ಸಂಪತ್ತಿನ ತಕ್ಕಡಿಗಿಂತ ಧರ್ಮದ ತಕ್ಕಡಿ ಮೌಲ್ಯಯುತ
ಅಡಕೆ ತುಲಾಭಾರ ಸೇವೆ ಸ್ವೀಕರಿಸಿದ ರಾಘವೇಶ್ವರ ಶ್ರೀ
ಕ.ಪ್ರ.ವಾರ್ತೆ ಟಿ ಹೊಸನಗರ ಟಿ ಏ.23
ಸಂಪತ್ತಿನ ತಕ್ಕಡಿಯಲ್ಲಿ ತೂಗಿ ಬದುಕು ಸಾಗಿಸುವುದಕ್ಕಿಂತ ಧರ್ಮದ ತಕ್ಕಡಿಗೆ ಪೂರಕವಾಗಿ ಜೀವನ ಸಾಗಿಸುವುದು ಮೌಲ್ಯಯುತವಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಹೇಳಿದರು.
ಹೊಸನಗರದ ಶ್ರೀರಾಮಚಂದ್ರಾಪುರ ಪ್ರಧಾನಮಠದಲ್ಲಿ ಮಂಡಲೋತ್ಸವದ ಅಂಗವಾಗಿ ಹವ್ಯಕ ಮಹಾಮಂಡಲ ಆಯೋಜಿಸಿದ್ದ ಅಡಕೆ ತುಲಾಭಾರ ಸೇವೆಯನ್ನು ಸ್ವೀಕರಿಸಿದ ನಂತರ ಶ್ರೀಗಳು ಆಶೀರ್ವಚನ ನೀಡಿದರು.
ಅಮೂಲ್ಯ ಆಸ್ತಿ: ಎಂದಿಗೂ ಸಂಪತ್ತಿನ ತಕ್ಕಡಿಗಿಂದ ಧರ್ಮದ ತಕ್ಕಡಿಯೇ ಮೇಲು. ಸಂಪತ್ತಿನ ಮೂಲಕ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಹೆಚ್ಚು ಕಂಡುಬರುತ್ತಿದೆ. ಇದುವೆ ಬದುಕಿನ ನೆಮ್ಮದಿ ಹಾಳು ಮಾಡುತ್ತಿದೆ. ಧರ್ಮದ ಬುನಾದಿಯ ಮೇಲೆ ಬದುಕು ನಿರ್ಮಿತಗೊಂಡರೆ ಅದಕ್ಕಿಂತ ಸುಂದರ, ಸಂತಸದ ಬದುಕು ಮತ್ತೊಂದಿಲ್ಲ. ಅಡಕೆ ಬೆಳೆಯುವ ರೈತ ಅಡಕೆಯಿಂದ ಬರುವ ಸಂಪತ್ತಿನ ಕಡೆ ಗಮನಹರಿಸುವುದಿಲ್ಲ. ಅಡಕೆಯೊಂದಿಗೆ ತಮ್ಮ ಬದುಕನ್ನು ಬೆಸೆದುಕೊಂಡು ತಮ್ಮ ಅಮೂಲ್ಯ ಆಸ್ತಿಯಂತೆ ಕಾಪಾಡಿಕೊಂಡು ಬರುತ್ತಿದ್ದಾನೆ ಎಂದರು.
ಅಡಕೆ ಕೇವಲ ಜೀವನಾಧಾರವಲ್ಲ. ಅದರಲ್ಲಿ ಧರ್ಮದ ಸತ್ವ ಅಡಗಿದೆ. ಪ್ರತಿಯೊಂದು ಧಾರ್ಮಿಕ ಕಾರ್ಯದಲ್ಲಿ ಅಡಕೆ ತನ್ನದೆ ಪ್ರಭಾವಲಯ ಸೃಷ್ಟಿಸಿಕೊಂಡಿದೆ. ಗುರುವನ್ನು ಸ್ವೀಕರಿಸುವಾಗ ಅಳೆದು ತೂಗಬೇಕು. ಆದರೆ ಸ್ವೀಕರಿಸಿದ ದಿನದಿಂದ ಗುರುವನ್ನು ತೂಗಿ ನೋಡಲು ಮುಂದಾಗಬಾರದು. ಗುರುಪೀಠದ ಪ್ರಭಾವವನ್ನು ಉತ್ತುಂಗಕ್ಕೇರಿಸುವ ಹೊಣೆ ಶಿಷ್ಯರದ್ದು ಹಾಗೆಯೆ ಶಿಷ್ಯರ ಆತ್ಮೋದ್ಧಾರ ಮಾಡುವ ಕೆಲಸ ಗುರುವಿನಿಂದಾಗುತ್ತದೆ ಎಂದು ಹೇಳಿದರು.
ಅಡಕೆ ಮೌಲ್ಯ ಹೆಚ್ಚಾಗುವುದರಲ್ಲೆ ಹೆಚ್ಚಿನ ಗಮನ ಹರಿಸದೆ ತಮ್ಮ ಜೀವನ ಮೌಲ್ಯ ಹೆಚ್ಚಾಗುವುದರ ಬಗ್ಗೆ ಒತ್ತು ನೀಡಬೇಕು. ಶಿಷ್ಯರ ಸಂತೋಷದಲ್ಲಿ ಗುರು ತನ್ನ ಸಂತೋಷ ಕಂಡುಕೊಳ್ಳುತ್ತಾನೆ ಎಂದರು.
ಕೈಪಿಡಿ ಲೋಕಾರ್ಪಣೆ: ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಕೈಪಿಡಿ, ಸ್ವಸ್ಥ ಜೀವನ ಪದ್ಧತಿ ಪುಸ್ತಕ, ಸಾಂಪ್ರದಾಯಿಕ ಹಾಡುಗಳ ಸಿಡಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲವ ಧರ್ಮದರ್ಶಿ ಭೀಮೇಶ್ವರ ಜೋಷಿ, ಆಡಳಿತ ನಿರ್ವಹಣಾಧಿಕಾರಿ ಕೆ.ಜಿ. ಭಟ್, ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಟ್ಟಿಮನೆ ಗಣಪತಿ ಧೂಳಿ ಪಾದಪೂಜೆ ನೆರವೇರಿಸಿದರು. ಜಡ್ಡು ರಾಮಚಂದ್ರಭಟ್ ವರದಿ ವಾಚಿಸಿದರು. ವಿದ್ಯಾನ್ ಜಗದೀಶ ಶರ್ಮ, ಪ್ರಮೋದ್ ಪಂಡಿತ್ ನಿರೂಪಿಸಿದರು. ಸೀತಾರಾಂ ಪ್ರಸಾದ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

