ಅನುದಾನ ನೀಡದಿದ್ದರೆ ಆಮರಣಾಂತ ಉಪವಾಸ
ಕ.ಪ್ರ.ವಾರ್ತೆ ಸಾಗರ ಡಿ. 23
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವಕ್ಕೆ ಅನುದಾನ ನೀಡಬೇಕೆನ್ನುವ ಮನವಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.
80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತರಾಗಿರುವ ಡಾ.ನಾ.ಡಿಸೋಜ ಅವರಿಗೆ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲು ಸೋಮವಾರ ಸಾಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಾಶ್ರಯದಲ್ಲಿ ಆರಂಭಗೊಂಡ ಸಾಹಿತ್ಯ ಪರಿಷತ್ತಿಗೆ ನಂತರದ ಪ್ರಜಾಪ್ರಭುತ್ವದ ಎಲ್ಲ ಸರ್ಕಾರಗಳು ಅನುದಾನ ನೀಡಿವೆ. ಈಗ ನಾವು ಭಿಕ್ಷೆ ಕೇಳುತ್ತಿಲ್ಲ. ಅನುದಾನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.
ಸರ್ಕಾರ ಸ್ಪಂದಿಸುತ್ತಿಲ್ಲ: ಮುಂದಿನ ವರ್ಷ ಪರಿಷತ್ತಿಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಶತಮಾನೋತ್ಸವ ಆಚರಣೆಗೆ 12 ಕೋಟಿ ರು. ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಲಾಗಿದೆ. 5ಕೋಟಿ ರು. ಶತಮಾನೋತ್ಸವ ಭವನ ನಿರ್ಮಾಣಕ್ಕೆ ಹಾಗೂ 7ಕೋಟಿ ರು. ರಾಜ್ಯದಾದ್ಯಂತ ಶತಮಾನೋತ್ಸವ ಕಾರ್ಯಕ್ರಮ ಆಚರಣೆಗೆ ನೀಡುವಂತೆ ಕೇಳಲಾಗಿದೆ. ಆದರೆ ಸರ್ಕಾರ ಪರಿಷತ್ತಿನ ಮನವಿಗೆ ಇದುವರೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ ಎಂದರು.
ಮುಖ್ಯಮಂತ್ರಿಗಳು ಅವರ ಸ್ವಂತ ಹಣವನ್ನು ಕೊಡುವುದಲ್ಲ. ಹಾಗಾಗಿ ಪರಿಷತ್ತಿನ ಮನವಿಯನ್ನು ಹಗುರವಾಗಿ ಪರಿಗಣಿಸಬಾರದು. ಅನುದಾನ ಬಿಡುಗಡೆ ಮಾಡದೆ ಹೋದರೆ ಪರಿಷತ್ತಿಗೆ ಬೀಗ ಹಾಕಿ ಸುಮ್ಮನೆ ಹೋಗುವುದಿಲ್ಲ. ಬದಲಾಗಿ ಬೇಡಿಕೆ ಈಡೇರುವ ತನಕ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.
ಸಮಿತಿ ರಚನೆ: ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ್ದು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಎರಡು ರೂಪದ ನಿರ್ಣಯ: ಸಮ್ಮೇಳನದ ನಿರ್ಣಯಗಳು ಜಾರಿಯಾಗದ ಕುರಿತು ಪ್ರಶ್ನಿಸಿದಾಗ, ಎರಡು ರೂಪದ ನಿರ್ಣಯ ಕೈಗೊಳ್ಳಲಾಗುವುದು. ಕೆಲವು ನಿರ್ಣಯಗಳು ಕಾಲಮಿತಿಯಲ್ಲಿ ಜಾರಿಗೆ ಬರಲಿವೆ. ಇನ್ನೊಂದು ಕನ್ನಡಿಗರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಬಾರಿಯ ಸಮ್ಮೇಳನದಲ್ಲಿ ವಿಧಾನಸಭೆಯಲ್ಲಿ ಕರ್ನಾಟಕದ ಶವಯಾತ್ರೆ ಮಾಡುವುದಾಗಿ ಹೇಳಿದ ಎಂಇಎಸ್ ಶಾಸಕರಾದ ಸಂಭಾಜಿ ರಾವ್ ಪಾಟೀಲ್ ಹಾಗೂ ಅರವಿಂದ್ ಪಾಟೀಲ್ ವಿರುದ್ದ ಮತ್ತು ಕರ್ನಾಟಕ ವಿಭಜನೆಯ ಬಗ್ಗೆ ಮಾತನಾಡಿರುವ ಉಮೇಶ್ ಕತ್ತಿ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳುವ ಜೊತೆಗೆ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು .
ಡಾ.ನಾ.ಡಿಸೋಜಗೆ ಅಧಿಕೃತ ಆಹ್ವಾನ
ಸಾಗರ: ಮಡಿಕೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತರಾಗಿರುವ ಡಾ.ನಾ.ಡಿಸೋಜ ಅವರಿಗೆ ಸಮ್ಮೇಳನದ ಅಧ್ಯಕ್ಷಸ್ಥಾನ ಅಲಂಕರಿಸುವಂತೆ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅಧಿಕೃತ ಆಹ್ವಾನ ನೀಡಿದರು.
ಡಿಸೋಜರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಮಾತನಾಡಿದ ಹಾಲಂಬಿ, ಡಿಸೋಜ ಅವರು ಸಾಹಿತ್ಯದ ಯಾವುದೇ ಪಂಥಗಳಿಗೆ ಅಂಟಿಕೊಳ್ಳದೆ ಎಲ್ಲರ ಜೊತೆಗಿದ್ದು ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಸಾಹಿತಿಯಾಗಲ್ಲದೆ ಪ್ರಗತಿಪರ ಚಿಂತಕರಾಗಿ, ಸಾಮಾಜಿಕ ಹೋರಾಟಗಾರರಾಗಿ ನಮ್ಮ ನಡುವೆ ಸಕ್ರಿಯವಾಗಿದ್ದಾರೆ. ಹಾಗಾಗಿ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಸಂಪೂರ್ಣ ಅರ್ಹರಾಗಿದ್ದು ಈ ನೆಲೆಯಲ್ಲಿಯೇ ಕಳೆದ ಡಿ.4ರಂದು ನಡೆದ ಸಮ್ಮೇಳನಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಡಿಸೋಜ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.
ಎಲ್ಲರಿಗೂ ಕೃತಜ್ಞ: ಆಹ್ವಾನ ಸ್ವೀಕರಿಸಿ ಮಾತನಾಡಿದ ಡಿಸೋಜ, ಪತ್ರಿಕೆಗಳಲ್ಲಿ ಬರೆಯುವ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡ ನನ್ನ ಹಿಂದೆ ಅಥವಾ ಮುಂದೆ ದೊಡ್ಡ ಗುಂಪನ್ನು ಕಟ್ಟಿಕೊಂಡಿಲ್ಲ.
ಸಾಗರದಂತಹ ಸಣ್ಣ ಊರಿನಲ್ಲಿ ಕಳೆದ 50 ವರ್ಷಗಳಿಂದ ಜನರ ನಡುವೆ ಇದ್ದುಕೊಂಡು ಬರೆದಿದ್ದೇನೆ. ಈಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದಕ್ಕೆ ಸಂತೋಷವಾಗಿದೆ. ಇದಕ್ಕಾಗಿ ರಾಜ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳಿಗೆ, ಜಿಲ್ಲಾ ಪರಿಷತ್ತಿನ ಪದಾಧಿಕಾರಿಗಳಿಗೆ, ತಾಲ್ಲೂಕಿನ ಪದಾಧಿಕಾರಿಗಳಿಗೆ, ನನ್ನ ಬಗ್ಗೆ ಪ್ರೀತಿ ತೋರಿಸಿದ ಎಲ್ಲರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಮಡಿಕೇರಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯದಶರ್ ಟಿ.ಪಿ.ರಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ.ಸ್ವಾಮಿ, ಕಾರ್ಯದರ್ಶಿಗಳಾದ ವಿ.ಶಂಕರ್, ಜಿ.ನಾಗೇಶ್, ಕೋಶಾಧ್ಯಕ್ಷ ಎಸ್.ಆರ್.ಭಟ್ ಭಡ್ತಿ, ಸಾಹಿತಿ ಡಾ.ಕಾಳೆಗೌಡ ನಾಗವಾರ, ತಾಲ್ಲೂಕು ಬಗರ್ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ತಾಪಂ ಅಧ್ಯಕ್ಷ ಹರೀಶ್ಗಂಟೆ, ಬಸವರಾಜ್, ಉಮೇಶ್ ಹಿರೇನೆಲ್ಲೂರು, ಪರಶುರಾಮಪ್ಪ, ಪ್ರಕಾಶ್ ಕುಮ್ಮಾರ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

