ಶಿವಮೊಗ್ಗ

ವಾಹನಕ್ಕೆ ಸಿಲುಕಿ ವಾರದಲ್ಲಿ 5 ಜಿಂಕೆ ಸಾವು

Published On :

ಕ.ಪ್ರ. ವಾರ್ತೆ  ,  ಶಿವಮೊಗ್ಗ  ,  ಏ.26
ಭದ್ರಾ ಅಭಯಾರಣ್ಯ ವ್ಯಾಪ್ತಿಯ ಶಂಕರಘಟ್ಟ ಪ್ರದೇಶದಲ್ಲಿ ಜಿಂಕೆಗಳ ಮಾರಣ ಹೋಮ ಮುಂದುವರಿದಿದೆ. ಕಳೆದ 10 ದಿನಗಳಿಂದೀಚೆಗೆ ಐದು ಜಿಂಕೆ- ಸಾರಂಗ ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದ್ದು, ಮುಗ್ಧ ಜೀವಿಗಳ ಸಾವಿನ ಕೊಂಡಿ ಬೆಳೆಯುತ್ತಲೇ ಇದೆ. ಏಪ್ರಿಲ್ ಎರಡನೇ ವಾರದಲ್ಲಿ ದೊಡ್ಡದಾದ ಸಾರಂಗವೊಂದು ವಾಹನಕ್ಕೆ ಸಿಲುಕಿ ರಸ್ತೆ ಬದಿಯಲ್ಲಿ ಸಾವನ್ನಪ್ಪಿತ್ತು. ಇದೀಗ ಬುಧವಾರ ನಸುಕಿನಲ್ಲಿ ನಡೆದ ಘಟನೆಯಲ್ಲಿ ನಾಲ್ಕು ಜಿಂಕೆಗಳು ಅಪರಿಚಿತ ವಾಹನವೊಂದಕ್ಕೆ ಸಿಲುಕಿ ರಸ್ತೆಯಲ್ಲೇ ಪ್ರಾಣಬಿಟ್ಟಿವೆ.
ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿರುವ ಸಾಧ್ಯತೆ  ಇದೆ. ವಾಹನ ರಭಸವಾಗಿ ಗುದ್ದಿದ ಹೊಡೆತಕ್ಕೆ ನಾಲ್ಕು ಜಿಂಕೆಗಳ ದೇಹ ಛಿದ್ರಛಿದ್ರವಾಗಿ ಬಿದ್ದಿದೆ. ಸತ್ತುಹೋದ ಜಿಂಕೆಗಳ ಪೈಕಿ ಎರಡು ಮರಿಗಳೂ ಇದ್ದವೆಂದು ತಿಳಿದುಬಂದಿದೆ.
ಹೇಗೆ ಅಪಘಾತ?: ಕಳೆದ ತಿಂಗಳು ಉಂಬಳೇಬೈಲು ವ್ಯಾಪ್ತಿಯಲ್ಲಿ ವಾಹನವೊಂದು ಜಿಂಕೆಗೆ ಡಿಕ್ಕಿಹೊಡೆದ ಪ್ರಸಂಗ ನಡೆದಿತ್ತು. ನಂತರ ಆ ಜಿಂಕೆಯನ್ನು ಮತ್ತೊಂದು ವಾಹನದವರು ಎತ್ತಿಕೊಂಡು ಹೋಗಿದ್ದೂ ದೊಡ್ಡ ಸುದ್ದಿಯಾಗಿತ್ತು. ಇದೀಗ ಶಂಕರಘಟ್ಟ ವ್ಯಾಪ್ತಿಯಲ್ಲಿ ಜಿಂಕೆ ಸಾವಿನ ಎರಡು ಪ್ರಕರಣಗಳು ನಡೆದಿವೆ.
 ಈ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಜಿಂಕೆಗಳಿವೆ. ಜಿಂಕೆಯ ಸಂತಾನಾಭಿವೃದ್ಧಿ ಹೆಚ್ಚಿದ ಪರಿಣಾಮ ಅಂಕೆಗೂ ಸಿಗದಷ್ಟು ಜಿಂಕೆಗಳಿವೆ. ದಂಡುಕಟ್ಟಿಕೊಂಡು ಜಿಂಕೆಗಳು ರಾತ್ರಿ ವೇಳೆ ರಸ್ತೆ ದಾಟಿಕೊಂಡು ಓಡಾಡುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ವಾಹನಗಳು ಡಿಕ್ಕಿ ಹೊಡೆಯುತ್ತಿವೆ.
ಜಿಂಕೆ ಕಾಣುವುದು ಸಾಮಾನ್ಯ: ಶಿವಮೊಗ್ಗದಿಂದ ಲಕ್ಕವಳ್ಳಿ ಕಡೆಗೆ ಹಾಗೂ ಭದ್ರಾವತಿಯಿಂದ ಜಂಕ್ಷನ್ ಮುಖಾಂತರ ಶಂಕರಘಟ್ಟ- ಲಕ್ಕವಳ್ಳಿ ಕಡೆಗೆ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಜಿಂಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಬೆಳಗಿನ ಜಾವ 1ಗಂಟೆಯಿಂದ 3-4 ಗಂಟೆ ವರೆಗೆ ಜಂಕ್ಷನ್ ಹಾಗೂ ಶಂಕರಘಟ್ಟ ನಡುವೆ ಸಾಕಷ್ಟು ಜಿಂಕೆ ಹಿಂಡು ವಾಹನದ ಬೆಳಕಿನಲ್ಲಿ ಕಾಣಿಸುತ್ತವೆ.  ಇಲ್ಲಿ ರಸ್ತೆ ಉತ್ತಮವಾಗಿರುವ ಕಾರಣ ವಾಹನ ಸವಾರರು ಅತಿ ವೇಗದಿಂದ ವಾಹನ ಚಲಾಯಿಸುತ್ತಾರೆ. ಈ ವೇಗವೇ ಜಿಂಕೆಯ ಆಹುತಿಗೆ ಕಾರಣವಾಗುತ್ತಿದೆ ಎಂಬುದು ಅರಣ್ಯ ಇಲಾಖೆ ಸಿಬ್ಬಂದಿಯ ಅಂಬೋಣ.
ಘಟನೆ ನಡೆದ ಸ್ಥಳಕ್ಕೆ ಕನ್ನಡಪ್ರಭ ಭೇಟಿಕೊಟ್ಟಾಗ ಘಟನೆಯ ತೀವ್ರತೆ ತಿಳಿಸುವ ಅನೇಕ ಕುರುಹುಗಳು ಅಲ್ಲಿ ಕಂಡುಬಂತು. ರಸ್ತೆ ಮೇಲೆ ರಕ್ತದ ಕಲೆ ಗಾಢವಾಗಿ ಹರಡಿಕೊಂಡಿದ್ದರೆ, ಸುತ್ತಮುತ್ತಲ ಗಿಡಗಳಲ್ಲಿ ರಕ್ತ ಮೆತ್ತಿಕೊಂಡಿದೆ. ರಕ್ತದ ಘಮಟು ಕೂಡ ಇನ್ನೂ ಮಾಸಿಲ್ಲ.
ಮರಳು ಲಾರಿ ಶಂಕೆ: ಈ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತದೆ. ರಾತ್ರಿ ವೇಳೆ  ಮರಳನ್ನು ಅಕ್ರಮವಾಗಿ ಸಾಗಿಸುವ ಲಾರಿಗಳ ಹಾವಳಿ ಮಿತಿ ಮೀರಿದ್ದು, ಅತಿಯಾದ ವೇಗದಲ್ಲಿ ಚಲಿಸುತ್ತವೆ. ಈ ಲಾರಿಗಳಿಗೆ ಜಿಂಕೆಗಳು ಸಿಕ್ಕಿರುವ ಶಂಕೆ ಇದೆ ಎಂಬುದು ಈ ಭಾಗದ ಜನರ ವಿವರಣೆ.
 ಒಟ್ಟಾರೆ ರಸ್ತೆ ಅಪಘಾತದಲ್ಲಿ ಜಿಂಕೆಗಳ ಸಾವಿನ ಸರಣಿ ಮುಂದುವರಿದಿದ್ದು, ಇನ್ನೆಷ್ಟು ಜೀವಗಳು ಬಲಿಕೊಡಬೇಕೋ ಎಂಬ ಪರಿಸ್ಥಿತಿ ಇಲ್ಲಿದೆ. ಇದೇ ರಸ್ತೆಯಲ್ಲಿ ಓಡಾಡುವ ಜನರನ್ನು ಮಾತನಾಡಿಸಿದಾಗ ಅವರು ಅನೇಕ ಸಲಹೆ ನೀಡಿದ್ದಾರೆ.
ಈ ಪ್ರದೇಶದಲ್ಲಿ ಅತಿಯಾದ ಜಿಂಕೆ ಓಡಾಟ ಇರುವುದರಿಂದ ರಸ್ತೆಯಲ್ಲಿ ವೇಗ ನಿಯಂತ್ರಕ ಅಳವಡಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು ಎಂದು ಅಭಿಪ್ರಾಯಪಡುತ್ತಾರೆ.

- ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.