ರಾಯಚೂರು

ದುಶ್ಚಟ ಬಿಡಿ, ನಾಡ ಸೇವೆಗೆ ಅಣಿಯಾಗಿ: ಗವಿಮಠ ಶ್ರೀ

Published On :

ಸಿಂಧನೂರು: ಅನೇಕ ಯುವಕರು ದುಶ್ಚಟಗಳಿಗೆ ಮಾರುಹೋಗಿದ್ದು, ಅವುಗಳಿಂದ ದೂರವಾಗಿ ನಾಡಿನ ಸೇವೆಗೆ ಮುಂದಾಗಬೇಕೆಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಗೊಣ್ಣಿಗನೂರು ಗ್ರಾಮದಲ್ಲಿ ರುದ್ರಗೌಡ ಪಾಟೀಲ್ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಗೊಣ್ಣಿಗನೂರು ಗ್ರಾಮ ದತ್ತು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಆಧುನಿಕ ಯುಗದಲ್ಲಿ ಯುವಕರ ಪಾತ್ರ ಬಹು ಮುಖ್ಯ. ಈ ನಿಟ್ಟಿನಲ್ಲಿ ಸೇವೆಗಾಗಿ ಸದಾ ಸಿದ್ಧರಾಗಿರಬೇಕು. ಯುವಕರಿಗೆ ಸರಿಯಾದ ಮಾರ್ಗದರ್ಶನ, ಸೌಲಭ್ಯ ದೊರಕದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣದ ಮೂಲಕ ಬಾಳಲ್ಲಿ ಬೆಳಕು ಮೂಡಿಸಲು ಎಲ್ಲರೂ ಮುಂದಾಗಬೇಕು ಎಂದರು.
ಶ್ರೀಮಠದಿಂದ ನೆರವು: ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆಶ್ರಯ ಕಲ್ಪಿಸಲು ಕೊಪ್ಪಳ ಗವಿಸಿದ್ದೇಶ್ವರ ಮಠ ನೆರವು ನೀಡುತ್ತದೆ. ದತ್ತು ಗ್ರಾಮವನ್ನಾಗಿ ಸ್ವೀಕಾರ ಮಾಡಿಕೊಂಡ ಡಾ. ಚನ್ನನಗೌಡರು ಈ ಗ್ರಾಮದ ಜನರ ನಿರೀಕ್ಷೆಗೆ ತಕ್ಕಂತೆ ಸೇವೆ ಒದಗಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೇತ್ರತಜ್ಞ ಡಾ. ಚನ್ನನಗೌಡ ಪಾಟೀಲ್ ಮಾತನಾಡಿ, ನಾಲ್ಕು ವರ್ಷದ ಹಿಂದೆ ಈ ಗ್ರಾಮಕ್ಕೆ ಭೇಟಿ ಕೊಟ್ಟಾಗ ಜನರು ತಮ್ಮ ಸಮಸ್ಯೆಗಳನ್ನು ಹೇಳಿದ್ದರು. ಶಿಕ್ಷಣ, ಶೌಚಾಲಯ, ನೀರಿನ ಕೊರತೆಯಿಲ್ಲದೆ ರೋಗಕ್ಕೆ ತುತ್ತಾಗುತ್ತಿದ್ದು, ಈ ಸಮಸ್ಯೆ ಹೋಗಲಾಡಿಸಬೇಕೆಂಬ ದೃಷ್ಟಿಯಿಂದ ರುದ್ರಗೌಡ ಪಾಟೀಲ್ ಪ್ರತಿಷ್ಠಾನದ ವತಿಯಿಂದ ಈ ಗ್ರಾಮವನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಷ್ಠಾನದಿಂದ ಸಹಾಯ: 300- 350 ಜನರು ವಾಸಿಸುವ ಗ್ರಾಮದಲ್ಲಿ 70-80 ಯುವಕರು, ಸುಮಾರು 200 ಹಿರಿಯರು ವಾಸ ಮಾಡುತ್ತಿದ್ದಾರೆ. ಪ್ರತಿ ಮನೆಗೂ ಶೌಚಾಲಯ ಒದಗಿಸುವುದೇ ತಮ್ಮ ಮೊದಲ ಗುರಿಯಾಗಿದೆ. ಇಲ್ಲಿ ಕಿರಿಯ ಹಾಗೂ ಪ್ರಾಥಮಿಕ ಶಾಲೆ ತೆರೆಯುವ ಕನಸಿದೆ. ಗ್ರಾಮದ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಒದಗಿಸಿದ್ದೇವೆ. ಕಣ್ಣಿನ ತೊಂದರೆ, ಅಪೆನ್ ಡಿಕ್ಸ್, ಸೀಜರಿನ್ ಮುಂತಾದ ರೋಗಗಳ ಸಮಸ್ಯೆಗಳು ಇದ್ದಾಗ ಸಿಂಧನೂರು ನಗರಕ್ಕೆ ಬರುವಾಗ ಗುರುತಿನ ಚೀಟಿಯನ್ನು ತಪ್ಪದೇ ತಂದರೆ ಉಚಿತವಾಗಿ ಸಹಾಯ ಒದಗಿಸುತ್ತೇವೆ ಎಂದು ಹೇಳಿದರು.
ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯರು, ರೌಡಕುಂದ ಶಾಖಾ ಮಠದ ಮರಿಸಿದ್ದಲಿಂಗ ಸ್ವಾಮೀಜಿ, ತಹಸೀಲ್ದಾರ್ ಜಗನ್ನಾಥರೆಡ್ಡಿ, ಶಿಕ್ಷಕ ಕೊಟ್ರೇಶ ಹಿರೇಮಠ ಮಾತನಾಡಿದರು. ಒಳಬಳ್ಳಾರಿ ಸಿದ್ದಲಿಂಗ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ಯಾರ್ಥಿ ಕುಮಾರ ನಾಗಲಿಂಗಯ್ಯ ಪ್ರಾರ್ಥಿಸಿದರು. ಬಸವರಾಜ ಗಸ್ತಿ ಸ್ವಾಗತಿಸಿ, ಮೈಲಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.