ಪ್ರಸ್ತುತ ಶಿಕ್ಷಣ ಕಷ್ಟಸಾಧ್ಯ: ಪ್ರಸನ್ನಕುಮಾರ್
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.9
ಪ್ರಸ್ತುತ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟಕರವಾಗಿದ್ದು, ಇದನ್ನು ಮೀರಿ ಪೋಷಕರು ಶಿಕ್ಷಣ ನೀಡಬೇಕಾದ ಅನಿವಾರ್ಯತೆ ಹೆಚ್ಚಿದೆ. ಇದನ್ನು ವಿದ್ಯಾರ್ಥಿಗಳು ಅರಿತು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕರೆ ನೀಡಿದರು.
ಜಿಲ್ಲಾ ದೇವಾಂಗ ಸಂಘ ನಗರದ ಮಲೆನಾಡು ದೇವಾಂಗ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ಹಣ ಮಾಡುವತ್ತ ಹೊರಟಿದೆ. ಇದರ ನಡುವೆಯೂ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ ಎಂದರು.
ಸಮತೋಲನ ಅಗತ್ಯ: ಮಕ್ಕಳ ಪ್ರತಿಭೆ ಗುರುತಿಸುವುದು ಪೋಷಕರು ಹಾಗೂ ಶಿಕ್ಷಕರ ಕರ್ತವ್ಯ. ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸ ಬೇಕಾದುದು ಶಿಕ್ಷಕರ ಜವಾಬ್ದಾರಿ. ಶಾಲಾ-ಕಾಲೇಜುಗಳ ಹಂತದಲ್ಲಿ ಇಂತಹ ಕಾರ್ಯಗಳು ನಡೆಯಬೇಕು ಎಂದ ಅವರು, ಸಮಾಜದಲ್ಲಿ ಸಮತೋಲನ ಕಾಪಾಡಬೇಕಾದರೆ ಕೃಷಿ ಸೇರಿದಂತೆ ಎಲ್ಲಾ ವರ್ಗದ ವೃತ್ತಿಗಳನ್ನು ಅವಲಂಭಿಸಬೇಕು ಎಂದರು.
ದೇವಾಂಗ ಸಮಾಜದ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಬಸವಣ್ಣನಿಗಿಂತ ಮೊದಲು ಶರಣ ಸಾಹಿತ್ಯಕ್ಕೆ ನಾಂದಿ ಹಾಡಿದವರು ದೇವರದಾಸಿಮಯ್ಯ. ಇವರನ್ನು ಶರಣ ಸಾಹಿತ್ಯದ ಪಿತಾಮಹಾ ಎಂದು ಗುರುತಿಸಬೇಕಿದೆ. ಇದನ್ನು ಸರ್ಕಾರ ಮಾಡಬೇಕು ಎಂದರು.
ಇತಿಹಾಸ ತಿಳಿಯಿರಿ: ಯಾವುದೇ ರಾಜಾಶ್ರಯ ಇಲ್ಲದೇ ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸಿದವರು ದೇವರದಾಸಿಮಯ್ಯ. 12ನೇ ಶತಮಾನದಲ್ಲಿಯೇ ಕನ್ನಡ ಸಾಹಿತ್ಯ ಬಹಳ ಪ್ರಬುದ್ಧಮಾನವಾಗಿ ಬೆಳೆಯಲು ದಾಸಿಮಯ್ಯ ಅವರ ಪಾಲು ಇದೆ ಎಂದ ಅವರು, ಇತಿಹಾಸದ ಅರಿವಿದ್ದರೆ ದೇಶ ಚನ್ನಾಗಿರುತ್ತದೆ. ಭವಿಷ್ಯದ ದಾರಿ ಬಗ್ಗೆ ಪ್ರಜ್ಞೆ ಇದ್ದರೆ ಇತಿಹಾಸ ತಿಳಿದಿರಬೇಕು ಎಂದು ತಿಳಿಸಿದರು.
ಪ್ರತಿಭೆ ಎಂಬುದು ಸಾಧಕನ ಸ್ವತ್ತು. ಸಾಧನೆ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ. ಸಾಧನೆಗಾಗಿ ಅಡ್ಡದಾರಿ ತುಳಿಯಬಾರದು. ಪ್ರೋತ್ಸಾಹ ನೀಡುವವರು ಇಲ್ಲದಿದ್ದರೆ ಎಂತಹ ಚಿಲುವೆಯೂ ಕವರಿ ಹೋಗುತ್ತದೆ.
ಈ ನಿಟ್ಟಿನಲ್ಲಿ ಇಂದಿನ ಪ್ರತಿಭಾ ಪುರಸ್ಕಾರ ಅರ್ಥಪೂರ್ಣವಾಗಿದೆ ಎಂದರಲ್ಲದೇ, ವಿದ್ಯಾರ್ಥಿಗಳು ಹೆಚ್ಚು- ಹೆಚ್ಚು ಪುಸ್ತಕಗಳನ್ನು ಓದಬೇಕು. ಪುಸ್ತಕ ಓದುವುದರಿಂದ ಜ್ಞಾನವೃದ್ಧಿ ಆಗುತ್ತದೆ. ಜ್ಞಾನಿ ಆದಷ್ಟು ಅಜ್ಞಾನದ ಆಳ ಗೊತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಇದೇ ವೇಳೆ ಶಾಸಕ ಕೆ.ಬಿ. ಪ್ರಸನ್ನಕುಮಾರ್, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮಯ್ಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಟಿ. ರಾಜೇಶ್ ವಹಿಸಿದ್ದರು. ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಕೆ. ತೀರ್ಥಪ್ಪ, ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್. ಗಿರಿಯಪ್ಪ, ಎ.ಎನ್. ಕೃಷ್ಣಮೂರ್ತಿ, ಎನ್.ಟಿ. ರಂಗಪ್ಪ, ಪರಮೇಶ್ವರಪ್ಪ ಗೌಡ್ರು, ಡಿ. ಪರಸಪ್ಪ, ಬನಶಂಕರಿ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಾ ಗಿರಿಯಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

