ಕಂಪ್ಯೂಟರ್ ತರಬೇತಿಗೆ ಗ್ರಹಣ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.27
ಒಪ್ಪಂದ ಮುಗಿದಿದೆ. ಪಾಠ ಮಾಡುವವರಿಲ್ಲ, ಕಂಪ್ಯೂಟರ್ ನೋಡಿಕೊಳ್ಳುವವರಿಲ್ಲ. ಸರ್ಕಾರ ಕಂಪ್ಯೂಟರ್ಗಳನ್ನು ಹಸ್ತಾಂತರಿಸಿ ಎನ್ನುತ್ತಿದೆ. ಕಂಪ್ಯೂಟರ್ ನಿರ್ವಹಿಸುತ್ತಿದ್ದವರು ನಮಗಿನ್ನೂ ಬಾಕಿ ಬರಬೇಕಾಗಿದೆ ಎನ್ನುತ್ತಿದ್ದಾರೆ. ಇದರ ಪರಿಣಾಮ ರಾಜ್ಯದ ಸಾವಿರಾರು ಪ್ರೌಢಶಾಲೆಯ ವಿದ್ಯಾರ್ಥಿಗಳು ಕುಂತಿ ಮಕ್ಕಳಾಗಿದ್ದಾರೆ. ಅವರಿಗೀಗ ವನವಾಸವೇ ಗತಿ.
ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವೆಂಬುದು ಮರೀಚಿಕೆಯಾಗುತ್ತಾ ಸಾಗಿದೆ. ಕಳೆದ ಐದು ವರ್ಷದಿಂದ ಕುಂಟುತ್ತಾ ಸಾಗುತ್ತಿದ್ದ ಐಸಿಟಿ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಕಳೆದ ಮೂರ್ನಾಲ್ಕು ತಿಂಗಳಿಂದ ಸಂಪೂರ್ಣ ಸ್ಥಗಿತವಾಗಿದೆ. ಶಾಲೆಗಳಲ್ಲಿ ಧೂಳು ಹಿಡಿದಿರುವ ಕಂಪ್ಯೂಟರ್ಗಳ ಆಯಸ್ಸು ನಿಧಾನವಾಗಿ ಕಡಿಮೆಯಾಗುತ್ತಿದೆ.
ಆಗಿದ್ದಿಷ್ಟು: ಸಾರ್ವಜನಿಕ ಶಿಕ್ಷಣ ಇಲಾಖೆಯು ಮಾಹಿತಿ ಸಿಂಧು ಯೋಜನೆಯ ವಿಫಲತೆಯ ನಂತರ ಒಂದಿಷ್ಟು ಪಾಠ ಕಲಿತಂತೆ ವರ್ತಿಸಿತ್ತು. ಐಸಿಟಿ ಸ್ಕೂಲ್ಸ್ (ಐಈಖಿ ಝ್ಛ್ಟ್ಟಟಡ) ಯೋಜನೆ ಆರಂಭಿಸಿ ಉತ್ತಮ ಗುಣಮಟ್ಟದ ಕಂಪ್ಯೂಟರ್ಗಳನ್ನು ಶಾಲೆಗಳಿಗೆ ನೀಡಿತು.
ಮೊದಲ ಹಂತದಲ್ಲಿ ಯಶಸ್ಸು ಕಂಡೆವೆಂದು ಭಾವಿಸಿದ ಶಿಕ್ಷಣ ಇಲಾಖೆಯು ಎರಡನೇ ಹಂತದಲ್ಲಿ ರಾಜ್ಯದ 1,571 ಶಾಲೆಗಳಿಗೆ ಐಸಿಟಿ ತರಬೇತಿ ವಿಸ್ತರಿಸಿತು. 5 ವರ್ಷದ ಯೋಜನೆ ಇದು. ಸರ್ಕಾರವೇ ಕಂಪ್ಯೂಟರ್ ಲ್ಯಾಬ್ಗೆ ಬೇಕಾದ ಎಲ್ಲಾ ಪರಿಕರ ಸರಬರಾಜು ಮಾಡಿತು. ಕಂಪ್ಯೂಟರ್, ಸಿಪಿಯು, ಮಾನಿಟರ್, ಪ್ರೊಜೆಕ್ಟರ್, ಪ್ರಿಂಟರ್, ಹೆಡ್ಫೋನ್, ಟೇಬಲ್, ಕುರ್ಚಿ, ಎಕ್ಸಾಸ್ಟ್ ಫ್ಯಾನ್ ಸೇರಿದಂತೆ ಎಲ್ಲಾ ಪರಿಕರಗಳನ್ನೂ ನೀಡಿತು. ಕೋಣೆಯ ಅಲಂಕಾರವನ್ನೂ ಮಾಡಿತು.
ಈ ಕಂಪ್ಯೂಟರ್ ಲ್ಯಾಬ್ ನಿರ್ವಹಣೆಗಾಗಿ ಡಿಎಸ್ಇಆರ್ಟಿ ಹಾಗೂ ಎಜ್ಯುಕಾಂ ಸಂಸ್ಥೆಗಳ ನಡುವೆ ಒಪ್ಪಂದ ಆಗಿತ್ತು. ಈ ಕಂಪ್ಯೂಟರ್ಗಳನ್ನು ನಿರ್ವಹಿಸುವುದರದಲ್ಲೇ ರಿಪೇರಿ ಮಾಡುವುದು, ಯುಪಿಎಸ್ ನೋಡಿಕೊಳ್ಳುವುದು, ಜತೆಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸುವುದು ಎಜ್ಯುಕಾಂ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಈ ಒಪ್ಪಂದ 2013ರ ಸೆಪ್ಟಂಬರ್ 30ಕ್ಕೆ ಅಂತ್ಯವಾಗಿದೆ.
ಸಮಸ್ಯೆ ಶುರು: ಒಪ್ಪಂದ ಮುಗಿದ ನಂತರ ಡಿಎಸ್ಇಆರ್ಟಿ ಸಂಸ್ಥೆಯು ಸುತ್ತೋಲೆ ಹೊರಡಿಸಿ ಐಟಿಸಿ 2ನೇ ಹಂತದ ಯೋಜನೆಯಲ್ಲಿ ಭಾಗಿಯಾಗಿರುವ ಶಾಲೆಗಳು ಕಂಪ್ಯೂಟರ್ ಲ್ಯಾಬ್ನ ಎಲ್ಲಾ ವಸ್ತುಗಳನ್ನು ಮೊದಲು ಹೇಗಿತ್ತೋ ಹಾಗೆ (ಅಂದರೆ ಸುಸ್ಥಿತಿಯಲ್ಲಿ) ಹಸ್ತಾಂತರ ಮಾಡಿಕೊಳ್ಳಿ ಎಂದು ಶಾಲೆಯ ಮುಖ್ಯೋಪಾಧ್ಯಾಯರಿಗೆ ಸೂಚಿಸಿತು.
ಆದರೆ ಪರಿಸ್ಥಿತಿ ಸುಲಭವಾಗಿರಲಿಲ್ಲ. ಎಷ್ಟೋ ಕಂಪ್ಯೂಟರ್ಗಳು ಹಾಳಾಗಿದ್ದವು. ಯುಪಿಎಸ್ ಕೆಲಸ ಮಾಡುತ್ತಿರಲಿಲ್ಲ. ಪ್ರೊಜೆಕ್ಟರ್ಗಳು ಕೆಲಸ ನಿಲ್ಲಿಸಿದ್ದವು. ಬ್ಯಾಟರಿಗೆ ಡಿಸ್ಟಿಲ್ ವಾಟಲ್ ಹಾಕಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಂದೇ ಒಂದು ಉಪಕರಣ ಕೆಟ್ಟಿದ್ದರೂ ಹಸ್ತಾಂತರ ಮಾಡಿಕೊಳ್ಳುವುದಕ್ಕೆ ಮುಖ್ಯ ಶಿಕ್ಷಕರು ಒಪ್ಪುತ್ತಿರಲಿಲ್ಲ. ಹಾಗಾಗಿ ಇಡೀ ರಾಜ್ಯದಲ್ಲಿ ಬಹುತೇಕ ಕಡೆ ಕಂಪ್ಯೂಟರ್ ಲ್ಯಾಬ್ ಹಸ್ತಾಂತರವಾಗದೇ ಧೂಳು ಹಿಡಿಯುತ್ತಿವೆ. ಕಂಪ್ಯೂಟರ್ ಸರ್ವಿಸ್ ಮಾಡಲು ಬನ್ನಿ ಎಂದು ಕರೆದರೆ ತಂತ್ರಜ್ಞರು ಒಪ್ಪಂದ ಮುಗಿದಿದೆ ಎನ್ನುತ್ತಿದ್ದಾರೆ.
ತಾಂತ್ರಿಕ ಪರಿಣಿತಿ ಇರದ ಶಿಕ್ಷಕರು ಈ ಪ್ರಯೋಗಾಲದ ಒಳಗೆ ಹೋಗಿ ಕಂಪ್ಯೂಟರ್ ಸ್ವಿಚ್ ಆನ್ ಮಾಡುವುದಕ್ಕೂ ಹಿಂದೆಮುಂದೆ ನೋಡುತ್ತಿದ್ದಾರೆ. ಎಲ್ಲಿ ಏನಾಗುತ್ತದೆಯೋ ಎಂಬ ಭಯ ಇವರಿಗೆ. ಐಟಿಸಿ ಯೋಜನೆಯ ದೇಖರೇಖಿ ನೋಡಿಕೊಳ್ಳುತ್ತಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಮುಖ್ಯಸ್ಥರು ಹೇಳಿದರೂ ಶಿಕ್ಷಕರು ಕೇಳುತ್ತಿಲ್ಲ. ಹೀಗಾಗಿ ಕಳೆದ ಮೂರ್ನಾಲ್ಕು ವರ್ಷದಿಂದ ಕುಂಟುತ್ತಾ ಸಾಗುತ್ತಿದ್ದ ಐಸಿಟಿ ಶಿಕ್ಷಣ ಈಗ ಸಂಪೂರ್ಣ ಹಳ್ಳ ಹಿಡಿಯುತ್ತಿದೆ.
ಏನಾಗಬೇಕಿದೆ? ಸರ್ಕಾರ ಕೂಡಲೇ ಎಜ್ಯುಕಾಂ ಜತೆಗಿನ ಸಮಸ್ಯೆ ಬಗೆಹರಿಸಿ, ಕಂಪ್ಯೂಟರ್ಗಳನ್ನು ಸುಸ್ಥಿತಿಗೆ ತಂದು ಶಾಲೆಗಳ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸುವಂತೆ ಮಾಡುವ ಕಾರ್ಯ ತುರ್ತಾಗಿ ಆಗಬೇಕಿದೆ. ಅಲ್ಲದೇ, ಇನ್ನುಮುಂದೆ ಸಂಪನ್ಮೂಲ ವ್ಯಕ್ತಿಗಳು ಬರುವುದಿಲ್ಲವಾದ್ದರಿಂದ ಶಾಲೆಯ ವಿಜ್ಞಾನ ಶಿಕ್ಷಕರಿಗೆ ತುರ್ತಾಗಿ ಕಂಪ್ಯೂಟರ್ ಸಮರ್ಥವಾಗಿ ಬಳಸುವ ಉನ್ನತ ಮಟ್ಟದ ತರಬೇತಿ ನೀಡಬೇಕಿದೆ.
ಇಲ್ಲದಿದ್ದರೆ ಸರ್ಕಾರಿ ಶಾಲೆಯ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿದ ಶಾಪ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ.
ಈಗಾಗಲೇ ಮೂರನೇ ಹಂತದ ಐಸಿಟಿ ತರಬೇತಿ ಆರಂಭವಾಗಿದೆ. ಇನ್ನಷ್ಟು ಹೊಸ ಶಾಲೆಗಳಿಗೆ ಹೊಸ ಕಂಪ್ಯೂಟರ್ಗಳು ಬಂದಿಳಿಯುವುತ್ತಿವೆ. ಯಾರು ನಿರ್ವಹಿಸುತ್ತಾರೆ ಎಂಬ ತೀರ್ಮಾನ ಇನ್ನೂ ಆಗಿಲ್ಲ. ಈಗಲಾದರೂ ಹಳೇ ಅನುಭವಗಳಿಂದ ಪಾಠ ಕಲಿತು, ಕೇಂದ್ರೀಕೃತ ಒಪ್ಪಂದ ಮಾಡಿಕೊಳ್ಳುವ ಬದಲು ಆಯಾ ಜಿಲ್ಲಾ ಮಟ್ಟದಲ್ಲಿ, ಶಾಲಾ ಮಟ್ಟದಲ್ಲಿ ಕಂಪ್ಯೂಟರ್ ನಿರ್ವಹಿಸುವಂತಾಗಲಿ ಎನ್ನುತ್ತಾರೆ ಅನುಭವಿ ಶಿಕ್ಷಕರೊಬ್ಬರು.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

