ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಲಿ: ಕಿಶೋರ್
ಸಾಗರ: ಸರ್ಕಾರ ಜಾರಿಗೆ ತರುವ ರೈತಪರ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ಸರ್ಕಾರೇತರ ಸಂಘಟನೆಗಳ ಪಾತ್ರ ಮಹತ್ವದ್ದು ಎಂದು ಬೆಂಗಳೂರು ಕಾರ್ಪೋರೇಶನ್ ಬ್ಯಾಂಕಿನ ಸಾಲ ವಿಭಾಗದ ಮುಖ್ಯಸ್ಥ ಕಿಶೋರ್ ಹೇಳಿದರು.
ತಾಲೂಕಿನ ಉಪ್ಪಳ್ಳಿ ಗ್ರಾಮದಲ್ಲಿ ಸಾವಯವ ಕೃಷಿ ಪರಿವಾರ ಸ್ಥಳೀಯ ಶರಾವತಿ ಕೃಷಿ ಪರಿವಾರದ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸೆಖೆಮನೆ (ಪಾಲಿಹೌಸ್) ಕೃಷಿ ಕುರಿತು ಮಾತುಕತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ತಲುಪಲಿ: ಕೃಷಿ ಕ್ಷೇತ್ರಕ್ಕೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಆದರೆ ಮಾಹಿತಿ ಕೊರತೆ, ಇನ್ನಿತರ ಕಾರಣದಿಂದ ಯೋಜನೆಗಳು ಅರ್ಹರನ್ನು ತಲುಪುವಲ್ಲಿ ವಿಫಲವಾಗುತ್ತವೆ. ಈ ನಿಟ್ಟಿನಲ್ಲಿ ಸರ್ಕಾರೇತರ ಸಂಘಟನೆಗಳು ಸರ್ಕಾರ ಮತ್ತು ಕೃಷಿ ಫಲಾನುಭವಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಸದುಪಯೋಗ ಪಡೆಯಿರಿ: ಕಾರ್ಪೋರೇಶನ್ ಬ್ಯಾಂಕ್ ಕಳೆದ ನಾಲ್ಕಾರು ವರ್ಷಗಳಿಂದ ಕೃಷಿ ಕ್ಷೇತ್ರದತ್ತ ಕೇಂದ್ರೀಕರಿಸಿದೆ. ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಇನ್ನಿಲ್ಲದಂತೆ ಸಾಲಸೌಲಭ್ಯ ನೀಡುತ್ತಿದೆ. ರಾಜ್ಯಾದ್ಯಂತ ಕೃಷಿಯ ಬೇರೆಬೇರೆ ವಿಭಾಗಗಳಿಗೆ ಬ್ಯಾಂಕ್ ಸಾಲ ನೀಡಲು ಸಿದ್ಧವಿದ್ದು ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸೆಖೆಮನೆ ಕೃಷಿ ಹೆಚ್ಚು ಚಾಲ್ತಿಯಲ್ಲಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೃಷಿಕರು ಇದನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಬಹುಬೇಡಿಕೆಯ ವಿವಿಧ ಜಾತಿಯ ಅಲಂಕಾರಿಕ ಹೂವಿನ ಗಿಡ, ತರಕಾರಿಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಿದ್ದಾರೆ. ಉಪ್ಪಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಸೆಖೆಮನೆ ಕೃಷಿ ಕೈಗೊಂಡು ಗಮನ ಸೆಳೆದಿದ್ದಾರೆ. ರೈತರು ಈ ಬಗ್ಗೆ ಸರಿಯಾದ ಮಾಹಿತಿ ಪಡೆದು ಯಾವ ಬೆಳೆ ಬೆಳೆದರೆ ಹೆಚ್ಚು ಲಾಭ ಗಳಿಸಬಹುದು ಎಂದು ತೀರ್ಮಾನಿಸಿ ಮುಂದಾದರೆ ಬ್ಯಾಂಕು ಅದಕ್ಕೆ ಬೇಕಾದ ಆರ್ಥಿಕ ಸಹಾಯ ನೀಡುತ್ತದೆ ಎಂದು ಹೇಳಿದರು.
ಕೀಟಬಾಧೆ ತಡೆ: ಕೃಷಿ ವಿಜ್ಞಾನಿ ಡಾ. ಶಂಕರ ಹೆಬ್ಬಾರ ಮಾತನಾಡಿ, ಸೆಖೆಮನೆ ಕೃಷಿಯಿಂದ ಗುಣಮಟ್ಟದ ಉತ್ಪಾದನೆ ಸಾಧ್ಯವಾಗುತ್ತದೆ. ಅದರಲ್ಲಿಯೂ ಸಾವಯವ ಕೃಷಿ ಕೈಗೊಂಡರೆ ಕೀಟಬಾಧೆ ಹಾಗೂ ರೋಗಬಾಧೆಯಿಂದ ಮುಕ್ತವಾಗಬಹುದು. ಸಾವಯವ ಕೃಷಿಯಿಂದ ಮೂರುಪಟ್ಟು ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
16 ಲಕ್ಷ ವರೆಗೆ ಸಹಾಯಧನ: ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಡಿ.ಕೆ. ತಿಮ್ಮಪ್ಪ, ಸೆಖೆಮನೆ ಕೃಷಿಗೆ ಸರ್ಕಾರ ತೋಟಗಾರಿಕೆ ಇಲಾಖೆ ಮೂಲಕ ವೆಚ್ಚದ ಶೇ.50ರಷ್ಟು ಸಹಾಯಧನ ನೀಡುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಒಂದು ಎಕರೆ ಪ್ರದೇಶಕ್ಕೆ ಗರಿಷ್ಠ 16 ಲಕ್ಷದವರೆಗೆ ಸಹಾಯಧನ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಮುನ್ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಸಾವಯವ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಆ.ಶ್ರೀ. ಆನಂದ್, ಸಾವಯವ ಕೃಷಿ ಪರಿವಾರ ಒಕ್ಕೂಟದ ರಾಜ್ಯಾಧ್ಯಕ್ಷ ಸಂಗನಗೌಡರು, ಪ್ರಗತಿಪರ ಪಾಲಿಹೌಸ್ ಕೃಷಿಕ ರಫಿಕ್, ಕೃಷಿ ವಿಜ್ಞಾನಿ ಡಾ. ರೂಪಾಲಿ ಕುಲಕರ್ಣಿ ಮತ್ತಿತರರು ಹಾಜರಿದ್ದರು. ನಂತರ ಸೆಖೆಮನೆ ಕೃಷಿ ಕುರಿತು ಸಂವಾದ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

