ನಾಯಕತ್ವ, ಅಭಿವೃದ್ಧಿ ತರಬೇತಿ ಕಾರ್ಯಕ್ರಮ
ರಾಯಚೂರು: ಭಾರತ ಸರ್ಕಾರದ ಸ್ಥಾಯಿ ಸಂಸ್ಥೆ ನೆಹರು ಯುವ ಕೇಂದ್ರ ರಾಯಚೂರು, ಶ್ರೀ ಬಸವೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಸಿರವಾರ, ವಂದೇ ಮಾತರಂ ಯುವಕ ಸಂಘ, ಗೆಳೆಯರ ಬಳಗ, ಆಜಾದ್, ಫೈರ್ ಬಾಯ್ಸ್ ಯುವಕ ಸಂಘ, ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಮಾನವಿ ತಾಲೂಕಿನ ಸಿರವಾರದಲ್ಲಿ ಯುವ ನಾಯಕತ್ವ ಹಾಗೂ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತರಬೇತಿ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿ ಮಹಿಬೂಬ್ ಜಿಲಾನಿ ಮಾತನಾಡಿ, ಯುವಕರು ಉನ್ನತ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ನಾಯಕತ್ವ ಗುಣ ಅಳವಡಿಸಿಕೊಂಡು ಜೀವನದಲ್ಲಿ ಪ್ರಗತಿ ಹೊಂದುವಂತೆ ಸಲಹೆ ನೀಡಿದರು. ಉಪನ್ಯಾಸಕರಾದ ದಾವೂದ್, ಶಿವರಾಜ್, ಫಕ್ರೂದ್ದೀನ್ ಸೇರಿ ಅನೇಕರಿದ್ದರು.
ಮಹ್ಮದ್ ಉಸ್ಮಾನ್ ಸಾಬ್ ನಿಧನ
ದೇವದುರ್ಗ: ಕಂದಾಯ ಇಲಾಖೆ ನಿವೃತ್ತ ಕಂದಾಯ ನಿರೀಕ್ಷಕ ಮಹ್ಮದ್ ಉಸ್ಮಾನ್ ಸಾಬ್ (78) ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ಅನೇಕ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆಂದು ಕುಟುಂಬದವರು ತಿಳಿಸಿದ್ದಾರೆ. ಮೃತರಿಗೆ ಪತ್ನಿ, 7 ಜನ ಪುತ್ರರಿದ್ದಾರೆ. ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕಕ್ಕೆ ಅಮ್ಜದ್ಖಾನ್ ನೇಮಕ
ಸಿಂಧನೂರು: ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷರನ್ನಾಗಿ ಅಮ್ಜದ್ಖಾನ್ ಅವರನ್ನು ನೇಮಕ ಮಾಡಲಾಗಿದೆ ಎಂದು ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ಹೇಳಿದರು. ನಗರದ ಶಾಸಕರ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷರಿಗೆ ಸನ್ಮಾನಿಸಿ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕೆಪಿಸಿಸಿ ಸೂಚನೆ ಮೇರೆಗೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ ಪಕ್ಷ ಸಂಘಟನೆಗೆ ಒತ್ತು ನೀಡಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನಯೋಪ್ರಾ ಅಧ್ಯಕ್ಷ ಎಸ್.ಶರಣೇಗೌಡ, ನಗರಸಭೆ ಅಧ್ಯಕ್ಷ ಸೈಯದ ಜಾಫರ್ ಅಲಿ ಜಾಗೀರದಾರ, ಕೊಪ್ಪಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಉಪಾಧ್ಯಕ್ಷ ಸಿದ್ದಲಿಂಗೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಮುರ್ತುಜಾಸಾಬ್, ಯೂತ್ ನಗರ ಘಟಕದ ಅಧ್ಯಕ್ಷ ಶಾಹೀನ್, ನಯೋಪ್ರಾ ಸದಸ್ಯ ವೀರೇಶ ಶಿಳ್ಳಿ, ನಗರಸಭೆ ಸದಸ್ಯ ವೆಂಕಟೇಶ ದತ್ತುರಾವ್ ಇದ್ದರು.
ಐಐಟಿ ಸ್ಥಾಪನೆಗೆ ಕಡೆಗಣನೆ: ಆರೋಪ
ರಾಯಚೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಐಐಟಿ ಸ್ಥಾಪನೆ ಕುರಿತು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಪ್ರಸ್ತಾಪಿಸದೆ ಅನ್ಯಾಯ ಮಾಡಲಾಗಿದೆ ಎಂದು ಐಐಟಿ ಮಂಜೂರಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಳಸ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಡಿ.ಎಂ. ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಐಐಟಿ ಸ್ಥಾಪನೆಗೆ ಶಿಫಾರಸು ಮಾಡಲಾಗಿತ್ತು. 2012ರಲ್ಲಿ ಬಿಜೆಪಿ ಸರ್ಕಾರ ಗುಲ್ಬರ್ಗದಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಐಐಟಿ ಸ್ಥಾಪನೆಗೆ ತೀರ್ಮಾನಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿತ್ತು. ಆದರೆ ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ಟೀಕಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಕೇವಲ ಹೇಳಿಕೆಗೆ ಸೀಮಿತವಾಗಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಜಿಲ್ಲೆಗೆ ಐಐಟಿ ಸ್ಥಾಪಿಸುವ ಕುರಿತು ಪ್ರಸ್ತಾವನೆ ಮಾಡದೆ ಅನ್ಯಾಯ ಮಾಡಲಾಗಿದೆ ಎಂದು ದೂರಿದ್ದಾರೆ.
ವಕೀಲರ ಸಂಘದ ಬೇಡಿಕೆಗಾಗಿ ಆಗ್ರಹ
ದೇವದುರ್ಗ: ಗುಲ್ಬರ್ಗ ಉಚ್ಚ ನ್ಯಾಯಾಲಯದ ವಕೀಲರ ಸಂಘವು ಮಂಡಿಸಿರುವ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ದೇವದುರ್ಗ ವಕೀಲರ ಸಂಘ ಮನವಿ ಸಲ್ಲಿಸಿದೆ. ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಗುಲ್ಬರ್ಗ ಉಚ್ಚ ನ್ಯಾಯಾಲಯದ ವ್ಯಾಪ್ತಿಗೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಸೇರಿಸಬೇಕು. ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ ಪೀಠವನ್ನು ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕೆಂದು ಈ ವೇಳೆ ಆಗ್ರಹಿಸಿದರು. ದೇವದುರ್ಗ ವಕೀಲರ ಸಂಘದ ಅಧ್ಯಕ್ಷ ಬಸನಗೌಡ ದೇಸಾಯಿ, ಪ್ರಧಾನ ಕಾರ್ಯದರ್ಶಿ ಬಿ.ಆರ್. ಮನ್ನಾಪೂರಿ, ಅಮರೇಗೌಡ ಬೆರೀಗಿ, ಶುಕುಮುನಿರಡ್ಡಿ, ಗುರುರಾಜ ಇದ್ದರು.
ಹೆಚ್ಚಿನ ಅಧ್ಯಯನದಿಂದ ಸಾಧನೆ ಸಾಧ್ಯ: ಶಿವಂಗಿ
ದೇವದುರ್ಗ: ನಿರಂತರ ಅಧ್ಯಯನ, ಸತತ ಪರಿಶ್ರಮ, ಸಮಯದ ಸದುಪಯೋಗ, ಪ್ರಾಮಾಣಿಕತೆ ಯನ್ನು ಮೈಗೂಡಿಸಿಕೊಂಡರೆ ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯವೆಂದು ಡಯಟ್ನ ಪ್ರಮುಖರಾದ ರಾಮಚಂದ್ರಪ್ಪ ಶಿವಂಗಿ ಕರೆ ನೀಡಿದರು. ಇತ್ತೀಚೆಗೆ ಪಟ್ಟಣದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಬಸವೇಶ್ವರ ಡಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಸಮನ್ವಯ ಸಮಿತಿ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯಲ್ಲಿ ತರಬೇತಿ ಹೊಂದುತ್ತಿರುವ ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪನ್ಯಾಸಕ ಅಂಜನಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಚಾರ್ಯ ಬಸವರಾಜ ಬ್ಯಾಗವಾಟ್ ವಹಿಸಿದ್ದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿದ್ದರು.
ಗೊಂದಳಿ ಸಮಾಜದ ತಾಲೂಕು ಸಮಿತಿ ಅಸ್ತಿತ್ವಕ್ಕೆ
ಸಿಂಧನೂರು: ನಗರದ ಪ್ರಶಾಂತನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಗೊಂದಳಿ ಸಮಾಜದವರ ಸಭೆಯಲ್ಲಿ ಅಖಿಲ ಕರ್ನಾಟಕ ಗೊಂದಳಿ ಸಮಾಜ ತಾಲೂಕು ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ರವಿ ಕೆ. ಶಿಂಧೆ, ಗೌರವಾಧ್ಯಕ್ಷರಾಗಿ ಅಪ್ಪಣ್ಣ ಪಾಚಂಗೆ, ಉಪಾಧ್ಯಕ್ಷ ಸಿದ್ದರಾಮ ಕಾಂಬಳೆ, ಕಾರ್ಯದರ್ಶಿರಾಗಿ ಪರಶುರಾಮ ಸುರ್ವೆ, ಸಹ ಕಾರ್ಯದರ್ಶಿಯಾಗಿ ವಿನೋದ ಬಿಸ್ಸೆ, ಖಜಾಂಚಿಯಾಗಿ ಶಿವಕುಮಾರ ಪಾಚಂಗೆ, ಮಹಿಳಾ ಸಮಿತಿ ಅಧ್ಯಕ್ಷರಾಗಿ ಶ್ರೀದೇವಿ ಕಾಂಬಳೆ ಹಾಗೂ ಭೀಮರಾವ್ ನವರಕೆಲೆ ಸೇರಿದಂತೆ ಐವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ಅಲೆಮಾರಿಯಾಗಿ ಬದುಕುತ್ತಿರುವ ಗೊಂದಳಿ ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಮಾಜದವರಲ್ಲಿ ಜಾಗೃತಿ ಮೂಡಿಸಿ ಸರ್ಕಾರಿ ಸೌಲಭ್ಯಗಳಿಗಾಗಿ ಹೋರಾಟ ರೂಪಿಸುವಲ್ಲಿ ಕ್ರಿಯಾಶೀಲರಾಗುವಂತೆ ಕಾರ್ಯದರ್ಶಿ ಗೋಪಾಲ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

