ಜ್ವಲಂತ ಸಮಸ್ಯೆ ಪರಿಹಾರಕ್ಕೆ ಸಿಎಂ ಭೇಟಿ: ಗುಡಿಹಾಳ
ಲಿಂಗಸ್ಗೂರು: ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಪರಿಹರಿಸುವಂತೆ ಆಗ್ರಹಿಸಲು ಕರ್ನಾಟಕ ರಾಜ್ಯ ರೈತ ಸಂಘದಿಂದ ಮುಖ್ಯಮಂತ್ರಿ ಭೇಟಿ ಮಾಡಿ ಒತ್ತಾಯಿಸಲಾಗುವುದೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಹೇಳಿದರು.
ಪಟ್ಟಣದಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣಾ, ತುಂಗಭದ್ರಾ, ಭೀಮಾ, ಮಲಪ್ರಭ, ಘಟಪ್ರಭ ನದಿಗಳು ಹರಿಯುತ್ತಿದ್ದರೂ ಈ ಭಾಗದ ಜಿಲ್ಲೆಗಳು ಸಂಪೂರ್ಣ ನೀರಾವರಿ ಒಳಪಡದಿರುವುದು ದುರಂತದ ಸಂಗತಿ. ನಾರಾಯಣಪೂರ ಬಲದಂಡೆ ಕಾಲುವೆ ಆಧುನೀಕರಣಗೊಳಿಸಿ 95ರಿಂದ 162 ಕಿ.ಮೀ.ವರೆಗೆ ವಿಸ್ತರಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಗಣನೆಗೆ ತೆಗೆದುಕೊಂಡಿಲ್ಲ. ರಾಂಪೂರ ಏತ ನೀರಾವರಿ ಕಾಲುವೆ ಆಧುನೀಕರಣಗೊಳಿಸಬೇಕಿದೆ. ಕಾಟಾಚಾರದ ದುರಸ್ತಿಯಿಂದ ರೈತರ ಹೊಲಗಳಿಗೆ ನೀರು ತಲುಪದೆ ತೊಂದರೆ ಅನುಭವಿಸುವಂತಾಗಿದೆ. ನಂದವಾಡಗಿ ಏತ ನೀರಾವರಿ ಮೂಲ ಯೋಜನೆ ಪ್ರಕಾರ ಜಾರಿಗೆ ತರುವಂತೆ ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಕಾರ್ಯೋನ್ಮುಖವಾಗಿಲ್ಲ ಎಂದು ಆರೋಪಿಸಿದರು.
ಈ ಭಾಗದ ಜಿಲ್ಲೆಗಳು ಪದೇ ಪದೇ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಅಕಾಲಿಕ ಆಲಿಕಲ್ಲು ಮಳೆಯಿಂದ ರೈತರ ಬೆಳೆಗಳು ಹಾನಿಗಿ ಸಾಲದ ಬಾಧೆಗೆ ತುತ್ತಾಗುತ್ತಿದ್ದಾರೆ. ರೈತ ಸಂಪೂರ್ಣ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಂಪೂರ ಏತ ನೀರಾವರಿ ಸಮಗ್ರ ದುರಸ್ತಿ ಮಾಡಬೇಕು. ತುಂಗಭದ್ರಾ ಎಡದಂಡೆ ಕಾಲುವೆಯಿಂದ ಅನಧಿಕೃತ ನೀರು ಪಡೆಯುವುದನ್ನು ನಿಲ್ಲಿಸಿ ಕೊನೆ ಭಾಗದ ರೈತರ ಜಮೀನಿಗೆ ನೀರು ತಲುಪುವಂತಾಗಬೇಕು. ಶೇ.75ರ ಸಹಾಯಧನದಲ್ಲಿ ಸೌರಶಕ್ತಿ ಪಂಪ್ಸೆಟ್ ಒದಗಿಸಬೇಕು. ಮುಂಗಾರು ಮಳೆ ಸಕಾಲಕ್ಕೆ ಬಾರದೆ ಬಲಗಾಲಕ್ಕೆ ತುತ್ತಾಗುವ ಸಾಧ್ಯತೆಯಿದ್ದು, ಆಹಾರ ಧಾನ್ಯ ಸಂಗ್ರಹಣೆ ಜೊತೆಗೆ ಮೇವು ಸಂಗ್ರಹಣೆ ಮಾಡಬೇಕೆಂಬ ಹಲವು ಸಮಸ್ಯೆಗಳ ಪರಿಹಾರ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದೆಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

