ರಾಯಚೂರು

ನಗರ ಸಾರಿಗೆ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ. ವಾರ್ತೆ    ರಾಯಚೂರು    ಮಾ.12
ನಗರದ ಬಸವೇಶ್ವರ ವೃತ್ತದಲ್ಲಿನ ರೇಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದರೂ ಮೊದಲು ಹೆಚ್ಚಳ ಮಾಡಿದ್ದ ದರ ಸಾರಿಗೆ ಬಸ್‌ಗಳಲ್ಲಿ ವಸೂಲು ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಸಿಟಿ ಬಸ್ ಸಂಚಾರವನ್ನು ವಿವಿಧ ಬಡಾವಣೆಗಳಿಗೆ ವಿಸ್ತರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂಡಿಗೆ ಮನವಿ ಸಲ್ಲಿಸಿ, ಕಳೆದ ವರ್ಷ ಬಸವೇಶ್ವರ ವೃತ್ತದ ಬಳಿಯ ರೇಲ್ವೆ ಮೇಲ್ಸೇತುವೆ ನಿರ್ಮಾಣ ಆರಂಭಗೊಂಡಿದ್ದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳು ಲಿಂಗಸ್ಗೂರು ಮತ್ತಿತರೆ ಊರುಗಳಿಗೆ ತೆರಳಲು ಸುತ್ತು ಬಳಸಿ ಸಾಗುವಂತಾಗಿತ್ತು. ಆ ಹಿನ್ನೆಲೆಯಲ್ಲಿ ಪ್ರಯಾಣಿಕರ ಮೇಲೆ ಹೆಚ್ಚುವರಿಯಾಗಿ ಪ್ರಯಾಣ ದರವನ್ನು ಸಾರಿಗೆ ಸಂಸ್ಥೆ ವಿಧಿಸಿತ್ತು ಎಂದು ತಿಳಿಸಿದರು.
ಪ್ರಯಾಣಿಕರಿಂದ ವಸೂಲು: ಕಳೆದ 12 ದಿನಗಳಿಂದ ಬಸವೇಶ್ವರ ವೃತ್ತದ ಬಳಿಯ ರೇಲ್ವೆ ಮೇಲ್ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೂ ಸಾರಿಗೆ ಸಂಸ್ಥೆಯು ಮಾತ್ರ ಈ ಮೊದಲು ಮಾಡಿದ್ದ ಬದಲಾವಣೆಯ ಹೆಚ್ಚುವರಿ ದರವನ್ನೇ ಪ್ರಯಾಣಿಕರಿಂದ ವಸೂಲು ಮಾಡುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಅಗತ್ಯಕ್ಕಿಂತ ಹೆಚ್ಚಿನ ದರ ನಿಗದಿ ಮಾಡಿದ್ದರಿಂದ ಸಂಘಟನೆಯಿಂದ ಹೋರಾಟ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯು ಸದ್ಯಕ್ಕೆ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತಿದ್ದಂತೆಯೇ ದರ ಪುನಃ ಕಡಿತಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಸಿಲ್ಲ ಎಂದು ಟೀಕಿಸಿದರು.
ಒಂದೆರಡು ಮಾರ್ಗಗಳಲ್ಲಿ ಮಾತ್ರ ಬಸ್ ಸಂಚಾರ: ಕಾರಣ ಕೂಡಲೇ ಈ ಹಿಂದೆ ಸಂಸ್ಥೆಯು ಪ್ರಯಾಣಿಕರಿಗೆ ಹೊರಿಸಿದ್ದ 1 ಸ್ಟೇಜ್‌ನ ಹೆಚ್ಚುವರಿ ದರ 6 ಕೂಡಲೇ ಕಡಿತಗೊಳಿಸಿ ಮೊದಲಿನ ದರದಲ್ಲಿಯೇ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಹೋರಾಟಗಾರರು ಸಾರಿಗೆ ಸಂಸ್ಥೆಯನ್ನು ಒತ್ತಾಯಿಸಿದರು.
ನಗರದಲ್ಲಿ ಕೆಲ ತಿಂಗಳ ಹಿಂದೆ ರಾಯರಥ ನಗರ ಸಾರಿಗೆ ಸೌಲಭ್ಯವನ್ನು ಸಾರಿಗೆ ಸಂಸ್ಥೆಯು ಕಲ್ಪಿಸಿರುವುದು ಎಲ್ಲರಿಗೂ ಅನುಕೂಲ ಉಂಟು ಮಾಡಿದೆ. ಆದರೆ  ಸಾಕಷ್ಟು ಸಂಖ್ಯೆಯ ನಗರ ಸಾರಿಗೆ ಬಸ್‌ಗಳು ಲಭ್ಯವಿದ್ದರೂ ಸಂಸ್ಥೆಯು ಕೇವಲ ಒಂದೆರಡು ಮಾರ್ಗಗಳಲ್ಲಿ ಮಾತ್ರ ಬಸ್ ಸಂಚರಿಸುತ್ತಿವೆ ಎಂದು ದೂರಿದರು.
ಅನುಕೂಲ ಕಲ್ಪಿಸಿ: ನಗರದ ಅನೇಕ ಬಡಾವಣೆಗಳಿಗೆ ಈಗಲೂ ನಗರ ಸಾರಿಗೆ ಸಂಸ್ಥೆಯ ಬಸ್‌ಗಳು ತೆರಳುತ್ತಿಲ್ಲ. ಅದರಿಂದ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕೂಡಲೇ ನಗರದ ನಿಜಲಿಂಗಪ್ಪ ಕಾಲೋನಿ, ಬಸವೇಶ್ವರ ಕಾಲನಿ, ಅಸ್ಕಿಹಾಳ, ಯಕ್ಲಾಸಪುರ, ರಾಂಪುರ, ಚಂದ್ರಬಂಡಾ ಆಶ್ರಯ ಕಾಲೋನಿ ಸೇರಿದಂತೆ ವಿವಿಧೆಡೆ ನಗರ ಸಾರಿಗೆ ಬಸ್‌ಗಳು ತೆರಳಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ಕೂಡಲೇ ಸಾರಿಗೆ ಸಂಸ್ಥೆಯು ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ನಗರ ಸಾರಿಗೆ ಬಸ್ ಗಳ ಸಂಚಾರದ ಮೂಲಕ ಜನತೆಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್, ಖಲೀಲ್ ಪಾಷಾ, ಮಾನಸಿಂಗ್ ಠಾಕೂರ್, ಕೆ. ಕಿಶನ್‌ರಾವ್, ರಘುವೀರನಾಯಕ, ಮಲ್ಲಿಕಾರ್ಜುನ, ನಾಗರಾಜ ಬಿಚ್ಚಾಲಿ, ಹಾಜಿ ಮಸ್ತಾನ್, ನಿಸಾರ್ ಬಂದರ್‌ಗಲ್ಲಿ, ಎಸ್.ಎಂ. ಖಾನ್, ಗೋಪಿಗೌಡ, ಸಾಗರ್, ಶಶಿ, ಮುರಳಿ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.