ಶಿವಮೊಗ್ಗ

ನೀವು ಭೂಮಿ ಕೊಡಿ, ನಾನು ರೈಲು ಕೊಡ್ತೀನಿ

Published On :

ಶಿವಮೊಗ್ಗ: ನೀವು ಭೂಮಿ ಕೊಡಿ, ಶೇ.50ರಷ್ಟು ಅನುದಾನ ಕೊಡಿ, ನಾನು ರೈಲು ಕೊಡ್ತೀನಿ...
ಇದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಭರವಸೆ. ನಗರದಲ್ಲಿ ಶನಿವಾರ ತಾಳಗುಪ್ಪ- ಶಿವಮೊಗ್ಗ ಟೌನ್- ತಾಳಗುಪ್ಪ ಪ್ಯಾಸೆಂಜರ್ ಹೊಸ ರೈಲು ಹಾಗೂ ಮೈಸೂರು- ಶಿವಮೊಗ್ಗ ಟೌನ್ ಮೈಸೂರು ಪ್ಯಾಸೆಂಜರ್ ರೈಲು ವಿಸ್ತರಣೆ ಸೇವೆಗಳಿಗೆ ಚಾಲನೆ ನೀಡಿದ ಅವರು, ಹಣದ ಲಭ್ಯತೆ ನೋಡಿಕೊಂಡು ಯಾವ್ಯಾವ ಯೋಜನೆಗಳಿಗೆ ಚಾಲನೆ ನೀಡಲು ಸಾಧ್ಯವೋ ಅವನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ರೇಲ್ವೆ ಯೋಜನೆಗಳಿಗೆ ರಾಜ್ಯದ ಪಾಲು ನೀಡಲು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಆದರೆ ಹಲವು ಯೋಜನೆಗಳಿಗೆ ಭೂಮಿ ದೊರೆಯುವುದು ವಿಳಂಬವಾಗಿದೆ. ಅನುದಾನವೂ ಸಕಾಲಕ್ಕೆ ಸಿಕ್ಕಿಲ್ಲ. ಹಾಗಾಗಿ ಹಲವು ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿವೆ. ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ರೇಲ್ವೆ ಯೋಜನೆಗಳನ್ನು ಪಡೆಯುವಲ್ಲಿ ಹಿಂದೆ ಬಿದ್ದಿದೆ. ಶೇ.14 ರೇಲ್ವೆ ಮಾರ್ಗ ಮಾತ್ರ ರಾಜ್ಯದಲ್ಲಿದೆ. ಈ ವ್ಯತ್ಯಾಸ ಸರಿದೂಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದರು.
ಸರ್ವೆ ಕಾರ್ಯ: ಪ್ರಸ್ತುತ ಶಿವಮೊಗ್ಗ- ಹರಿಹರ, ಕಡೂರು- ಸಕಲೇಶಪುರ, ತುಮಕೂರು- ದಾವಣಗೆರೆ, ಹರಿಹರ- ಕೊಟ್ಟೂರು ಹೊಸ ರೇಲ್ವೆ ಯೋಜನೆ ಸರ್ವೆ ಕಾರ್ಯ ನಡೆಯುತ್ತಿದೆ. ಆದರೆ, ರೇಲ್ವೆ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಹಸ್ತಾಂತರಿಸುವಲ್ಲಿ ವಿಳಂಬವಾಗಿರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದರು.

ತುಮಕೂರು-ಬೆಂಗಳೂರು ರೈಲು ಸಂಚಾರಕ್ಕೆ ಚಾಲನೆ
ತುಮಕೂರು: ತುಮಕೂರು-ಬೆಂಗಳೂರು ನಡುವಿನ ಪ್ರತ್ಯೇಕ ರೈಲು ಸಂಚಾರಕ್ಕೆ ಶನಿವಾರ ಅಧಿಕೃತ ಚಾಲನೆ ದೊರೆಯಿತು. ನೈಋತ್ಯ ರೇಲ್ವೆ ವಲಯದ ಬೆಂಗಳೂರು ವಿಭಾಗದ ವಿಭಾಗೀಯ ವ್ಯವಸ್ಥಾಪಕ ಸುನೀಲ್ ಕುಮಾರ್ ಅಗರ್‌ವಾಲ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಇದರಿಂದ ಸುಮಾರು 22 ವರ್ಷಗಳಿಂದ ತುಮಕೂರಿನಿಂದಲೇ ಹೊರಡುವ ರೈಲಿನ ಕೊರತೆ ಅನುಭವಿಸುತ್ತಿದ್ದ ನಾಗರಿಕರಿಗೆ ತಮ್ಮದೇ ಆದ ರೈಲು ದೊರೆತಂತಾಗಿದೆ. ಅದರಲ್ಲೂ ವಿಶೇಷವಾಗಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ನಾಗರಿಕರಿಗೆ ಅನುಕೂಲವಾಗಿದೆ. ಶನಿವಾರ ಬೆಳಗ್ಗೆ ಸುಮಾರು 6.50ಕ್ಕೆ ತುಮಕೂರು ರೈಲು ನಿಲ್ದಾಣಕ್ಕೆ ಒಂಬತ್ತು ಹೊಸ ಬೋಗಿಗಳ ನೂತನ ರೈಲು ಆಗಮಿಸುತ್ತಿದ್ದಂತೆ, ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರ ವೇದಿಕೆ ಸದಸ್ಯರಿಗೆ ಮತ್ತು ಪ್ರಯಾಣಿಕರಿಗೆ ಒಂದು ರೀತಿಯ ಸಂಭ್ರಮ. ರೈಲು ನಿಲ್ಲುತ್ತಿದ್ದಂತೆ ಅತ್ಯುತ್ಸಾಹ ಪ್ರದರ್ಶಿಸಿ ಪ್ರಯಾಣಿಕರ ವೇದಿಕೆ ಸದಸ್ಯರು ಬಾಳೆಕಂದು, ಮಾವಿನ ಸೊಪ್ಪು, ಬಣ್ಣಬಣ್ಣದ ಬಲೂನುಗಳು, ಬಣ್ಣ ಬಣ್ಣದ ಬಂಟಿಂಗ್ಸ್ ಮತ್ತು ಬಗೆಬಗೆಯ ಹೂವುಗಳಿಂದ ಅಲಂಕರಿಸಿ, ಸಂಭ್ರಮಿಸಿದರು.  ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ತುಮಕೂರು ಶಾಸಕ ಡಾ. ರಫೀಕ್ ಅಹಮದ್, ಕಾಂಗ್ರೆಸ್ ಮುಖಂಡ ಚಿಕ್ಕರಂಗಯ್ಯ ಮತ್ತಿತರರು ಹಾಜರಿದ್ದರು. ಪ್ರತಿದಿನ ಬೆಳಗ್ಗೆ 8.15ಕ್ಕೆ ತುಮಕೂರಿನಿಂದ ಬೆಂಗಳೂರಿಗೆ, ರಾತ್ರಿ 8ಕ್ಕೆ ಬೆಂಗಳೂರಿಗೆ ಈ ರೈಲು ಸಂಚರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.