ಧಾರಾಕಾರ ಮಳೆ: ಜನರಲ್ಲಿ ಸಂತಸ
ಕ.ಪ್ರ.ವಾರ್ತೆ ಸಾಗರ ಜು.2 ರ: ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಮಧ್ಯಾಹ್ನದಿಂದ ಧಾರಾಕಾರ ಮಳೆಯಾಗಿದೆ.
ಸೋಮವಾರ ರಾತ್ರಿಯಿಂದ ಚುರುಕುಗೊಂಡ ಮಳೆ ಮಂಗಳವಾರ ಮತ್ತಷ್ಟು ಹೆಚ್ಚಾಗಿದೆ.
ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ಎಡಬಿಡದೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಪಟ್ಟಣದ ಕೆಲವು ಭಾಗಗಳಲ್ಲಿ ಚರಂಡಿ ನೀರು ತುಂಬಿ ರಸ್ತೆಗಳೆಲ್ಲ ಜಲಾವೃತವಾಗಿತ್ತು. ಮಾರ್ಕೆಟ್ ರಸ್ತೆ, ಸೊರಬ ರಸ್ತೆಗಳ ಮೇಲೆ ಸುಮಾರು ಎರಡು ಅಡಿಗಳಷ್ಟು ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಬಗೆ ಹರಿದ ನೀರಿನ ಸಮಸ್ಯೆ: ಕಳೆದ ಬೇಸಿಗೆಯಲ್ಲಿ ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು, ಬಾವಿಗಳು ಬತ್ತಿಹೋಗಿತ್ತು. ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ನೀರಿನ ಕ್ಷಾಮ ಉಂಟಾಗಿ ಸುಮಾರು ಎರಡೂವರೆ ತಿಂಗಳ ಕಾಲ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಬಹುತೇಕ ಕೆರೆ, ಹಳ್ಳ-ಕೊಳ್ಳ, ಬಾವಿಗಳಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ಡ್ಯಾಮಿಗೆ ಸಾಕಷ್ಟು ನೀರು ಹರಿದುಬಂದಿದೆ.
ಜೂನ್ ಎರಡನೆ ವಾರದಲ್ಲಿ ಮಳೆಗಾಲ ಆರಂಭವಾದಾಗ ಇಲಾಖೆಯ ಅಸಮರ್ಪಕ ನಿರ್ವಹಣೆಯಿಂದ ಸುಮಾರು 10ದಿನಗಳ ಕಾಲ ಇಡೀ ಹೋಬಳಿ ಕತ್ತಲಲ್ಲಿ ಮುಳುಗಿದ್ದನ್ನು ಸ್ಮರಿಸಬಹುದು. ತಾಳಗುಪ್ಪ ಹೋಬಳಿ, ಜೋಗ, ಕಾರ್ಗಲ್, ಅರಳಗೋಡು ಭಾಗಗಳಲ್ಲಿಯೂ ಭಾರಿ ಮಳೆ ಸುರಿಯುತ್ತಿರುವ ಬಗ್ಗೆ ವರದಿಯಾಗಿದೆ.
ವಿಶ್ವವಿಖ್ಯಾತ ಜೋಗ ಜಲಪಾತ ಮತ್ತೆ ಮೈತುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಲಿಂಗನಮಕ್ಕಿಗೆ ಒಂದೇ ದಿನ 2 ಅಡಿ
ಶಿವಮೊಗ್ಗ: ಮುಂಗಾರು ಮತ್ತೆ ಬಿರುಸಾಗಿದ್ದು, ಕಳೆದ 24 ಗಂಟೆಯಲ್ಲಿ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಒಂದೇ ದಿನ 2 ಅಡಿ ನೀರು ಸಂಗ್ರಹವಾಗಿದೆ.
1,819 ಅಡಿ ಗರಿಷ್ಠ ಸಾಮರ್ಥ್ಯದ ಈ ಜಲಾಶಯದಲ್ಲಿ ಮಂಗಳವಾರ 1,768 ಅಡಿ ನೀರು ಸಂಗ್ರಹವಾಗಿದೆ. ಇದು ಕಳೆದ ವರ್ಷಕ್ಕಿಂತ 20 ಅಡಿ ಹೆಚ್ಚು.
ಲಿಂಗನಮಕ್ಕಿ, ತಾಳಗುಪ್ಪ, ಹೊಸನಗರದಲ್ಲಿ 5 ಸೆ.ಮೀ. ಮಳೆಯಾಗಿದ್ದರೆ, ತೀರ್ಥಹಳ್ಳಿಯಲ್ಲಿ 3 ಸೆ.ಮೀ. ಮಳೆಯಾಗಿದೆ. ಸಾಗರ, ತ್ಯಾಗರ್ತಿ, ಹುಂಚದಕಟ್ಟೆಯಲ್ಲಿ 2, ಸೊರಬದಲ್ಲಿ 1 ಸೆ.ಮೀ. ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

