ರಾಯಚೂರು

ಸುಭದ್ರ ಭವಿಷ್ಯಕ್ಕೆ ಮತದಾನ ಅಗತ್ಯ: ಯೋಗೇಶ್

Published On :

ಕ.ಪ್ರ. ವಾರ್ತೆ ಲಿಂಗಸ್ಗೂರು ಮಾ.21
ದೇಶದ ಸುಭದ್ರ ಭವಿಷ್ಯ ರೂಪಿಸಲು ಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಪ್ಪದೇ ಮತ ಚಲಾಯಿಸುವುದು ಅಗತ್ಯವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ, ಎಸಿ ಯೋಗೇಶ್ ಹೇಳಿದರು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯಿಂದ ಲಿಂಗಸ್ಗೂರು ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜ್ಯೋತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಅಂತಿಮವಾಗಿದ್ದು, ಮತದಾರರು ತಮ್ಮ ಹಕ್ಕು ತಪ್ಪದೆ ಚಲಾಯಿಸಬೇಕು. ಮತದಾರರು ಯೋಚಿಸಿ ಮತ ಚಲಾಯಿಸಬೇಕು. ಮತದಾನ ನಮ್ಮೆಲ್ಲರ ಹಕ್ಕಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಲು ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಸೇರಿದಂತೆ ಎಲ್ಲರೂ ಮತದಾರರಲ್ಲಿ ಜಾಗೃತಿ ಮೂಡಿಸುವತ್ತ ಗಮನ ಹರಿಸಬೇಕೆಂದು ಕರೆ ನೀಡಿದರು.
ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಿ: ಮತದಾನ ಜಾಗೃತಿ ಜ್ಯೋತಿ ಪಟ್ಟಣದ ಪ್ರತಿಯೊಂದು ವಾರ್ಡ್ ಹಾಗೂ ಪ್ರತಿ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳು, ದೊಡ್ಡಿ, ತಾಂಡಾಗಳಲ್ಲಿ ಸಂಚರಿಸಲಿದ್ದು, ಆಯಾ ಗ್ರಾಪಂ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಅದನ್ನು ಸ್ವಾಗತಿಸಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ತಹಸೀಲ್ದಾರ್ ಜಿ.ಎಸ್. ಮಹಾಜನ್, ಡಿವೈಎಸ್ಪಿ ಅನಿತಾ ಹದ್ದಣ್ಣವರ್, ತಾಪಂ ಇಒ ಶರಣಬಸಪ್ಪ, ಸಿಪಿಐ ವರದರಾಜ್, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ್, ಬಿಇಒ ಶಾಂತಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್, ಸಿಡಿಪಿಒ ಪ್ರಭಾಕರ, ತೋಟಗಾರಿಕೆ ಸಹಾಯಕ ನಿರ್ದೇಶಕ ಅಮೋಘ ಹಿರೇಕುರಬರ, ಜೆಸ್ಕಾಂ ಎಇಇ ರಿಯಾಜ್ ಅಹ್ಮದ್, ಪಿಎಸ್‌ಐ ಸುಶೀಲಲ್ಕುಮಾರ, ಸರ್ವೆ ಇಲಾಖೆ ಅಧಿಕಾರಿ ಸೃಜಯ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಶಿಕ್ಷಕರು ಇದ್ದರು.
ಇದೇ ವೇಳೆ ಮತದಾನ ಕುರಿತ ಜಾಗೃತಿ ಜ್ಯೋತಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಹಾಯಕ ಚುನಾವಣಾಧಿಕಾರಿ ಟಿ. ಯೋಗೇಶ್ ಮತದಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಮತದಾರರ ಜಾಗೃತಿ ಸಭೆ
ದೇವದುರ್ಗ: ಸಮಾಜದಲ್ಲಿರುವ ಪ್ರತಿಯೊಬ್ಬರೂ ದೇಶದ ಪ್ರಜ್ಞಾವಂತ ನಾಗರಿಕರೆನಿಸಿಕೊಳ್ಳಲು ಕಡ್ಡಾಯ ಮತದಾನ ಮಾಡಬೇಕಿದೆ ಎಂದು ತಾಲೂಕು ಸಾಕ್ಷರತಾ ಸಂಯೋಜಕ ಜಾನ್ ವೆಸ್ಲಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಶುಕ್ರವಾರ ತಾಲೂಕು ಲೋಕ ಶಿಕ್ಷಣ ಸಮಿತಿಯಿಂದ ಸಾಕ್ಷರತಾ ಪ್ರೇರಕರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಮತದಾರರ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಸಾಕ್ಷರತಾ ಪ್ರೇರಕರಿಗೆ ಹಾಗೂ ಸದಸ್ಯ ಕಾರ್ಯದರ್ಶಿಳಿಗೆ ಮತದಾನದ ಪ್ರತಿಜ್ಞೆ ವಿಧಿಯನ್ನು ಬಿಇಒ ಎಚ್.ಡಿ. ಹುನಗುಂದ ಬೋಧಿಸಿದರು.

ಸಂಹಿತೆ ಪಾಲಿಸಲು ಪಕ್ಷಗಳಿಗೆ ಸೂಚನೆ
ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಆಯೋಗ ನಿಗದಿಪಡಿಸಿದಂತೆ ನೀತಿ ಸಂಹಿತೆ ಕಡ್ಡಾಯ ಪಾಲಿಸಲು ಮಾನವಿ ತಹಸೀಲ್ದಾರ್ ಎಂ.ಐ. ಶಹಾನೂರು ತಿಳಿಸಿದರು.
ಈಚೆಗೆ ಮಾನವಿ ಪಟ್ಟಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ರಾಜಕೀಯ ಪಕ್ಷಗಳವರು ಪೂರ್ವಾನುಮತಿಯಿಲ್ಲದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಚುನಾವಣೆಯಲ್ಲಿ ಅಭ್ಯರ್ಥಿ ವೆಚ್ಚ 70 ಲಕ್ಷ ಮೀರುವಂತಿಲ್ಲ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಚಟುವಟಿಕೆ ಪರಿಶೀಲಿಸಲು ಜಾಗೃತ ದಳ ಮತ್ತು ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಬ್ಯಾನರ್, ಪಕ್ಷದ ಧ್ವಜ, ಚುನಾವಣಾ ಪ್ರಚಾರಕ್ಕೆ ವಾಹನಗಳ ಪರವಾನಗಿ ಸೇರಿ ಎಲ್ಲ ಮಾಹಿತಿ ತಾಲೂಕು ಆಡಳಿತಕ್ಕೆ ಒದಗಿಸುವಂತೆ ಸೂಚಿಸಿದರು.
ಪಕ್ಷದ ರಾಜ್ಯ ನಾಯಕರು ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸುವ ಕಾರ್ಯಕ್ರಮವಿದ್ದಲ್ಲಿ ಆಡಳಿತಕ್ಕೆ 72 ಗಂಟೆ ಮುಂಚಿತವಾಗಿ ಮಾಹಿತಿ ನೀಡಬೇಕು. ಪ್ರಚಾರಕ್ಕೆ ಆಗಮಿಸುವ ಮುಖಂಡರ ಹೆಸರು, ಕಾರ್ಯಕ್ರಮದ ಸ್ಥಳ, ಆಸನಗಳ ವ್ಯವಸ್ಥೆ, ಊಟದ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ಚುನಾವಣಾ ಇಲಾಖೆಗೆ ಒದಗಿಸುವಂತೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.