ಶಿವಮೊಗ್ಗ

ಬಂದ್‌ಗೆ ಶಿವಮೊಗ್ಗದಲ್ಲಿ ಮಿಶ್ರ ಪ್ರತಿಕ್ರಿಯೆ

Published On :

ಶಿವಮೊಗ್ಗ: ಸರ್ಕಾರಿ ಬಸ್ ರಸ್ತೆಗಿಳಿಯಲಿಲ್ಲ, ಬ್ಯಾಂಕು ಹಾಗೂ ಅಂಚೆ ಕಚೇರಿ ಸೇವೆ ನೀಡಲಿಲ್ಲ, ಶಾಲಾ ಕಾಲೇಜುಗಳು ಬಾಗಿಲು ತೆರೆಯಲಿಲ್ಲ... ಇದು ಬುಧವಾರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದ ಎಫೆಕ್ಟ್.
 ಇದರ ಹೊರತಾಗಿಯೂ ಜನಜೀವನ ಮಾತ್ರ ಎಂದಿನಂತೆ ಸಾಗಿತು. ಖಾಸಗಿ ಬಸ್‌ಗಳು ಜನರ ಓಡಾಟಕ್ಕೆ ತೊಂದರೆ ಮಾಡಲಿಲ್ಲ, ಸರ್ಕಾರಿ ಕಚೇರಿಗಳು ಹಾಜರಾತಿ ಕೊರತೆ ನಡುವೆವೂ ಕಾರ್ಯನಿರ್ವಹಿಸಿದವು. ಅಂಗಡಿಗಳಲ್ಲಿ ವಹಿವಾಟು ನಡೆಸಿದವು. ನಗರಸಾರಿಗೆ, ಆಟೋ, ಟ್ಯಾಕ್ಸಿಗಳ ಸಂಚಾರ ಎಂದಿನಂತೆಯೇ ಇದ್ದ ಪರಿಣಾಮ ಇದರಿಂದ ನಗರದ ನಾಗರಿಕರ ಪ್ರಯಾಣದ ಮೇಲೆ ಮುಷ್ಕರ ಯಾವುದೇ ಪರಿಣಾಮ ಬೀರಲಿಲ್ಲ.
ಪ್ರತಿಭಟನೆ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
 ನಗರದ ಬಿ.ಎಚ್. ರಸ್ತೆಯಲ್ಲಿರುವ ಎಸ್‌ಬಿಎಂ ಮುಖ್ಯ ಕಚೇರಿ ಮುಂಭಾಗ ವಿವಿಧ ಬ್ಯಾಂಕ್ ಸಿಬ್ಬಂದಿ, ಬಾಲರಾಜ ಅರಸ್ ರಸ್ತೆಯಲ್ಲಿರುವ ಅಂಚೆ ಕಚೇರಿ ಮುಂಭಾಗ ಅಂಚೆ ಸಿಬ್ಬಂದಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
  ವಿವಿಧ ಕಾರ್ಮಿಕ ಸಂಘಟನೆಗಳು ಜೊತೆಗೂಡಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸವಳಂಗ ರಸ್ತೆಯಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಕನಿಷ್ಠ ವೇತನಕ್ಕೆ ಆಗ್ರಹ: ಈ ವೇಳೆ ಮಾತನಾಡಿದ ಕಾರ್ಮಿಕ ಸಂಘಟನೆಯ ಪ್ರಮುಖರು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ದೇಶದ ಬಡ, ಮಧ್ಯಮ ವರ್ಗದ ಜನರು ಜೀವನ ನಿರ್ವಹಣೆ ಮಾಡದ ಸ್ಥಿತಿಗೆ ತಲುಪಿದ್ದಾರೆ ಎಂದು ದೂರಿದರು. ದುಡಿಯುವ ವರ್ಗಕ್ಕೆ ಕನಿಷ್ಟ ವೇತನ ಜಾರಿಗೊಳಿಸಬೇಕು. ಕಾರ್ಮಿಕರ ಸಾಮಾಜಿಕ ಭದ್ರತೆ ಕಾಪಾಡಬೇಕು. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ತೊಂದರೆಗೊಳಗಾದವರ ಮಾತು...
ಹೊರ ಊರುಗಳಿಗೆ ಬಸ್‌ಗಳು ತೆರಳದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು. ಆದರೆ ರೇಲ್ವೇ  ಸಂಚಾರ ಎಂದಿನಂತೆಯೇ ಇದ್ದ ಕಾರಣ ಬೆಂಗಳೂರು, ತುಮಕೂರು, ಹುಬ್ಬಳ್ಳಿ, ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲಿಲ್ಲ.
 ಸರ್ಕಾರಿ ಬಸ್ ನಿಲ್ದಾಣದಲ್ಲಿ ದೂರದ ಊರುಗಳಿಗೆ ಪ್ರಯಾಣ ಮಾಡುತ್ತಿದ್ದ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಚಾಲಕರು, ಬಸ್ ನಿರ್ವಾಹಕರು ಬಸ್‌ನಲ್ಲಿ ನಿದ್ರೆಗೆ ಜಾರಿದ್ದರು. ಆದರೆ, ಪ್ರಯಾಣಿಕರ ಪರದಾಟ ಮಾತ್ರ ಕೇಳುವವರಿಲ್ಲವಾಗಿತ್ತು. ಕನ್ನಡಪ್ರಭ ಈ ಸಂದರ್ಭದಲ್ಲಿ ಒಂದಿಷ್ಟು ಜನರನ್ನು ಮಾತನಾಡಿಸಿದಾಗ ಅನೇಕರು ಸಮಸ್ಯೆ ಬಿಡಿಸಿಟ್ಟರು.
 ನಾನು ಮಾನಸಿಕ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ಇಲ್ಲಿನ ಮಾನಸ ನರ್ಸಿಂಗ್ ಹೋಂಗೆ ಬಂದಿದ್ದೆ. ಚಿಕಿತ್ಸೆ ಮುಗಿದ ನಂತರ ನಮ್ಮ ಊರಿಗೆ ಹೋಗಬೇಕಿತ್ತು. ನಮ್ಮೂರಿಗೆ ಬಸ್ ಸಂಚಾರವಿಲ್ಲ ಎಂದು ನಿನ್ನೆ ತಿಳಿದಿರಲಿಲ್ಲ. ಹಾಗಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದೇವೆ. ಆದರೆ, ಇಲ್ಲಿ ಬಸ್ ಸಂಚಾರ ಇಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಪರಿಸ್ಥಿತಿ ಏನು ಸ್ವಾಮಿ ಎಂದು ಕೇಳಿದರೆ ಸಂಜೆ ಮೇಲೆ ನೋಡೊಣ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು ಎಂದು ತಮ್ಮ ಅಳಲು ತೋಡಿಕೊಂಡರು ಸೋಮವಾರ ಪೇಟೆಯ ನಟರಾಜ್.
 ಚಿಕ್ಕಮಗಳೂರಿನಿರುವ ನಮ್ಮ ತಾಯಿಗೆ ಹುಷಾರಿಲ್ಲ. ಆದ್ದರಿಂದ ಅವರನ್ನು ನೋಡಲಿಕ್ಕೆ ಹೋಗಬೇಕಿತ್ತು. ಆದರೆ ಇಲ್ಲಿ ಬಸ್ ಎಲ್ಲಿಗೂ ಹೋಗುವುದಿಲ್ಲವಂತೆ. ಸಂಜೆ ಮೇಲೆ ಹೊರಡಬಹುದು ಎಂದು ಹೇಳುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದವರು ಶಿಕಾರಿಪುರದ ಸರೋಜಮ್ಮ.
ನಮ್ಮದೇನು ತಪ್ಪಿಲ್ಲ: ನಮ್ಮದೇನು ತಪ್ಪಿಲ್ಲ ಸಾರ್... ಎಂಬುದು ಸರ್ಕಾರಿ ಬಸ್ ಚಾಲಕರು. ಈಗಲೇ ಹೊರಡಿ ಎಂದರೆ ಬಸ್ ತೆಗೆಯಲು ಸಿದ್ದ. ಆದರೆ, ನಮಗೆ ಮೇಲಿಂದ ಆರ್ರ್ಡರ್ ಬೇರೆ ಆಗಿದೆ. ಹಾಗಾಗೀ ಸದ್ಯ ಬಸ್ ತೆಗೆಯಲು ಸಾಧ್ಯವಿಲ್ಲ. ಅದಕ್ಕೆ ಬಸ್‌ಗಳನ್ನು ನಿಲ್ಲಿಸಿಕೊಂಡಿದ್ದೀವಿ. ಸಂಜೆ ಮೇಲೆ ಪರಿಸ್ಥಿತಿ ನೋಡಿಕೊಂಡು ಬಸ್ತೆಗೆಯಲು ಹೇಳುತ್ತೇವೆ ಎಂದು ಡಿಪೋದವರು ತಿಳಿಸಿದ್ದಾರೆ ಎನ್ನುತ್ತಾರೆ ಚಿಕ್ಕಮಗಳೂರು ಬಸ್ ಚಾಲಕರೊಬ್ಬರು.
ನೆರವಾದ ಟ್ರ್ಯಾಕ್ಸ್‌ಗಳು: ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಶಿವಮೊಗ್ಗ - ಭದ್ರಾವತಿ ಸಂಚಾರಕ್ಕೆ ಕೊಂಚ ಅಡ್ಡಿ ಉಂಟಾಯಿತು. ಆದರೆ, ಟ್ರ್ಯಾಕ್ಸ್‌ನ ಮಾಲೀಕರು ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದರಿಂದ ಭದ್ರಾವತಿ- ಶಿವಮೊಗ್ಗ ಓಡಾಟಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಮುಷ್ಕರದ ಹಿನ್ನೆಲೆಯಲ್ಲಿ ಸಂಚಾರ ವೆಚ್ಚವನ್ನು ದುಬಾರಿ ಮಾಡದೇ ಎಂದಿನಂತೆ ರು. 15ನ್ನೇ ಪಡೆದು ಸಾರ್ವಜನಿಕರ ಸಂಚಾರಕ್ಕೆ ನೆರವಾದರು.

ತಟ್ಟದ ಬಿಸಿ
ಶಿರಾಳಕೊಪ್ಪ: ಭಾರತಬಂದ್‌ಗೆ ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಈ ಭಾಗದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದೇ ಜನಜೀವನ ಸಹಜವಾಗಿತ್ತು.
 ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಆದರೆ ಶಿಕಾರಿಪುರ , ಶಿವಮೊಗ್ಗ ಹಾಗೂ ಪಕ್ಕದ ಹಾವೇರಿ ಜಿಲ್ಲೆಯ ಹಿರೇಕೆರೂರ ಹಾಗೂ ಇತರೆಡೆ ಎಂದಿನಂತೆ ಬಸ್ ಸಂಚಾರ ಹಾಗು ವಾಹನಗಳು ಓಡಾಡುತ್ತಿದ್ದವು.
 ಜನಸಂಚಾರ ಕಡಿಮೆ ಇದ್ದ ಕಾರಣ ಬಸ್ ಸಂಚಾರ ಸ್ವಲ್ಪ ಕಡಿಮೆ ಇತ್ತು. ಆದರೆ ಇದರಿಂದ ನಾಗರಿಕರಿಗೆ ಯಾವುದೇ ತೊಂದರೆ ಆಗಲಿಲ್ಲ.
   ರಾಷ್ಟ್ರೀಕ್ರತ ಬ್ಯಾಂಕ್‌ಗಳು ಮಾತ್ರ ತಮ್ಮ ಕೆಲಸ ಕಾರ್ಯ ನಿಲ್ಲಿಸಿ ಬಂದ್‌ಗೆ ಸಹಕರಿಸಿದ್ದವು. ಆದರೆ ಸಹಕಾರಿ ಕ್ಷೇತ್ರದ ಹಾಗೂ ಜಿಲ್ಲಾ ಬ್ಯಾಂಕ್‌ಗಳು ಕೆಲಸ ಕಾರ್ಯವನ್ನು ಎಂದಿನಂತೆ ನಿರ್ವಹಿಸಿದವು.
    ಹೀಗಾಗಿ ಈ ಭಾಗದಲ್ಲಿ ನಾಗರಿಕರಿಗೆ ಬಂದ್ ಬಿಸಿ ತಟ್ಟದೆ ನಿರಾತಂಕವಾಗಿ ತಮ್ಮ ಕಾರ್ಯ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.