ಚೀಕಲಪರ್ವಿ ವಿರೂಪಾಕ್ಷಶ್ರೀ ಲಿಂಗೈಕ್ಯ
ರಾಯಚೂರು: ಮಾನವಿ ತಾಲೂಕಿನ ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಠದ ಶ್ರೀ ವಿರೂಪಾಕ್ಷ ಮಹಾ ಸ್ವಾಮಿಗಳು(73) ಬುಧವಾರ ಬೆಳಗ್ಗೆ ಲಿಂಗೈಕ್ಯರಾದರು.
ಅವರು ಕಳೆದೊಂದು ವರ್ಷದಿಂದ ಅನಾರೋಗ್ಯ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಫೆ.12ರಂದು ಶ್ರೀ ರುದ್ರ ಮುನೀಶ್ವರ ಮಠಕ್ಕೆ ನೂತನ ಪೀಠಾಧಿಕಾರಿಗಳನ್ನಾಗಿ ಶ್ರೀ ರುದ್ರಮುನೀಶ್ವರ ಸ್ವಾಮಿಗಳನ್ನು ನೇಮಿಸಿದ್ದರು. ಆಂಧ್ರಪ್ರದೇಶದ ಹಾಲ್ವಿ ಶಾಖಾ ಮಠವಾದ ಚೀಕಲಪರ್ವಿ ರುದ್ರಮುನೀಶ್ವರ ಮಠದ ಮೂಲ ಕರ್ತೃ ರುದ್ರಮುನೀಶ್ವರರ ನಿಧನಾ ನಂತರ 1979ರಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗಳನ್ನು ಪೀಠಾಧಿಪತಿಗಳಾಗಿ ನೇಮಸಿದ್ದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕುರುಬರ ಸೀಗೇಹಳ್ಳಿಯಲ್ಲಿ 1942ರಲ್ಲಿ ಜನಿಸಿದ್ದ ಶ್ರೀಗಳು ಸಂಸ್ಕೃತದಲ್ಲಿ ಬಿಎ ಪದವಿ ಪಡೆದಿದ್ದರು. ಹಲವು ಕಷ್ಟಗಳ ನಡುವೆ ಚೀಕಲಪರ್ವಿ ಮಠವನ್ನು ಕಟ್ಟಿ ಬೆಳೆಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ನೇರ ನಡೆ- ನುಡಿಯನ್ನು ಮೈಗೂಡಿಸಿಕೊಂಡಿದ್ದ ಶ್ರೀವಿರೂಪಾಕ್ಷ ಸ್ವಾಮಿಗಳು ಕಳೆದ 35 ವರ್ಷಗಳಿಂದ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದರು.
ಇಂದು ಅಂತ್ಯಕ್ರಿಯೆ: ಲಿಂ. ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗಳ ಅಂತ್ಯಕ್ರಿಯೆ ಮಾ.27ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ. ರುದ್ರಮುನೀಶ್ವರ ಮಠದ ಆವರಣದಲ್ಲಿ ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ಅಂತ್ಯಕ್ರಿಯೆ ವೇಳೆ ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ಚೀಕಲಪರ್ವಿ ವಿರೂಪಾಕ್ಷ ಶ್ರೀಗಳು ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಕಲ್ಮಠದ ಡಾ. ಶಿವಮೂರ್ತಿ ಶ್ರೀಗಳು, ಅಡವಿ ಅಮರೇಶ್ವರ ಶ್ರೀಗಳು, ಶಾಸಕ ಹಂಪಯ್ಯನಾಯಕ, ಮಾಜಿ ಶಾಸಕರಾದ ಎನ್.ಎಸ್. ಬೋಸರಾಜು, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಮುಖಂಡರಾದ ದೊಡ್ಡಬಸಪ್ಪಗೌಡ ಭೋಗಾವತಿ, ಎಸ್.ಈರಪ್ಪಗೌಡ ಚೀಕಲಪರ್ವಿ, ಮಲ್ಲನಗೌಡ ನಕ್ಕುಂದಿ, ಎಸ್. ತಿಮ್ಮಾರೆಡ್ಡಿ ಭೋಗಾವತಿ, ರಾಜಾ ವೆಂಕಟಪ್ಪನಾಯಕ, ಹನುಮೇಶ ಮದ್ಲಾಪುರ, ಶಿವರಾಜ್ ಜಾನೇಕಲ್, ಶೇಖರಪ್ಪ ಕೊಟ್ನೆಕಲ್, ಎಸ್.ಶಂಕರಗೌಡ ಚೀಕಲಪರ್ವಿ, ಮಹಾಬಳೇಶ್ವರ, ಮಠದಪ್ಪ ನಾಯ್ಕರ್, ಸಿದ್ದರಾಮಪ್ಪಗೌಡ ಚೀಕಲಪರ್ವಿ ಸೇರಿದಂತೆ ಅನೇಕರು ಆಗಮಿಸಿ ಅಂತಿಮ ದರ್ಶನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

