ಅನ್ನಭಾಗ್ಯ ಯೋಜನೆ ಯಶಸ್ಸಿಗೆ ಶ್ರಮಿಸಿ: ಕಾಗೋಡು
ಸಾಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ ಯಶಸ್ವಿಯಾಗಬೇಕಾದರೆ ಕೊಡುವ ಹಾಗೂ ತೆಗೆದುಕೊಳ್ಳುವ ಕೈಗಳು ಶುದ್ಧವಾಗಿರಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಗಾ ವಹಿಸಿ: ಸಾಮಾನ್ಯ ಜನರಿಗೆ ಸುಲಭ ದರದಲ್ಲಿ ತುತ್ತು ಅನ್ನಕ್ಕೆ ದಾರಿ ಮಾಡಿಕೊಡುವುದು ಸರ್ಕಾರದ ಆಶಯವಾಗಿದೆ. ಇಂತಹ ಪವಿತ್ರವಾದ ಯಶಸ್ವಿಯಾಗಬೇಕಾದರೆ ಅಧಿಕಾರಿಗಳು, ನೌಕರರು, ನ್ಯಾಯಬೆಲೆ ಅಂಗಡಿಯವರು ಹಾಗೂ ಫಲಾನುಭವಿಗಳು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಯೋಜನೆ ದುರುಪಯೋಗವಾಗದಂತೆ ಸ್ಥಳೀಯ ಜನಪ್ರತಿನಿಧಿಗಳು ನಿಗಾ ವಹಿಸಬೇಕು ಎಂದು ಹೇಳಿದರು.
ದುರುಪಯೋಗ ಸಹಿಸಲಾಗುವುದಿಲ್ಲ: ರಾಜ್ಯ ಸರ್ಕಾರ ಈ ಬಾರಿ ನೀರಾವರಿಗೆ 9 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದರೆ ಅದರ ಸರಿಸುಮಾರು ಅರ್ಧದಷ್ಟು ಹಣವನ್ನು ಅನ್ನಭಾಗ್ಯ ಯೋಜನೆಗೆ ಖರ್ಚು ಮಾಡುತ್ತಿದೆ. ಇದರ ಸಂಪೂರ್ಣ ಲಾಭ ಅರ್ಹ ಫಲಾನುಭವಿಗಳಿಗೆ ದೊರಕಬೇಕು. ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸಮಸ್ಯೆಗಳಿದ್ದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಲು ಸಿದ್ಧವಿದೆ. ಹಾಗೆಂದು ಅನ್ನಭಾಗ್ಯ ಯೋಜನೆಯಲ್ಲಿ ವ್ಯತ್ಯಾಸವಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಖಾರವಾಗಿ ತಿಳಿಸಿದರು.
ವ್ಯವಸ್ಥೆಗೆ ಹೊಸ ಆಯಾಮ ಕೊಡುವ ಅಗತ್ಯವಿದ್ದು ಈ ದಿಸೆಯಲ್ಲಿ ಸರ್ಕಾರ ಉತ್ತಮ ಆಡಳಿತ ನೀಡುವ ಭರವಸೆ ನೀಡಿದೆ. ಅದು ಕೇವಲ ವಿಧಾನಸೌಧದಲ್ಲಿ ಮಾತ್ರ ಜಾರಿಯಾದರೆ ಸಾಲದು. ರಾಜ್ಯದ ಎಲ್ಲೆಡೆ ಜನರಿಗೆ ಉತ್ತಮ ಆಡಳಿತ ದೊರಕುವಂತಾಗಬೇಕು. ಹಾಗಾದಾಗ ಮಾತ್ರ ಜನರಿಗೆ ಸರ್ಕಾರದ ಮೇಲೆ ನಂಬಿಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದ ಕಾಗೋಡು, ಕೆಲವು ತಾಂತ್ರಿಕ ತೊಂದರೆಯಿಂದಾಗಿ ಕೆಲವರಿಗೆ ಪಡಿತರ ಚೀಟಿ ವಿತರಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಪಡಿತರಚೀಟಿ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗೌರಮ್ಮ, ಉಪವಿಭಾಗಾಧಿಕಾರಿ ಡಾ.ಉದಯಕುಮಾರಶೆಟ್ಟಿ, ತಹಸೀಲ್ದಾರ್ ರಾಜಣ್ಣ, ಆಹಾರ ಇಲಾಖೆಯ ದೇವರಾಜ್ ಹಾಜರಿದ್ದರು.
ಆತಂಕಬೇಡ
ಸಾಗರ: ಬಜೆಟ್ಟಿನಲ್ಲಿ ಜಿಲ್ಲೆಗೆ ಯಾವುದೇ ಯೋಜನೆ ಘೋಷಿಸಿಲ್ಲ ಎಂದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ನೂತನ ಪದವಿ ಕಾಲೇಜಿಗೆ ಶನಿವಾರ ಭೇಟಿ ನೀಡಿ ಹೊಸಬ್ಯಾಚಿನ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡುವ ಮೂಲಕ ಕಾಲೇಜಿನ ಬೋಧನಾ ಚಟುವಟಿಕೆಗೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದ್ಯದಲ್ಲಿಯೆ ಸಚಿವರೊಂದಿಗೆ ಚರ್ಚಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು.
ಸಿಎಂಗೆ ಮನವಿ: ತುಮರಿ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಹಿಂದಿನಿಂದಲೂ ಪ್ರಸ್ತಾವನೆ ನಡೆಯುತ್ತಿದೆ. ಅದನ್ನು ಬಜೆಟ್ಟಿನಲ್ಲಿ ಘೋಷಿಸುವ ಅಗತ್ಯವಿಲ್ಲ. ಈಗಾಗಲೇ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಥಮ ಕಂತಿನ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ನೂತನ ಕಾಲೇಜಿನಲ್ಲಿ ಬಿ.ಎ. ಹಾಗೂ ಬಿ.ಕಾಂ. ತರಗತಿಗಳು ನಡೆಯುತ್ತಿವೆ. ಈಗಾಗಲೇ 200 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಈ ಶೈಕ್ಷಣಿಕ ಸಾಲಿನಲ್ಲಿಯೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸ್ಥಳಾವಕಾಶದ ಕೊರತೆ ಇಲ್ಲ. ಕಾಲೇಜಿನಲ್ಲಿ ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸುಮಾರು 15 ಲಕ್ಷ ಅಗತ್ಯವಿದ್ದು, ಅದನ್ನು ತಕ್ಷಣ ಬಿಡುಗಡೆ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಪ್ರಸನ್ನ, ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಡಿ. ರೇವಣಕರ್, ಪ್ರಮುಖರಾದ ಭೀಮನೇರಿ ಶಿವಪ್ಪ, ಕೆ.ಹೊಳೆಯಪ್ಪ, ತೀ.ನ.ಶ್ರೀನಿವಾಸ್, ಶ್ರೀನಾಥ್, ಜಿ.ಕೆ. ಭೈರಪ್ಪ, ತಸ್ರೀಫ್, ಎಸ್. ನಾರಾಯಣ್, ವಿಲ್ಸನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

