾನದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಸ್ವಚ್ಛ, ಜನಪರ ಆಡಳಿತ ನೀಡಬೇಕೆಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಸಲಹೆ ನೀಡಿದರು.
ತಾಲೂಕಿನ ಗೊರೇಬಾಳ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಜಿಪಂ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷೆ ಸರೋಜಮ್ಮ ಬಸವರಾಜ, ಉಪಾಧ್ಯಕ್ಷ ಜಾಫರ್ ಪಟೇಲರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಸರ್ಕಾರದ ಅನುದಾನ ದುರ್ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಅಭಿವೃದ್ಧಿಗೆ ಮಂಜೂರಾದ ಹಣವನ್ನು ಫಲಾನುಭವಿಗಳಿಗೆ ತಲುಪುವಂತೆ ಜಾಗೃತಿ ವಹಿಸಬೇಕು. ಕಾನೂನು ಉಲ್ಲಂಘಿಸುವ ಅಧಿಕಾರಿ ವರ್ಗ ಮತ್ತಿತರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿ ಅಭಿವೃದ್ಧಿ ಇಲಾಖೆಗಳಿಗೆ ಅಧಿಕಾರಿಗಳೇ ಇಲ್ಲ. ಜಿಲ್ಲಾಧಿಕಾರಿಗಳು ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷರಿಗೆ ಪರಮಾಧಿಕಾರ: ಈ ದೇಶದ ಪ್ರಧಾನಮಂತ್ರಿ ಸೇರಿದಂತೆ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಚೆಕ್‌ಗೆ ಸಹಿ ಮಾಡುವ ಅಧಿಕಾರ ಹೊಂದಿಲ್ಲ. ಆದರೆ ಗ್ರಾಪಂ ಅಧ್ಯಕ್ಷರ ಸಹಿ ಇಲ್ಲದೆ ನಯಾಪೈಸೆ ಹಣ ಖರ್ಚಾಗುವುದಿಲ್ಲ. ಇಂತಹ ಪರಮಾಧಿಕಾರ ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಮಂಡಲ ಪಂಚಾಯಿತಿ ಪ್ರಧಾನನಾಗಿ ನಿರ್ವಹಿಸಿದಷ್ಟು ತೃಪ್ತಿ ಶಾಸಕನಾಗಿಯೂ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.
ಪಂಚಾಯಿತಿ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸಿದರೆ ಮುಂದಿನ ದಿನಗಳಲ್ಲಿ ನ್ಯಾಯ ಪಂಚಾಯಿತಿ ಅಧಿಕಾರವೂ ಸಿಗುವ ಸಂಭವಗಳಿವೆ. ಕಾರಣ ಸೇವಾ ಮನೋಭಾವನೆಯಿಂದ ಗ್ರಾಪಂ ಆಡಳಿತ ಮಂಡಳಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ವರ್ಷದ ಅಲೆದಾಟ: ಗೊರೇಬಾಳ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಕಡುಬಡವರು ಮನೆ ಕಟ್ಟಿಸಿಕೊಂಡು ವರ್ಷ ಕಳೆದರೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಫಲಾನುಭವಿಗಳು ಗ್ರಾಪಂಗೆ ಅಲೆಯುತ್ತಿದ್ದಾರೆ. ಉತ್ತರ ಹೇಳಲು ನಾಚಿಕೆ ಬರುತ್ತದೆ. 20 ದಿನಗಳಲ್ಲಿ ಮನೆ ಕಟ್ಟಿಸಿಕೊಂಡ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಗ್ರಾಪಂ ಅಧ್ಯಕ್ಷ ಸಿಂಹಾದ್ರಿ ಕೃಷ್ಣಮೂರ್ತಿ ಅವರು ಜಿಪಂ ಅಧ್ಯಕ್ಷೆ- ಉಪಾಧ್ಯಕ್ಷರಲ್ಲಿ ಮನವಿ ಮಾಡಿದರು.
ಚೆನ್ನಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತೆಮ್ಮ ಮಲ್ಲನಗೌಡ, ಉಪಾಧ್ಯಕ್ಷ ರಾಮಣ್ಣ ಭೋವಿ, ಗೊರೇಬಾಳ ಗ್ರಾಪಂ ಉಪಾಧ್ಯಕ್ಷೆ ದೇವೇಂದ್ರಮ್ಮ, ಜಿಪಂ ಮಾಜಿ ಸದಸ್ಯ ಅಮರೇಶ ಅಂಗಡಿ, ತಾಪಂ ಮಾಜಿ ಅಧ್ಯಕ್ಷ ಅಯ್ಯನಗೌಡ ಆಯನೂರು, ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ಎಂ.ಲಿಂಗಪ್ಪ, ಎಂ.ನಾಗೇಶ, ಸತ್ಯನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.