ಸ್ಮಶಾನ ಜಾಗ ಅತಿಕ್ರಮಣ ತೆರವಿಗೆ ಆಗ್ರಹ
ರಾಯಚೂರು: ನಗರದ ಆಶಾಪೂರ ರಸ್ತೆಯಲ್ಲಿರುವ ಸ್ಮಶಾನ ಜಾಗವನ್ನು ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿಕೊಂಡಿದ್ದು ಕೂಡಲೇ ಸ್ಮಶಾನ ಜಾಗ ತೆರವುಗೊಳಿಸುವಂತೆ ಒತ್ತಾಯಿಸಿ ವಾರ್ಡಿನ ನಿವಾಸಿಗಳು ಭಾನುವಾರ ಸ್ಮಶಾನ ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿದರು.
ನಗರದ ವಾರ್ಡು ಸಂಖ್ಯೆ 1ರಿಂದ 5ರವರೆಗಿನ ಬಡಾವಣೆಗಳ ನಿವಾಸಿಗಳು ಹಾಗೂ ಜಾಗೆಯ ಅಕ್ಕಪಕ್ಕದ ಪ್ರದೇಶದವರು ಸ್ಥಳದಲ್ಲಿ ಜಮಾಯಿಸಿ ಕಳೆದ ಅನೇಕ ವರ್ಷಗಳಿಂದ ನಗರದ ಆಶಾಪೂರ ರಸ್ತೆಯ ಕೊಳಂಕಿ ಪ್ರದೇಶದ ಬಳಿಯ ಸ್ಮಶಾನ ಜಾಗವನ್ನು ಬಳಸುತ್ತಿದ್ದಾರೆ.
ಆದರೆ ಇತ್ತೀಚೆಗೆ ಕೆಲ ತಿಂಗಳಿನಿಂದ ರಾಜಕೀಯ ಪ್ರಭಾವ ಬಳಸಿ ರಾಜಕೀಯ ನಾಯಕರೊಬ್ಬರು ಸ್ಮಶಾನ ಜಾಗ ಅತಿಕ್ರಮಣಕ್ಕೆ ಮುಂದಾಗಿದ್ದಾರೆಂದು ಆರೋಪಿಸಿದರು.
ತೆರವಿಗೆ ಆಗ್ರಹ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಷೀರುದ್ದೀನ್ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿದರು. ಸ್ಮಶಾನ ಜಾಗೆಯ ಪರಿಶೀಲನೆಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಆಗಮಿಸುವರೆಂದು ನಿವಾಸಿಗಳು ಕಾದು ಕುಳಿತರು.
ಅಕ್ರಮಕ್ಕೆ ಜಿಲ್ಲಾಡಳಿತ ಸಾಥ್: ಆದರೆ ಜಿಲ್ಲಾಧಿಕಾರಿಗಳು ಬರದೇ ಹೋದಾಗ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು, ಜಿಲ್ಲಾಡಳಿತ ಮೌನವಾಗಿರುವುದು ರಾಜಕೀಯ ನಾಯಕರೊಂದಿಗೆ ಅಕ್ರಮದಲ್ಲಿ ಕೈಜೋಡಿಸಿದೆ ಎಂದು ಆರೋಪಿಸಿ ಘೋಷಣೆ ಕೂಗಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ನೀಡುವುದಿಲ್ಲ. ಸ್ಮಶಾನ ಜಾಗವನ್ನು ತೆರವುಗೊಳಿಸಲೇಬೆಂಕೆಂದು ಹೋರಾಟಗಾರರು ಒತ್ತಾಯಿಸಿದರು.
ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಕೊಂಡಮ್ಮ, ರಾಜು, ಶಂಕರ್, ದುರ್ಗೇಶ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

