ಶಿವಮೊಗ್ಗ

ಬತ್ತ ಬೆಳೆ ಕ್ಷೇತ್ರೋತ್ಸವ

Published On :

ಸೊರಬ: ತಾಲೂಕು ಹಿರೇಚೌಟಿ ಗ್ರಾಮದಲ್ಲಿ ಈಚೆಗೆ ಗ್ರಾಪಂ ಸದಸ್ಯೆ ಹಾಲಮ್ಮ ಅಧ್ಯಕ್ಷತೆಯಲ್ಲಿ ಬತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭೂದಾನಿ ರೈತ ಕೆ. ಚಂದ್ರಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಆನವಟ್ಟಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮೃತಾ ಭೂ ಚೇತನ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ರೈತ ಅನುವುಗಾರ ಫಾಲಾಕ್ಷಪ್ಪ 9 ವಾರಗಳ ಕಾಲ ರೈತ ಕ್ಷೇತ್ರ ಪಾಠಶಾಲೆ ನಡೆಸಿ ಕೃಷಿ ಮಾಹಿತಿ ನೀಡಿದರು. ರೈತರಾದ ಶಿವಲಿಂಗಸ್ವಾಮಿ, ಪ್ರಭು, ಕೃಷ್ಣಪ್ಪ ಇತರರು ಹಾಜರಿದ್ದರು.
ವಿತರಣೆಯಾಗದ ಸೈಕಲ್: ಆಕ್ರೋಶ
ಹೊಸನಗರ: ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಗಿದ್ದು, ಇಲ್ಲಿ ಮಾತ್ರ ಒಂದು ಸೈಕಲ್ ವಿತರಣೆಯಾಗಿಲ್ಲ. ಶಿಕ್ಷಣ ಸಚಿವರ ಕ್ಷೇತ್ರದಲ್ಲಿಯೆ ಹೀಗಾದರೆ ಹೇಗೆ ಎಂದು ತಾಪಂ ಸದಸ್ಯರು ಟೀಕಿಸಿದರು. ಸೋಮವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯರು, ಬೇರೆ ತಾಲೂಕಲ್ಲಿ ಕೊಟ್ಟರೂ ಹೊಸನಗರದಲ್ಲಿ ತಡವಾಗಿರುವುದು ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಸದಸ್ಯ ಕುನ್ನೂರು ಮಂಜಪ್ಪ, ಬಿಜೆಪಿ ಸರ್ಕಾರದ ತಪ್ಪಿನಿಂದ ಸೈಕಲ್ ವಿತರಣೆಯಲ್ಲಿ ವಿಳಂಬವಾಗಿದೆ. ಈ ಬಗ್ಗೆ ಶಿಕ್ಷಣ ಸಚಿವರೇ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.  ಇದಕ್ಕೆ ಮಂಜುನಾಥ್ ಸೇರಿದಂತೆ ಉಳಿದ ಬಿಜೆಪಿ ಸದಸ್ಯರು ಇಲ್ಲಿ ಯಾವ ಸರ್ಕಾರದ ತಪ್ಪು ಎಂದು ಚರ್ಚೆಯಾಗುತ್ತಿಲ್ಲ. ನಮ್ಮ ತಾಲೂಕಲ್ಲಿ ಬೇಗ ವಿತರಣೆಯಾಗಲಿ ಎಂದು ಆಗ್ರಹಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಬಿಇಒ ವೀರಭದ್ರಪ್ಪ, ಎಲ್ಲ 1420 ವಿದ್ಯಾರ್ಥಿಗಳಿಗೂ ಸೈಕಲ್ ವಿತರಣೆಯಾಗಲಿದೆ ಎಂದರು. ಉಪಾಧ್ಯಕ್ಷೆ ಗೀತಾ ನಿಂಗಪ್ಪ, ಇಒ ಶ್ರೀಧರ ವಿ. ಭಟ್, ಸದಸ್ಯರಾದ ಸುಮಾ ಸುಬ್ರಹ್ಮಣ್ಯ, ಜಯಲಕ್ಷ್ಮೀ ವೆಂಕಟೇಶ್ ಆಚಾರ್, ನಿರ್ಮಲಾ ಗಣೇಶ್, ಪೂರ್ಣಿಮಾ ಮೂರ್ತಿರಾವ್, ಶಾಂತಾ ಶೇಖರಪ್ಪ, ಮುಂಬಾರು ಗ್ರಾಪಂ ಅಧ್ಯಕ್ಷ ತುರಗೋಡು ನಾಗರಾಜ್ ಇತರರು ಇದ್ದರು.
ಅವಧಿ ವಿಸ್ತರಣೆ
ಶಿವಮೊಗ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೊಳಪಡುವ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು, ಸೇರ್ಪಡೆ, ತಿದ್ದುಪಡಿ, ಬಿಟ್ಟುಬಿಡುವಿಕೆಯ ಅರ್ಜಿಗಳನ್ನು ಸಲ್ಲಿಸುವ ಅವಧಿಯು ನ. 29ರವರೆಗೆ ಇದ್ದು, ಭಾರತ ಚುನಾವಣಾ ಆಯೋಗವು ಸಂಬಂಧಪಟ್ಟ ಅರ್ಜಿಗಳನ್ನು ಸಲ್ಲಿಸುವ ಅವಧಿಯನ್ನು  ಡಿ. 6ರವರೆಗೆ ವಿಸ್ತರಿಸಿದೆ. ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಎಚ್‌ಐವಿ ಪೀಡಿತರಲ್ಲಿ ಆತ್ಮವಿಶ್ವಾಸ ಮೂಡಿಸಿ
ಶಿವಮೊಗ್ಗ: ಏಡ್ಸ್ ಪೀಡಿತರನ್ನು ಸಮಾಜ ಹಾಗೂ ಕುಟುಂಬ ವರ್ಗದವರು ಕೀಳಾಗಿ ಕಾಣದೇ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಣ್ಣರೆಡ್ಡಿ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪ್ರಮಾಣ ಕಡಿಮೆ: ರಾಜ್ಯದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಇಂದು ಏಡ್ಸ್ ರೋಗಿಗಳ ಪ್ರಮಾಣ ಕಡಿಮೆಯಾಗುತ್ತಿದೆ. ಆದರೂ ಇದನ್ನು ಬುಡ ಸಹಿತ ಕೀಳುವ ಅಗತ್ಯವಿದೆ.ಎಂದರು.
ಆಧಾರ ರಕ್ತದಾನಿಗಳ ಸಂಘದ ನಿರ್ದೇಶಕ ಲೋಕನಾಥ್ ಮಾತನಾಡಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿ ಡಾ. ನಟರಾಜ್, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ರುದ್ರಪ್ಪ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಾ. ಧರಣೇಂದ್ರ ಕುಮಾರ್, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿ ಜಯಲಕ್ಷ್ಮಿ, ಅನ್ನಪೂರ್ಣ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.