ರಾಯಚೂರು

ನವ ಮಂತ್ರಾಲಯ ನಿರ್ಮಾತೃ ಸುಯತೀಂದ್ರತೀರ್ಥರು

Published On :

ಕ.ಪ್ರ. ವಾರ್ತೆ ರಾಯಚೂರು ಮಾ.21
ಮಂತ್ರಾಲಯ ಮಠದ ಯತಿಗಳೆಲ್ಲರೂ ಶ್ರೀಮಠದ ಭಕ್ತರ ಇಷ್ಟಾರ್ಥ ಸಿದ್ಧಿಸಲು ನೆರವಾದವರು. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಎಲ್ಲ ಸೌಲಭ್ಯ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರವಾಹೋತ್ತರದಲ್ಲಿ ಮಂತ್ರಾಲಯಕ್ಕೆ ಜೀವ ತುಂಬಿ, ಧಾರ್ಮಿಕ, ಭೌತಿಕ, ಸಾಂಸ್ಕೃತಿಕ ಶ್ರೀಮಂತಿಕೆ ತಂದುಕೊಟ್ಟವರು ಶ್ರೀ ಸುಯತೀಂದ್ರ ತೀರ್ಥರು.
2009ರ ಅಕ್ಟೋಬರ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತುಂಗಭದ್ರಾ ನದಿ ಮಂತ್ರಾಲಯಕ್ಕೆ ನುಗ್ಗಿ ಹಾನಿ ಮಾಡಿತ್ತು. ಮಂತ್ರಾಲಯದ ಸರ್ವ ಶ್ರೀಮಂತಿಕೆಯನ್ನು ಹೊತ್ತೊಯ್ದಿತ್ತು. ನದಿಯಲ್ಲಿ ಪ್ರವಾಹ ಇಳಿಮುಖವಾಗುತ್ತಿದ್ದಂತೆಯೇ ಮಂತ್ರಾಲಯವನ್ನು ಪುನಾ ಕಟ್ಟುವ ಬಹುದೊಡ್ಡ ಹೊಣೆ ಹೊತ್ತಿದ್ದು ಶ್ರೀ ಸುಯತೀಂದ್ರತೀರ್ಥರು.
ಅಂತೆಯೇ ಅವರು ಮೊಟ್ಟ ಮೊದಲಿಗೆ ಮಂತ್ರಾಲಯ ಗ್ರಾಮದಲ್ಲಿರುವ ನೆರೆ ಸಂತ್ರಸ್ತರೆಲ್ಲರಿಗೆ ಹಾಗೂ ಆನಂತರದಲ್ಲಿ ಮಂತ್ರಾಲಯದ ಸುತ್ತಲಿನ ಪ್ರದೇಶದಲ್ಲಿರುವ ನೆರೆ ಪೀಡಿತರಿಗೆ ಒಂದು ತಿಂಗಳ ಕಾಲ ಉಣಬಡಿಸುವ ಜತೆಜತೆಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದು ಬಹುದೊಡ್ಡ ಸಾಧನೆ.
ಪುನಾ ಶ್ರೀಮಂತಿಕೆ ತಂದುಕೊಟ್ಟವರು: ಶ್ರೀಮಠ ಮತ್ತು ಮಂತ್ರಾಲಯ ಗ್ರಾಮವನ್ನು ಇಡಿಯಾಗಿ ನಿರ್ಮಿಸುವ ಕನಸು ಕಂಡವರು ಶ್ರೀಸುಯತೀಂದ್ರತೀರ್ಥರು. ಅದರಂತೆ ಶ್ರೀಗಳು ವಿವಿಧೆಡೆ ತೆರಳಿದಾಗ ದೊರೆತ ಕೋಟಿ ಕೋಟಿ ರುಪಾಯಿಗಳನ್ನು ಶ್ರೀಗಳು ಮಂತ್ರಾಲಯ ನಿರ್ಮಾಣಕ್ಕೆ ತಂದೊಪ್ಪಿಸಿ, ಮಂತ್ರಾಲಯಕ್ಕೆ ಪುನಾ ಮೊದಲಿನ ಶ್ರೀಮಂತಿಕೆ ತಂದುಕೊಡುವ ಕಾರ್ಯ ಮಾಡಿದರು. ಅಷ್ಟೇ ಅಲ್ಲ, ಮೊದಲಿಂಗಿಂತಲೂ ಹೆಚ್ಚು ಶ್ರೀಮಂತ ನವಮಂತ್ರಾಲಯ ಸಜ್ಜಾಗಿದೆ.
ತುಂಗಭದ್ರಾ ನದಿ ಉಕ್ಕಿ ಹರಿದಿದ್ದಕ್ಕೆ ಶ್ರೀಮಠದ ಎಲ್ಲವೂ ಹಾಳಾಗಿತ್ತು. ಅದೆಲ್ಲವನ್ನೂ ಪುನಾ ನಿರ್ಮಿಸುವ ಪಣ ತೊಟ್ಟಿದ್ದರ ಫಲವಾಗಿಯೇ ಶ್ರೀಮಠದ ಸಮಗ್ರ ಅಭಿವೃದ್ಧಿಯ ಜತೆಗೆ ಗ್ರಾಮಕ್ಕೆ ತುಂಗಭದ್ರಾ ನದಿಯ ಶುದ್ಧ ಕುಡಿವ ನೀರು, ಸುಸಜ್ಜಿತ ಒಳಚರಂಡಿ ವ್ಯವಸ್ಥೆಯೂ ನಿರ್ಮಾಣವಾಯಿತು.
ಸಕಲ ಸೌಲಭ್ಯ: ಹಾಗೆಯೇ ಶ್ರೀಮಠದಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಸಿಬ್ಬಂದಿಗೆ ವಸತಿ ಗೃಹಗಳು, ಸಿಬ್ಬಂದಿ ಮಕ್ಕಳಿಗೆ ಸುಸಜ್ಜಿತ ಶಾಲೆ ನಿರ್ಮಾಣವಾಗಿದೆ. ಸಂಸ್ಕೃತ ವಿದ್ಯಾಪೀಠಕ್ಕೆ ಜೀವನ ತುಂಬುವ ಕಾರ್ಯವೂ ನಡೆದಿದೆ. ಬಡವರಿಗೆ ಅನುಕೂಲವಾಗಲು ಎರಡು ಕಲ್ಯಾಣ ಮಂಟಪಗಳು, ಭವ್ಯ ಪ್ರಾಕಾರ, ಗ್ರಾಮ ದೇವತೆ ಮಂಚಾಲೆಮ್ಮ ದೇವಸ್ಥಾನದ ಜೀರ್ಣೋದ್ಧಾರವೂ ಕೈಗೂಡಿದೆ.
ಶ್ರೀಮಠಕ್ಕೆ ಕೊಡುಗೈ ದಾನಿ ಭಕ್ತರ ಸಂಖ್ಯೆ ಸಾಕಷ್ಟಿದೆ. ಅಂಥ ಎಲ್ಲ ಭಕ್ತರ ನೆರವು ಮತ್ತು ಶ್ರೀಗಳಾಗಿದ್ದ ಶ್ರೀ ಸುಯತೀಂದ್ರ ತೀಥರ ದೂರದೃಷ್ಟಿಯ ಫಲವಾಗಿ ನವ ಮಂತ್ರಾಲಯವಿಂದು ಕಂಗೊಳಿಸುತ್ತಿದೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ ನೆರೆ ಸಂತ್ರಸ್ತರಿಗೆ ರಾಯರ ಮನೆ(ವಸತಿ ಸೌಲಭ್ಯ) ಹಾಗೂ ಮಂತ್ರಾಲಯಕ್ಕೆ ಭವ್ಯ ಶ್ರೀಮಂತಿಕೆಯನ್ನು ತಂದುಕೊಟ್ಟ ಕೀರ್ತಿ ಶ್ರೀ ಸುಯತೀಂದ್ರ ತೀರ್ಥರು. ಇವರು ಎಂದೆಂದಿಗೂ ಅಜರಾಮರವಾಗಿ ಉಳಿಯಲಿದ್ದಾರೆ.
ರಾಯರ ಪ್ರೇರಣೆಯೂ ಕಾರಣ: ಮಂತ್ರಾಲಯದ ಇತಿಹಾಸದಲ್ಲಿ ಕರಾಳ ದಿನಗಳೆಂದೇ ಕರೆಯಿಸಿಕೊಂಡಿದ್ದ ಪ್ರವಾಹ ಮತ್ತು ಪ್ರವಾಹೋತ್ತರದಲ್ಲಿ ಅವರ ಆತ್ಮಸ್ಥೈರ್ಯ, ಮಂತ್ರಾಲಯ ಪುನಾ ನಿರ್ಮಾಣಕ್ಕೆ ಮುಂದಾದ ಪರಿ, ಶ್ರೀಮಠದ ಸಿಬ್ಬಂದಿಗೆ ನಿರಂತರ ಮಾರ್ಗದರ್ಶನ ಹಾಗೂ ಜತೆಗೆ ರಾಯರ ಪ್ರೇರಣೆಯು ಎಂದಿಗೂ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿಯುವಂತೆ ಶ್ರೀಸುಯತೀಂದ್ರತೀರ್ಥರಿಗೆ ಹೆಸರು ತಂದಿದೆ.
ಮಂತ್ರಾಲಯದ ಶ್ರೀಮಂತಿಕೆ ನೂರ್ಮಡಿಗೊಳಿಸಿದ ಗುರುಗಳು ಇನ್ನು ನೆನಪು ಮಾತ್ರ. ಭಕ್ತರು ಹಾಗೂ ಮಂತ್ರಾಲಯ ಗ್ರಾಮಸ್ಥರ ಪಾಲಿಗೆ ಪ್ರವಾಹೋತ್ತರದಲ್ಲಿ ಸ್ವತಃ ರಾಯರಂತೆಯೇ ಕಂಡಿದ್ದ ಶ್ರೀಗಳು ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಕಟ್ಟಿಕೊಟ್ಟ ಪ್ರವಾಹೋತ್ತರದ ನವಮಂತ್ರಾಲಯದಲ್ಲಿನ ಅಭಿವೃದ್ಧಿಯ ಕುರುಹುಗಳು ಮಾತ್ರ ಎಂದೆಂದಿಗೂ ಅವರ ನೆನಪು ಮರುಕಳಿಸುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

ಸುಯತೀಂದ್ರ ಶ್ರೀಗಳ ಹಿನ್ನೆಲೆ
ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥರು(80) ಗುರುವಾರ ತಡರಾತ್ರಿ ಹರಿಪಾದೈಕ್ಯರಾದರು.
ಅವರು ಕಳೆದ ಕೆಲವು ತಿಂಗಳಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಶ್ರೀಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ರಾತ್ರಿ 12.10ರ ಸುಮಾರಿಗೆ ಅವರು ಅಸ್ತಂಗತರಾದರು. ಶ್ರೀಗಳು ಪ್ರವಾಹೋತ್ತರದಲ್ಲಿ ನವ ಮಂತ್ರಾಲಯದ ನಿರ್ಮಾತೃ ಎಂದೇ ಅವರು ಹೆಸರು ಗಳಿಸಿದ್ದರು.
ಸುಯತೀಂದ್ರತೀರ್ಥರು ಪೂರ್ವಾಶ್ರಮದಲ್ಲಿ ಮೂಲತಃ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದವರಾಗಿದ್ದಾರೆ. ಪೂರ್ವಾಶ್ರಮದಲ್ಲಿ ಇವರ ಹೆಸರು ಸುಶೀಲೇಂದ್ರಾಚಾರ್ಯ. ಅನಂತಾಚಾರ್ಯ ಹಾಗೂ ಯಮುನಾಬಾಯಿ ಅವರ ಪುತ್ರರು. ಪೇಠಾಲೂರು ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದು ಮುಂದೆ ಧಾರವಾಡದಲ್ಲಿ ಬಿಎಸ್ಸಿ ಪದವಿ, ನಂತರ ಬೆಂಗಳೂರಿನಲ್ಲಿ ಬಿ.ಇಡಿ ಮತ್ತು ಎಎಂಐಇ ಪದವಿ ಪಡೆದರು.
ಆಧ್ಯಾತ್ಮಿಕ, ಧಾರ್ಮಿಕ ಶಿಕ್ಷಣದತ್ತಲೂ ಆಸಕ್ತಿ ಹೊಂದಿದ್ದ ಅವರು, ವಿವಿಧೆಡೆ ಅಧ್ಯಯನ ಮಾಡಿ ಸುಶಮೀಂದ್ರತೀರ್ಥರ ಅನುಗ್ರಹದಿಂದ ತಮ್ಮ 72ನೇ ವಯಸ್ಸಿನಲ್ಲಿ ಮಂತ್ರಾಲಯ ಮಠದ ಉತ್ತರಾಧಿಕಾರಿಯಾಗಿ 2006ರಲ್ಲಿ ಪೀಠ ಅಲಂಕರಿಸಿದರು. ಹಿರಿಯ ಶ್ರೀಗಳಾದ ಸುಶಮೀಂದ್ರತೀರ್ಥರ ಮಾರ್ಗದರ್ಶನದಲ್ಲಿ ಶ್ರೀಮಠದ ಪ್ರಗತಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದವರು.
ತಮ್ಮ ಗುರುಗಳಾದ ಸುಶಮೀಂದ್ರತೀರ್ಥರು ಹರಿಪಾದೈಕ್ಯರಾದ ನಂತರದಲ್ಲಿ 2009ರ ಏ.12ರಂದು ಪೀಠಾಧಿಪತಿಗಳಾಗಿ ಸ್ಥಾನ ಅಲಂಕರಿಸಿದರು. ರಾಯರ ಪ್ರೇರಣೆಯಂತೆ ತಮ್ಮ ಉತ್ತರಾಧಿಕಾರಿಗಳನ್ನಾಗಿ ಸುಬುಧೇಂದ್ರತೀರ್ಥರಿಗೆ 2013ರ ಮೇ 25ರಂದು ನೇಮಿಸಿದ್ದರು.
ಆನಂತರದಲ್ಲಿ ಅಸೌಖ್ಯದ ಕಾರಣದಿಂದಾಗಿ 2104ರ ಮಾ.10ರಂದು ತಮ್ಮ ಉತ್ತರಾಧಿಕಾರಿ ಸುಬುಧೇಂದ್ರತೀರ್ಥರಿಗೆ ಅಧಿಕಾರ ಹಸ್ತಾಂತರಿಸಿ ಏಕಾಂತ ಸೇವೆಗೆ ಮುಂದಾಗಿದ್ದ ಶ್ರೀಗಳು ಪ್ರವಾಹೋತ್ತರದಲ್ಲಿ ನವ ಮಂತ್ರಾಲಯದ ಅಭಿವೃದ್ಧಿಗೆ 100 ಕೋಟಿಗೂ ಹೆಚ್ಚಿನ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನವ ಮಂತ್ರಾಲಯದ ನಿರ್ಮಾತೃ ಎಂದು ಕರೆಯಿಸಿಕೊಂಡಿದ್ದರು.
ಸಂಕಲ್ಪ: ಶ್ರೀಮಠದಲ್ಲಿ ಶ್ರೀರಾಯರ ಮೂಲ ಬೃಂದಾವನವಿರುವ ಹಾಲಿ ಕಟ್ಟಡ ಹಳೆಯದಾಗಿರುವುದರಿಂದ ಅಲ್ಲಿ ಶಿಲಾ ಮಂಟಪ ನಿರ್ಮಿಸಲು ಶ್ರೀಗಳು ಯೋಜಿಸಿದ್ದರು. ಆ ಯೋಜನೆಗೆ ಇತ್ತೀಚೆಗೆ ನಡೆದ ಗುರುಭಕ್ತಿ ಉತ್ಸವದ ವೇಳೆ ಶಿಲಾನ್ಯಾಸ ನೆರವೇರಿಸಿದ್ದರು. ಹಾಗೆಯೇ ಮೂಲರಾಮದೇವರ ವಿಗ್ರಹವಿರಿಸಲು ಚಿನ್ನದ ಮಂಟಪ ಸಮರ್ಪಣೆಯ ಸಂಕಲ್ಪ ಮಾಡಿದ್ದರು.

ಸಾವಿರಾರು ಭಕ್ತರ ಅಶ್ರುತರ್ಪಣ
ರಾಯಚೂರು: ಮಂತ್ರಾಲಯ ಮಠದ ಹಿರಿಯ ಶ್ರೀಗಳಾಗಿದ್ದ ಶ್ರೀ ಸುಯತೀಂದ್ರತೀರ್ಥರು ಹರಿಪಾದೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯ ಭಕ್ತರು ಶುಕ್ರವಾರ ಬೆಳಗ್ಗೆ ಹೊತ್ತಿಗೆ ಮಂತ್ರಾಲಯ ತಲುಪಿ ಗುರುಗಳ ಅಂತಿಮ ದರ್ಶನ ಪಡೆದರು.
ಬೆಂಗಳೂರು, ಮೈಸೂರು, ರಾಯಚೂರು ಮತ್ತಿತರೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದು, ಶ್ರೀಗಳಿಗೆ ಭಕ್ತಿಪೂರ್ವಕ ಅಂತಿಮ ನಮನ ಸಮರ್ಪಿಸಿದರು. ಈ ವೇಳೆ ಕೆಲವರಿಗೆ ಶ್ರೀಗಳ ಅಗಲಿಕೆಯ ಸುದ್ದಿ ತಿಳಿಯದೇ ದರ್ಶನಕ್ಕೆಂದು ಆಗಮಿಸಿದ್ದರು. ಅವರು ಶ್ರೀಗಳ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕಣ್ಣೀರಿಟ್ಟಿದ್ದು ಕಂಡುಬಂದಿತು.
ಕಿರಿಯ ಶ್ರೀಗಳಾದ ಶ್ರೀಸುಭುದೇಂದ್ರ ತೀರ್ಥರೂ ತಮ್ಮ ಗುರುಗಳಾದ ಶ್ರೀ ಸುಯತೀಂದ್ರತೀರ್ಥರ ಪಾದುಕೆ ಪೂಜೆ ಸಂದರ್ಭದಲ್ಲಿ ಅಶ್ರುತರ್ಪಣ ನೀಡುವ ಮೂಲಕ ಗೌರವ ಸಮರ್ಪಿಸಿದರು.

ಸುತ್ತೂರು, ರಾಘವೇಶ್ವರ ಶ್ರೀಗಳ ಸಂತಾಪ
ಬೆಂಗಳೂರು: ಸುಯತೀಂದ್ರತೀರ್ಥ ಸ್ವಾಮೀಜಿ ಬೃಂದಾವನೈಕ್ಯದಿಂದ ಮಂತ್ರಾಲಯದ ಭಕ್ತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. 'ತ್ಯಾಗೇನೈಕೇನಾಮೃತತ್ವ ಮಾನಷುಃ' ಎಂಬ ಉಪನಿಷದ್ವಾಕ್ಯದಂತೆ ಅಮೃತತ್ವವನ್ನು ನೀಡದ ಭೋಗದ ಬದುಕನ್ನು ಬದುಕಬಲ್ಲ ತ್ಯಾಗದ ಬದುಕೇ ನಿಜವಾದ ಬದುಕು. ಅಂಥ ಅಮೃತಮಯವಾದ ತ್ಯಾಗದ ಬದುಕು ಮಂತ್ರಾಲಯದ ಶ್ರೀ ಸುಯತೀಂದ್ರ ಸ್ವಾಮೀಜಿಗಳದು. ಪ್ರವಾಹದಿಂದ ತತ್ತರಿಸಿದ್ದ ಮಂತ್ರಾಲಯವನ್ನು ಮತ್ತೆ ಕಟ್ಟಿ ಬೆಳೆಸುವುದು ಸಣ್ಣ ಮಾತಲ್ಲ. ಅವರ ಭೌತಿಕ ನಷ್ಟದಿಂದ ಮಂತ್ರಾಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ. ಶ್ರೀಗಳ ಅಗಲಿಕೆ ನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ನಿರ್ವಾತ ಸೃಷ್ಟಿಸಿದೆ ಎಂದು ಸುತ್ತೂರು ಶ್ರೀಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.