ಸರ್ವಶಿಕ್ಷಣ ಅಭಿಯಾನಕ್ಕೆ ಎಂಜಿನಿಯರ್ಗಳ ಬಿಟ್ಟಿ ಚಾಕರಿ
ಬೆಂಗಳೂರು: ಓದಿದ್ದು ಬಿಇ, ಮಾಡುತ್ತಿರೋದು ಬಿಟ್ಟಿ ಚಾಕರಿ.
ಅಚ್ಚರಿ ಏನಪ್ಪಾ ಅಂದರೆ, ಎಂಜಿನಿಯರಿಂಗ್ ಮಾಡಿ ಬಿಟ್ಟಿ ಚಾಕರಿ ಮಾಡುತ್ತಿರುವುದು ರಾಜ್ಯದ ಶಿಕ್ಷಣ ಇಲಾಖೆಗೆ. ಶಿಕ್ಷಣ ಇಲಾಖೆಗೆ ಹಣದ ಕೊರತೆ ಏನಿಲ್ಲ, ಕೇಂದ್ರದಿಂದಲೂ ಸಾಕಷ್ಟು ಹಣದ ಹೊಳೆಯೇ ಹರಿಯುತ್ತಿದೆ. ಆದರೆ, ಕೆಲಸ ಮಾಡಿದವರಿಗೆ ವೇತನ ಕೊಡಲು ಮಾತ್ರ ಇಲಾಖೆ ಕಂಜೂಸುತನ ಪ್ರದರ್ಶಿಸುತ್ತಿದೆ.
ವಿಷಯವಿಷ್ಟು, ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿವಿಧ ಸಿವಿಲ್ ಕಾಮಗಾರಿಗಳು ನಡೆದುಕೊಂಡು ಬಂದಿವೆ. ಇದರ ನಿಗಾವಣೆ ಉದ್ದೇಶದಿಂದ ಪ್ರತಿ ಶೈಕ್ಷಣಿಕ ಬ್ಲಾಕ್ಗೆ ಬಿಇ ಅಥವಾ ಡಿಪ್ಲಮೊ ಪದವೀಧರರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಹಾಗೆಯೇ ಪ್ರತಿ ಜಿಲ್ಲೆಗೊಬ್ಬರಂತೆ ಜಿಲ್ಲಾ ಎಂಜಿನಿಯರ್ಗಳನ್ನೂ ನೇಮಿಸಲಾಗಿದೆ. ಇವರಿಗೆ ಕಾಲಕ್ಕೆ ಸರಿಯಾದ ವೇತನ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆ ವಿಫಲವಾಗಿದೆ.
ವೇತನ ನೀಡಿಲ್ಲ: ಸರ್ಕಾರವೇ ನೇರವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡ ಎಂಜಿನಿಯರ್ಗಳಿಗೆ ಕಳೆದ ಸೆಪ್ಟೆಂಬರ್ನಿಂದ ವೇತನ ನೀಡಿಲ್ಲ. ಇನ್ನು ಖಾಸಗಿ ಕಂಪನಿಯ ಮುಖಾಂತರ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಲಾಗಿಲ್ಲ.
ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿಗಳೇ ಈ ಮಾಹಿತಿ ಖಚಿತಪಡಿಸಿದ್ದು, ಈ ಸಮಸ್ಯೆ ಇಂದಿನದಲ್ಲ, ಸರಿಯಾಗಿ ವೇತನ ಬಿಡುಗಡೆ ಮಾಡುವ ವ್ಯವಸ್ಥೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ.
202 ಶೈಕ್ಷಣಿಕ ಬ್ಲಾಕ್, 32 ಶಿಕ್ಷಣ ಜಿಲ್ಲೆಗಳ ಪೈಕಿ ಅಂದಾಜು 190 ಎಂಜಿನಿಯರ್ಗಳಿಗೆ ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡಿಲ್ಲ. ತಾಲೂಕಿಗೆ ತಲಾ ಇಬ್ಬರು ಡೇಟಾ(ಪ್ರೋಗ್ರಾಮರ್) ಆಪರೇಟರ್ ಇದ್ದಾರೆ. ಮೊಬೈಲ್ ಸಹಾಯಕ ಲೆಕ್ಕಾಧಿಕಾರಿಗಳಿದ್ದಾರೆ, ಅವರಿಗೂ ವೇತನ, ಭತ್ಯೆಗಳನ್ನು ನಿಯಮಿತವಾಗಿ ನೀಡಲಾಗಿಲ್ಲ.
ಅಡಕತ್ತರಿಯಲ್ಲಿ:
ಶಾಲಾ ಕಾಂಪೌಂಡ್, ಶೌಚಾಲಯ, ಕೊಠಡಿ, ಕಟ್ಟಡ ದುರಸ್ತಿ ಸೇರಿದಂತೆ ಶಾಲೆಯ ಸಿವಿಲ್ ಕಾಮಗಾರಿಗಳ ಮೇಲ್ವಿಚಾರಣೆಯನ್ನು ಎಂಜಿನಿಯರ್ಗಳು ಮಾಡುತ್ತಾರೆ. ತಮ್ಮ ಕೇಂದ್ರ ಸ್ಥಾನದಿಂದ ಅವರು ಕಾಮಗಾರಿ ನಡೆಯುವ ಶಾಲೆಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಕಾಮಗಾರಿ ಗುಣಮಟ್ಟದ ಮೇಲೆ ನಿಗಾ ಇಡುವ ಕಾರ್ಯ ಮಾಡುತ್ತಾರೆ.
ಶೈಕ್ಷಣಿಕ ಬ್ಲಾಕ್ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಂಜಿನಿಯರ್ಗಳಿಗೆ 17 ಸಾವಿರ ರುಪಾಯಿ, ಜಿಲ್ಲಾ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ 24 ಸಾವಿರ ರುಪಾಯಿ ವೇತನ ನಿಗದಿ ಮಾಡಲಾಗಿತ್ತು. ಆದರೆ, ಗುತ್ತಿಗೆ ಜಾರಿಯಾದಾಗಿನಿಂದ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಎಂಜಿನಿಯರ್ಗಳಿಗೆ ವೇತನ ನೀಡಲಾಗಿಲ್ಲ.
ಮೇಲ್ವಿಚಾರಣೆ ಹೊಣೆ: ಜೊತೆಗೆ ಟಿಎ, ಡಿಎ ಭತ್ಯೆಗಳನ್ನು ನಿಗದಿಮಾಡಿದ್ದು, ಅದು ಕೂಡ ಸಂದಾಯವಾಗಿಲ್ಲ. ಹೀಗಾಗಿ ಶಾಲೆಗಳಿಗೆ ಭೇಟಿಕೊಟ್ಟು ಈ ಎಂಜಿನಿಯರ್ಗಳು ಕಾಮಗಾರಿ ಪರಿಶೀಲನೆ ನಡೆಸಲು ಸಾಧ್ಯವಿಲ್ಲದಂತಾಗಿದೆ. ವಿಶೇಷವೆಂದರೆ ಕಾಮಗಾರಿ ಮೇಲ್ವಿಚಾರಣೆ ಕಾರ್ಯವಷ್ಟೇ ಇವರ ಕೆಲಸ. ಕಾಮಗಾರಿ ನಿರ್ವಹಿಸುವವರು ಬೇರೆಯವರು. ಆದರೂ, ಶಿಕ್ಷಣ ಇಲಾಖೆ ಮಾತ್ರ ಸಂಬಳ ಪಾವತಿ ಮಾಡಲು ಕುಂಟುನೆಪ ಹೇಳುತ್ತಿದೆ.
ಸಿಬ್ಬಂದಿ ಪೂರೈಸಲು ಗುತ್ತಿಗೆ ಪಡೆದಿರುವ ಆಸ್ಟ್ರಿಕ್ಸ್ ಖಾಸಗಿ ಕಂಪನಿಯ ಸಿಬ್ಬಂದಿ ಹೇಳುವಂತೆ, ಸರ್ವಶಿಕ್ಷಣ ಅಭಿಯಾನದಿಂದಲೇ ನಮಗೆ ಹಣ ಬಂದಿಲ್ಲ. ನಮಗೆ ಹಣ ಬಂದಿದ್ದರೆ ನಾವೇಕೆ ಇಟ್ಟುಕೊಳ್ಳುತ್ತೇವೆ. ನಾವು ಸಹ ಹಣ ಬಿಡುಗಡೆಗೆ ಎದುರು ನೋಡುತ್ತಿದ್ದೇವೆ ಎಂದು ಉತ್ತರಿಸುತ್ತಾರೆ. ಇತ್ತೀಚೆಗಷ್ಟೆ ರಾಜ್ಯಮಟ್ಟದ ಜಿಲ್ಲಾಧಿಕಾರಿಗಳ ಸಭೆಯಲ್ಲಿ(ವಿಡಿಯೋ ಕಾನ್ಫರೆನ್ಸ್) ಸಹ ಈ ಸಮಸ್ಯೆ ಪ್ರಸ್ತಾಪವಾಗಿತ್ತು.
ಪಾವತಿಸಿದ ಹಣಕ್ಕೂ ಕೊಕ್ಕೆ: ಇನ್ನೊಂದೆಡೆ ಸಂಬಳ ಆಗಿಲ್ಲವೆಂದು ಅಧಿಕಾರಿಗಳ ಬಳಿ ಈ ಸಿಬ್ಬಂದಿ ಅಳಲು ತೋಡಿಕೊಂಡರೆ ಗದರಿಕೆ ಉತ್ತರ ಕೇಳಬೇಕಾಗಿದೆ.
ಕೆಲಸ ಹೋದರೆ ಹೋಯಿತೆಂದು ಬಿಟ್ಟು ಕೆಲವು ಹೊರಟಿದ್ದೂ ಇದೆ. ಹಾಗೆ ಬಿಟ್ಟುಹೋಗಲೂ ಒಂದು ತೊಡಕಿದೆ, ಖಾಸಗಿ ಕಂಪನಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಾಗ ಒಂದು ತಿಂಗಳ ವೇತನದ ಡಿಡಿಯನ್ನು ಪಡೆದುಕೊಂಡಿದೆ. ಹೀಗಾಗಿ ಕೆಲಸ ಬಿಟ್ಟರೆ ಇಷ್ಟು ದಿನ ಕೆಲಸ ಮಾಡಿದ ಹಣದ ಜೊತೆಗೆ ಮುಂಗಡವಾಗಿ ಪಾವತಿಸಿದ ಒಂದು ತಿಂಗಳ ವೇತನವೂ ಕೈಬಿಟ್ಟುಹೋಗಲಿದೆ.
ಒಟ್ಟಾರೆ ಬೇರೆ ಕಡೆ ಕೆಲಸಕ್ಕೂ ಹೋಗಲಾಗದೇ, ಇಲ್ಲೂ ಇರಲಾಗದೆ ಅತಂತ್ರರಾಗಿದ್ದಾರೆ.
ಕೆಲಸದಲ್ಲಿ ಮುಂದುವರಿಯುವುದಕ್ಕೂ ಸಮಸ್ಯೆ ಇದೆ. ನೀವು ಶಾಲೆಗಳಿಗೆ ಭೇಟಿಕೊಡಿ ಎಂದು ಅಧಿಕಾರಿಗಳಿಂದ ನಿರ್ದೇಶನಬರುತ್ತದೆ, ತಿಂಗಳುಗಟ್ಟಲೆ ಸಂಬಳ, ಭತ್ಯೆ ಇಲ್ಲದೇ ಶಾಲೆಗಳಿಗೆ ಪರಿಶೀಲನೆಗೆ ತೆರಳಲೂ ಈ ಎಂಜಿನಿಯರ್ಗಳಿಗೆ ಸಾಧ್ಯವಿಲ್ಲವಾಗಿದೆ.
ಎಂಜಿನಿಯರ್ಗಳು, ಡೇಟಾ ಆಪರೇಟರ್, ಮೊಬೈಲ್ ಲೆಕ್ಕಾಧಿಕಾರಿಗಳ ಈ ಸಮಸ್ಯೆ ಬಗ್ಗೆ ಶಿಕ್ಷಣ ಸಚಿವರು, ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಜಾಣ ಮೌನ ವಹಿಸಿದ್ದಾರೆ.
ಈ ಸಮಸ್ಯೆ ಇಂದಿನದಲ್ಲ. ಹಾಗೆಯೇ, ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಂಬಳ ಕೊಡಲಾಗಲ್ಲ. ಕೆಲಸ ಮಾಡಿದ್ದು ಖಾತ್ರಿಯಾಗಬೇಕು. ಕೆಲಸ ಮಾಡಿದ್ದು ಖಾತ್ರಿ ಪಡಿಸಿಕೊಳ್ಳುವ ಕಾರ್ಯ ನಡೆದಿದ್ದು, ಈ ಪ್ರಕ್ರಿಯೆ ಮುಗಿದ ನಂತರ ವೇತನ ನೀಡಲಾಗುತ್ತದೆ.
- ಸುಬೋದ್ ಯಾದವ್,
ಯೋಜನಾ ನಿರ್ದೇಶಕ, ಸರ್ವ ಶಿಕ್ಷಣ ಅಭಿಯಾನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

