ಶಿವಮೊಗ್ಗ

ಗಾಯನ ಮೂಲಕ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ

Published On :

ಇಂದು ಗೀತಭಾರತಿ ಉದ್ಘಾಟನೆ ೤ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ ಗೀತೆ ಗಾಯನ
ಶಿವಮೊಗ್ಗ: ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧರನ್ನು ಸ್ಮರಿಸುತ್ತಾ ್ತ, ಅವರಿಗೆ ಶ್ರದ್ಧಾಂಜಲಿಯನ್ನು ದೇಶಭಕ್ತಿ ಗೀತೆ ಗಾಯನ ಮುಖಾಂತರ ಸಲ್ಲಿಸುವ ಗೀತಭಾರತಿ ಎಂಬ ವಿನೂತನ ಕಾರ್ಯಕ್ರಮ ನಗರದಲ್ಲಿ ಆಯೋಜನೆಗೊಂಡಿದೆ.
 ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್, ಸಾಂದೀಪನಿ ಎಜುಕೇಷನಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 13ರಂದು ಸಂಜೆ 5.15ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಗೀತಭಾರತಿ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಲ್ನಾಡ್ ಓಪನ್ ಗ್ರೂಪ್ ಸಂಸ್ಥಾಪಕ ಸದಸ್ಯ ಎಚ್. ಪರಮೇಶ್ವರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶಭಕ್ತಿಗೀತೆ: ಗೀತಭಾರತಿ-2013 ಆವಾಜ್ ದೋ ಹಂ ಏಕ್‌ಹೈ ಎಂಬ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. 13 ಶಾಲೆಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪಿಇಎಸ್ ಪಬ್ಲಿಕ್ ಶಾಲೆ, ಮೇರಿ ಇಮ್ಯಾಕ್ಯುಲೇಟ್ ಹಿ.ಪ್ರಾ. ಶಾಲೆ, ನ್ಯಾಷನಲ್ ಪಬ್ಲಿಕ್ ಶಾಲೆ, ಭಾರತೀಯ ವಿದ್ಯಾಭವನ, ಡಿವಿಎಸ್ ಶಾಲೆ, ಶಾರದಾದೇವಿ ಅಂಧರ ವಸತಿ ಶಾಲೆ, ಜ್ಞಾನದೀಪ ಶಾಲೆ, ಮಂದಾರ ಜ್ಞಾನ ದಾಯಿನಿ ಶಾಲೆ, ಕಸ್ತೂರ್ಬಾ ಪ್ರೌಢಶಾಲೆ, ಸಹಚೇತನ ನಾಟ್ಯಾಲಯ, ವಾಸವಿ ವಿದ್ಯಾಲಯ, ಸಾಂದೀಪನಿ ಆಂಗ್ಲ ಪ್ರೌಢಶಾಲೆ, ಭದ್ರಾವತಿಯ ಸೇಂಟ್ ಚಾರ್ಲ್ಸ್ ಇಂಗ್ಲಿಷ್ ಶಾಲೆ, ಸಾಗರ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.
ರವೀಂದ್ರನಾಥ್ ಉದ್ಘಾಟನೆ: ಕಾರ್ಯಕ್ರಮದ ಉದ್ಘಾಟಕರಾಗಿ ವೀರಚಕ್ರ ಪ್ರಶಸ್ತಿ ಪುರಸ್ಕೃತ ಕರ್ನಲ್ (ನಿವೃತ್ತ) ಎಂ.ಬಿ. ರವೀಂದ್ರನಾಥ್ ಆಗಮಿಸಲಿದ್ದು, ಯುವ- ಯೋಧ ಮಂಥನದಲ್ಲಿ ಕಾರ್ಗಿಲ್ ಯುದ್ಧದ ಅನುಭವವನ್ನು ಹಾಗೂ ಪ್ರಸ್ತುತ ಸನ್ನಿವೇಶದಲ್ಲಿ ದೇಶ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಕುರಿತು ಮಾತನಾಡಲಿದ್ದಾರೆ.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಲ್ನಾಡ್ ಓಪನ್ ಗ್ರೂಪ್ ಸಂಸ್ಥಾಪಕ ಸದಸ್ಯ ಕೆ. ರವಿ, ಸಾಂದೀಪನಿ ಶಿಕ್ಷಣ ಟ್ರಸ್ಟ್ ನಿರ್ದೇಶಕ ಎಂ. ರಾಜಶೇಖರ್ ಉಪಸ್ಥಿತರಿರುವರು. ಮಾಗ್ ಸಮಿತಿ ಅಧ್ಯಕ್ಷ ಎಚ್. ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ದಿನ ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಸ್ಕೌಟ್ ಭವನದ ಆವರಣದಲ್ಲಿ ಎಂ.ಬಿ. ವೀರೇಂದ್ರನಾಥ್ ಮಕ್ಕಳೊಂದಿಗೆ ಸಂವಾದ ನಡೆಸುವರು. ಅತ್ಯಂತ ವೈಶಿಷ್ಟ್ಯಪೂರ್ಣ, ಮಕ್ಕಳಲ್ಲಿ ದೇಶಭಕ್ತಿ ಭಾವನೆ ಹೆಚ್ಚಿಸುವ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ನಾಗರಿಕರು ಭಾಗವಹಿಸುವಂತೆ ಕೋರುತ್ತೇವೆ ಎಂದು ಪರಮೇಶ್ವರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಂದೀಪನಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ವರ್ಮ, ರಾಜೇಶ್ ವಿ. ಅವಲಕ್ಕಿ, ನೂರ್ ಅಹ್ಮದ್ ಉಪಸ್ಥಿತರಿದ್ದರು.

ರವೀಂದ್ರನಾಥ್ ಮಾತುಕೇಳಿ ಬನ್ನಿ...
ಗೀತಭಾರತಿ ಕಾರ್ಯಕ್ರಮದ ಪ್ರಧಾನ ಆಕರ್ಷಣೆ ಕರ್ನಲ್ ರವೀಂದ್ರನಾಥ್ ಹಾಗೂ ಅವರ ಮಾತುಗಳು. ಸೈನ್ಯದಲ್ಲಿ ಅತ್ಯುನ್ನತ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಗಳನ್ನು ಮೂರನೇ ಸ್ಥಾನ ಪಡೆದಿರುವ ವೀರಚಕ್ರ ಸಮ್ಮಾನ್ ಗೌರವ ಹೊಂದಿರುವ ಕರ್ನಲ್ ರವೀಂದ್ರನಾಥ್ ಸಾಧನೆಯನ್ನು ಒಂದಿಷ್ಟು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.
ದಾವಣಗೆರೆ ಮೂಲ: ಮೂಲತಃ ದಾವಣಗೆರೆ ಜಿಲ್ಲೆಯ ಮಾಗೋಡು ಗ್ರಾಮದವರಾದ ರವೀಂದ್ರನಾಥ್ 10ನೇ ವಯಸ್ಸಿನಲ್ಲಿ ಐದನೇ ತರಗತಿಗೆ ಬಿಜಾಪುರ ಸೈನಿಕ ಶಾಲೆಯನ್ನು ಸೇರಿ, ಅಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡುತ್ತಲೇ ಮುಂದೊಂದು  ದಿನ ದೇಶದ ಅತ್ಯುನ್ನತ ಸೈನಿಕ ಹುದ್ದೆಯನ್ನು ಅಲಂಕರಿಸುವತ್ತ ಚಿತ್ತ ಹರಿಸಿದ್ದರು.
1976ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1980ರಲ್ಲಿ ಖಡಕ್ ವಾಸ್ಲಾ ತರಬೇತಿ ಕೇಂದ್ರದಲ್ಲಿ ಬಿಎಸ್ಸಿ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದರು. ನಂತರ ಡೆಹ್ರಾಡೂನ್ ಸೈನಿಕ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದು ಅರುಣಾಚಲ ಪ್ರದೇಶದಲ್ಲಿ ತಮ್ಮ ಸೇವೆ ಪ್ರಾರಂಭಿಸಿದರು.
ಇನ್ಸ್‌ಪೆಕ್ಟರ್ ಹುದ್ದೆ: ಕಠಿಣ ಪರಿಶ್ರಮದಿಂದ ಮಹೋ ಮಿಲಿಟರಿ ತರಬೇತಿ ಶಾಲೆಯಲ್ಲಿ ಇನ್‌ಸ್ಪೆಕ್ಟರ್ ಹುದ್ದೇಗೇರಿದರು. 1986-87ರಲ್ಲಿ ಜಮ್ಮು ಕಾಶ್ಮಿರದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡರು. ಅದೇ ಸ್ಥಳದಲ್ಲಿ 1989-90 ಮತ್ತು 1994-96ರಲ್ಲಿ ತಮ್ಮ ಸೇವೆ ಮುಂದುವರಿಸಿದರು. ನಂತರ ವೆಲ್ಲಿಂಗ್‌ಟನ್ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜಿನಲ್ಲಿ ತರಬೇತಿ ಪಡೆದುಕೊಂಡರು.
 ಇವರು ಭಯೋತ್ಪಾದನೆ ವಿರುದ್ಧ ಮಿಲಿಟರಿ ತಂತ್ರಗಳ ಯೋಜನೆ, ಮತ್ತು ಕಾರ್ಯರೂಪಕ್ಕೆ ತರುವಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ವಿಶೇಷವಾಗಿ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಇವರು ತಮ್ಮ ವಿಶಿಷ್ಟ ಯುದ್ಧ ಯೋಜನೆಗಳಿದಾಗಿ ಯುದ್ಧದ ಅತ್ಯಂತ ಪ್ರಮುಖ ಹಂತಗಳಾದ ತೋಲೋಲಿಂಗ್ ಬೆಟ್ಟದ ಮರುವಶದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಯುದ್ಧ ತಂತ್ರಗಳನ್ನು ಕಂಪ್ಯೂಟರ್ ಯೋಜನೆಯಲ್ಲಿ ಸಿದ್ಧಪಡಿಸುವಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಇಂತಹ ಮಹಾನ್ ನಾಯಕನ ಮನದಾಳದ ಮಾತು ಕೇಳುವ ಅವಕಾಶ ಶಿವಮೊಗ್ಗ ನಾಗರಿಕರಿಗೆ ಒದಗಿಬಂದಿದೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್, ಸಾಂದೀಪನಿ ಎಜುಕೇಷನಲ್ ಟ್ರಸ್ಟ್ ಈ ಅವಕಾಶ ಮಾಡಿಕೊಟ್ಟಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.