ಉತ್ಪ್ರೇಕ್ಷೆ, ವಾಸ್ತವಿಕತೆ ಮಿತವಾಗಿರಲಿ
ಕ.ಪ್ರ.ವಾರ್ತೆ ಟಿ ಭದ್ರಾವತಿ ಟಿ ಜು.30
ನಾಟಕ ಒಂದು ಸಂಕೀರ್ಣ ಕಲೆ. ಇದು ನೃತ್ಯ, ಸಂಗೀತ, ವಸ್ತ್ರವಿನ್ಯಾಸ, ಭಾಷೆ ಮತ್ತು ಗೀತೆಗಳನ್ನೊಳಗೊಂಡಿದೆ ಎಂದು ಶಿಕ್ಷಣ ಮತ್ತು ರಂಗಭೂಮಿ ತಜ್ಞ ಡಾ. ಎಸ್.ವಿ. ಪದ್ಮಪ್ರಸಾದ್ ಹೇಳಿದರು.
ಅವರು ಭೂಮಿಕಾ ವೇದಿಕೆ ಭಾನುವಾರ ಪಟ್ಟಣದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ರಂಗಭೂಮಿ ಮತ್ತು ಸಾಹಿತ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಾಟಕದಲ್ಲಿ ಉತ್ಪ್ರೇಕ್ಷೆ ಮತ್ತು ವಾಸ್ತವಿಕತೆಗಳು ಹಿತಮಿತವಾಗಿದ್ದಾಗ ಅದು ಹೆಚ್ಚುಕಾಲ ರಂಗಭೂಮಿಯಲ್ಲಿರುತ್ತದೆ ಎಂದರು.
ಕಲಾನೈಪುಣ್ಯತೆ ಮಹತ್ವದ್ದು: ಗೀರೀಶ್ ಕಾರ್ನಾಡ್ ಮತ್ತು ಕಂಬಾರರ ನಾಟಕಗಳು ಇಂದಿಗೂ ಹೆಚ್ಚು ರಂಗಪ್ರಯೋಗಗಳನ್ನು ಕಾಣಲು ಅವು ಪ್ರೇಕ್ಷಕರಿಗೆ ನೀಡುವ ಸಂದೇಶಗಳೇ ಕಾರಣ ಎಂದು ವಿವರಿಸಿದ ಅವರು ರಂಗಭೂಮಿ ಸಾಹಿತ್ಯವನ್ನು ಸಮರ್ಪಕವಾಗಿ ಪ್ರೇಕ್ಷಕರಿಗೆ ತಲಪಿಸುವಲ್ಲಿ ನಟ ಮತ್ತು ನಿರ್ದೇಶಕರ ಕಲಾನೈಪುಣ್ಯತೆ ಬಹಳ ಮಹತ್ವದ್ದೆಂದು ತಿಳಿಸಿದರು.
ಕುವೆಂಪು ಅವರ ಕಿನ್ನರಜೋಗಿ, ಅಡಿಗರ ಭೂಮಿಗೀತೆಗಳನ್ನು ರಂಗಪ್ರಯೋಗಕ್ಕೆ ಅಳವಡಿಸಿದ್ದಾರೆ. ಶ್ರೀಕೃಷ್ಣನ ಪೂರ್ಣ ಚರಿತ್ರೆಯನ್ನು, ವಚನ ಸಾಹಿತ್ಯದಲ್ಲಿ ಬಸವಣ್ಣನವರ ಸಮಗ್ರ ವ್ಯಕ್ತಿತ್ವವನ್ನು ರಂಗಪ್ರಯೋಗದ ಮೂಲಕ ಮಾಡುವ ಯತ್ನ ಆಗಬೇಕಿದೆ. ಇದಕ್ಕೆ ಹೆಚ್ಚಿನ ಸಂಪನ್ಮೂಲ ಬೇಕಾಗಿರುವುದರಿಂದ ಸರ್ಕಾರ, ಸರ್ಕಾರೇತರ ಅನುದಾನಗಳಿಂದ ಮಾತ್ರ ಅದು ಸಾಧ್ಯವೆಂದು ಅವರು ತಿಳಿಸಿದರು.
ಆಂಗ್ಲ ಭಾಷೆಯ ನಾಟಕಗಳು ಅದರ ನೆಲದಲ್ಲೂ ಮತ್ತೂ ಹೆಚ್ಚು ಪ್ರಯೋಗ ಕಾಣಲು ಪ್ರಮುಖ ಕಾರಣ ಅದರಲ್ಲಿರುವ ಮನೋರಂಜನೆ ಎಂದ ಅವರು, ಅಂತಹ ನಾಟಕಗಳು ಕನ್ನಡ ರಂಗಭೂಮಿಗೆ ಬರಬೇಕಾಗಿದೆ ಎಂದು ಹೇಳಿದರು.
ಭೂಮಿಕಾ ವೇದಿಕೆಯ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ರವಿಕುಮಾರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಅಪರಂಜಿ ಶಿವರಾಜ್ ಸ್ವಾಗತಿಸಿದರು. ಎಂ. ನಾಗಪ್ಪ ಅತಿಥಿಗಳನ್ನು ಪರಿಚಯಿಸಿದರು. ಕೆ. ಆನಂದ್ ನಿರೂಪಿಸಿದರು. ಕೆ. ಲಕ್ಷ್ಮಣರಾವ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

