ಶಿವಮೊಗ್ಗ

ಕಾನೂನು ಪಾಲಿಸದ ಖಾಸಗಿ ವೈದ್ಯರ ವಿರುದ್ಧ ಕ್ರಮ

Published On :

ಶಿವಮೊಗ್ಗ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ ಪ್ರಕಾರ ನಿಯಮ ಪಾಲಿಸದೆ ವೈದ್ಯಕೀಯ ಸೇವೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಿವಣ್ಣ ರೆಡ್ಡಿ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ ಅನುಷ್ಠಾನಗೊಳಿಸುವ ಸಂಬಂಧ ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ ಈವರೆಗೆ ಸುಮಾರು 500 ಅರ್ಜಿಗಳನ್ನು ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾಗಿದ್ದು, ನಿಯಮದ ಕಡ್ಡಾಯ ಪಾಲನೆ ಅಗತ್ಯವಾಗಿದೆ ಎಂದರು.
ನೋಂದಣಿ ಕಡ್ಡಾಯ: ಖಾಸಗಿಯಾಗಿ ವೈದ್ಯಕೀಯ ಸೇವೆ ನೀಡುವವರು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಆಸ್ಪತ್ರೆ ಅಥವಾ ಚಿಕಿತ್ಸಾಲಯದ ಹಾಗೂ ವೈದ್ಯರು ಹೆಸರು ಪ್ರದರ್ಶಿಸಬೇಕು. ವೈದ್ಯರ ವಿದ್ಯಾರ್ಹತೆ, ಪ್ರಮಾಣ ಪತ್ರಗಳು, ತಜ್ಞತೆಯಲ್ಲಿ ಚಿಕಿತ್ಸೆ, ಪ್ರಮಾಣ ಪತ್ರ, ಜೀವ ವೈದ್ಯಕೀಯ ತ್ಯಾಜ್ಯ ವಿಲೆ ಪ್ರಮಾಣ ಪತ್ರ, ಸೇವೆಗಳು ಮತ್ತು ಸೇವಾ ಶುಲ್ಕ ವಿವರ, ನಾಗರಿಕರಿಗೆ ವಾಗ್ದಾನ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರ ಮಾನ್ಯತೆ ಪಡೆದ ಪ್ರಮಾಣ ಪತ್ರ, ನಿರ್ದಿಷ್ಟ ದಾಖಲೆಗಳನ್ನು ನಿರ್ವಹಿಸುವುದು ಅಥವಾ ಕಾಲಕಾಲಕ್ಕೆ ಸರ್ಕಾರಕ್ಕೆ ಸೋಂಕು ಅಥವಾ ಸೋಂಕು ರಹಿತ ರೋಗಗಳ ವಿವರ ನೀಡುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ ಎಂದರು.
ಬಳಕೆ ನಿರ್ಬಂಧ: ನಾಟಿ ವೈದ್ಯರು, ವಂಶ ಪಾರಂಪರಿಕ ವೈದ್ಯರು ತಮ್ಮ ವೈದ್ಯ ವೃತ್ತಿಯ ದಾಖಲೆ ನೀಡಬೇಕು, ಯಾವುದೇ ಅಲೋಪತಿಕ್ ಅಥವಾ ಆಯುರ್ವೇದ ಔಷಧ ನೀಡಬಾರದು. ವೈದ್ಯರೆಂಬ ಪದನಾಮ ಅಥವಾ ಉಪಕರಣ ಬಳಕೆ ನಿರ್ಬಂಧಿಸಲಾಗಿದೆ. ಹಳ್ಳಿಗಾಡಿನಲ್ಲಿ ನಾಟಿ ಔಷಧ ಮಾತ್ರ ನೀಡಿ ಉಪಚರಿಸಬಹುದು. ನಗರ, ಪಟ್ಟಣಗಳಲ್ಲಿ ಕ್ಲಿನಿಕ್ ಅಥವಾ ಆಸ್ಪತ್ರೆ ತೆರೆಯುವುದು ನಿಷೇಧಿಸಲಾಗಿದೆ ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ನಡೆಸಿದ ನೋಂದಾವಣೆ ಅಲ್ಲದ ಆಸ್ಪತ್ರೆ, ಕ್ಲಿನಿಕ್‌ಗಳ ಮೇಲಿನ ದಾಳಿಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾಳಿ ಮಾಡಿದ್ದರಿಂದ ಸಾರ್ವಜನಿಕರಿಗೆ ವಂಚಿಸುತ್ತಿದ್ದವರು ತಾನಾಗಿಯೇ ತಮ್ಮ ವ್ಯವಹಾರಗಳನ್ನು ಮುಚ್ಚಿದ್ದು, ದಾಳಿ ಮುಂದುವರಿಯಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.