ಶಿವಮೊಗ್ಗ

ಶಿವಾರಾಧನೆ ಜೋರು.. ಎಲ್ಲೆಲ್ಲೂ ಹರನಾಮ ಸ್ಮರಣೆ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಮಾ.10
ಎಲ್ಲೆಲ್ಲೂ ಶಿವಾರಾಧನೆ, ಹರನಾಮಸ್ಮರಣೆ.
ಶಿವಮೊಗ್ಗದಲ್ಲಿ ಶಿವರಾತ್ರಿ ನಿಮಿತ್ತ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು. ಹೋಮ ಹವನಗಳು, ಭಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಶೇಷವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಭಕ್ತರು ಹರಕೆರೆ ಶ್ರೀ ರಾಮೇಶ್ವರ ಸ್ವಾಮಿ ದರ್ಶನ ಪಡೆದು ಪುನೀತರಾದರು. ಇಲ್ಲಿ ಹರಿಯುವ ತುಂಗಾ ನದಿಯಲ್ಲಿ ಮಿಂದು ಶಿವನಿಗೆ ಪೂಜೆ ಸಲ್ಲಿಸಿದ ಭಕ್ತರು ಭಾವಪರವಶರಾದರು. ಬೆಳಿಗ್ಗೆಯಿಂದ ರಾತ್ರಿವರೆಗೂ ಸಾವಿರ ಸಂಖ್ಯೆಯಲ್ಲಿ ಹರಿದುಬಂದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಹರಸಾಹಸ ಪಡಬೇಕಾಯಿತು.
ಭಜನೆ: ಇಲ್ಲಿನ ಪುರಾತನ ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಜಾತ್ರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ರುದ್ರಪಠಣ, ನಂತರ ಶಾರದಾ ದೇವಿ ಅಂಧರ ವಿಕಾಸ ಕೇಂದ್ರ, ಶ್ರೀ ರಾಮ ಭಜನಾ ಮಂಡಳಿ, ಕೋಟೆ ದೇವಸ್ಥಾನ ಭಜನಾ ಮಂಡಳಿ, ವಿದ್ಯಾಲಕ್ಷ್ಮಿ ಭಜನಾ ಮಂಡಳಿ, ವಿಜಯನಗರ ಭಜನಾ ಮಂಡಳಿಯಿಂದ ಭಜನೆ ನಡೆಯಿತು.
ಮಧ್ಯಾಹ್ನ ಶ್ರೀ ಸತ್ಯಸಾಯಿಬಾಬಾ ಮಂದಿರ, ಕದಳಿ ವನಿತಾ ಸಂಘ, ಶಾರದಾ ಮಹಿಳಾ ಒಕ್ಕೂಟದಿಂದ ಭಜನೆ ಸೇವೆ ನೆರವೇರಿತು. ಸಂಜೆ ಉತ್ಸಾಹಿ ತಮಟೆ ಕಲಾ ಸಂಘದಿಂದ ತಮಟೆ ನೃತ್ಯ, ಭರತ ನಾಟ್ಯ, ಜಾದೂ ಪ್ರದರ್ಶನ ನೆರವೇರಿತು.
ಪುರಾಣ ಪ್ರಸಿದ್ಧ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ ಆರಂಭಗೊಂಡಿತ್ತು.  ಏಕಾದಶವಾರ ರುದ್ರಾಭಿಷೇಕ, ಬಿಲ್ವಾರ್ಚನೆ, ಪ್ರತಿ ಜಾವದಲ್ಲೂ ವಿಶೇಷ ಪೂಜೆ, ಅಭಿಷೇಕ ಅರ್ಚನೆಗಳು ನಡೆದವು. ರಾತ್ರಿ ಜಾಗರಣೆ ಅಂಗವಾಗಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ವಿಶೇಷ ಪೂಜೆ: ವಾಸವಿ ಯುವಜನ ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಗಾಂಧಿಬಜಾರಿನ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ವ್ಯವಸ್ಥೆ ಮಾಡಿತ್ತು. ಬೆಳಿಗ್ಗೆ ಎರಡು ತಂಡಗಳಲ್ಲಿ ನೂರಾರು ಲಿಂಗಗಳ ಪೂಜೆ ನಡೆಯಿತು. ಸಂಜೆಯ ನಂತರ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಅಲಂಕಾರ ಮಾಡಲಾಗಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ವಿಶೇಷ ಅಲಂಕಾರ ವೀಕ್ಷಿಸಿದರು.
ನಗರದ ಬಿಬಿ ರಸ್ತೆಯ ಶ್ರೀ ಭವಾನಿ ಶಂಕರ ದೇವಸ್ಥಾನದಲ್ಲಿ ಜ್ಯೋತಿರ್ಲಿಂಗ ದರ್ಶನ ಹಾಗೂ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡು ದರ್ಶನ ನಡೆದು ಪೂಜೆಗೈದರು. ಇಲ್ಲಿ 11ರ ಸಂಜೆವರೆಗೂ ವಿವಿಧ ಪೂಜಾಧಿಗಳು ನಡೆಯಲಿದ್ದು ಸಂಜೆ 5 ಗಂಟೆಗೆ ದೇವರ ರಾಜಬೀದಿ ಉತ್ಸವ ನಡೆಯಲಿದೆ.
ಹೊಸಮನೆ 3ನೇ ತಿರುವಿನಲ್ಲಿರುವ ಅಂತರಘಟ್ಟಮ್ಮ ದೇವಾಲಯದ ಆವರಣದಲ್ಲಿ ಯಕ್ಷಾನುಗ್ರಹ ಸಂಸ್ಕೃತಿ ಸಂವರ್ಧನ ಸಭಾ ವೇದಿಕೆಯು ಶ್ರೀ ದೇವಿ ಮಹಾತ್ಮೆ ಪೌರಾಣಿಕೆ ಯಕ್ಷಗಾನದೊಂದಿಗೆ ರಾತ್ರಿ ಜಾಗರಣೆಗೆ ಸಿದ್ಧತೆ ನಡೆಸಿತ್ತು. ಸಂಜೆ ಕೊಕ್ಕರಣೆ ಲಕ್ಷ್ಮಿ ಜಿ ಭಟ್ ಸಂಪ್ರದಾಯಿಕ ಹಾಡುಗಳನ್ನು ಪ್ರಸ್ತುತಪಡಿಸಿದರು.
ರಾಜೇಂದ್ರನಗರದ ಪಂಪಾವನದ ಶ್ರೀ ರಾಮ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ಭಕ್ತರೇ ನೇರವಾಗಿ ದೇವರ ಮೂರ್ತಿಗೆ ಅಭಿಷೇಕಗೈದರು. ವಿನೋಬ ನಗರ 100 ಅಡಿ ರಸ್ತೆಯಲ್ಲಿರುವ ಶಿವಾಲಯದಲ್ಲಿ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನಡೆಯಿತು.
ರವೀಂದ್ರ ನಗರ ಗಣಪತಿ ದೇವಸ್ಥಾನ ಹಾಗೂ ವಿವಿಧ ದೇವಾಲಯಗಳ ಅರ್ಚಕ ವೃಂದದಿಂದ ನಗರದ ಎಲ್ಲಾ ದೇವಾಲಯಗಳ ಶಿವಾಲಯಗಳಿಗೆ ಪರಿಕ್ರ ಕಾರ್ಯಕ್ರಮ ನಡೆಸಲಾಯಿತು. ರವೀಂದ್ರ ನಗರ ಗಣಪತಿ ದೇವಸ್ಥಾನ, ಕಲ್ಲಹಳ್ಳಿ ಅಭೀಷ್ಟವರದ ದೇವಾಲಯ, ವಿವೇಕಾನಂದ ಬಡಾವಣೆ ನಾಗಸುಬ್ರಹ್ಮಣ್ಯ ದೇವಾಲಯ, ವಿನೋಬ ನಗರ ಶನೈಶ್ಚರ ದೇವಾಲಯ, ಶಂಕರಮಠ, ಅರ್ಕರೇಶ್ವರ ದೇವಾಲಯ, ಕೋಟೆ ಭೀಮೇಶ್ವರ ದೇವಾಲಯ, ಬಿಬಿ ರಸ್ತೆ ಭವಾನಿಶಂಕರ ದೇವಾಲಯ ಸೇರಿ ವಿವಿಧ ಶಿವಾಲಯಗಳಿಗೆ ಭೇಟಿಕೊಟ್ಟು, ಕೊನೆಯದಾಗಿ ಬೆಳಗಿನ ಜಾವ ಹರಕೆರೆ ಶಿವಾಲಯದಲ್ಲಿ ಪರಿಕ್ರಮ ಕೊನೆಗೊಳ್ಳಲಿದೆ.

ಕೊಡಚಾದ್ರಿಯಲ್ಲಿ ಸಂಭ್ರಮದ ಶಿವರಾತ್ರಿ
ಹೊಸನಗರ: ಕೊಡಚಾದ್ರಿ ಗಿರಿಯಲ್ಲಿ ನಡೆದ ಮಹಾಶಿವರಾತ್ರಿ ಜಾತ್ರೆಯಲ್ಲಿ ಗಿರಿ ತಪ್ಪಲು ಮತ್ತು ದೂರದ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿ ಸನ್ನಿಧಿಯಲ್ಲಿರುವ ವಿವಿಧ ದೇವರುಗಳ ವಿಶೇಷ ಆರಾಧನೆ ಮಾಡಿದರು.
ಪರ್ವತೇಶ್ವರ ಸನ್ನಿಧಿಯಲ್ಲಿ ಬೆಳಿಗ್ಗೆಯಿಂದಲೆ ವಿಶೇಷ ಪೂಜೆಗಳು ಸಂಪನ್ನಗೊಂಡವು. ಅಲ್ಲದೆ ರುದ್ರಾಭಿಶೇಕ ನೇರವೇರಿಸಲಾಯಿತು. ಹುಲಿರಾಯ ಸಿದ್ದೇಶ್ವರ ಸನ್ನಿಧಿಯಲ್ಲು ವಿಶೇಷ ಧಾರ್ಮಿಕ ಆಚರಣೆಗಳು ನಡೆಯಿತು.
ದೂನಿ ಪೂಜೆ: ಕಾಲಭೈರವೇಶ್ವರ ಸನ್ನಿಧಿಯಲ್ಲಿ ನಾಥ ಪಂಥದ ಸಂಪ್ರದಾಯದಂತೆ ದೂನಿ ಪೂಜೆ ನಡೆಯಿತು. ಚಂದ್ರಗುತ್ತಿ ಗುರುಗಳು ಲಕ್ಷ್ಮಣನಾಥ ಬಾವಾಜಿ ನೇತೃತ್ವದಲ್ಲಿ ಸಂಪನ್ನಗೊಂಡಿತು ಮತ್ತು ವಿಶೇಷ ರೋಟ್ ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು. ಅರ್ಚಕ ನಾಗೇಂದ್ರಜೋಗಿ, ಜೋಗಿ ಸಮುದಾಯದ ಮಾಜಿ ಕಾರ್ಯದರ್ಶಿ ಆರ್.ಸಿ. ಬಳೆಗಾರ್ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೋಹ ಪೂಜೆಯ ನಂತರ ಸರ್ವಜ್ಞಪೀಠಕ್ಕೆ ಬೇಟಿ ನೀಡಿದರು. ಕೊಡಚಾದ್ರಿ ಗಿರಿಯಲ್ಲಿ ಉಪಹಾರದ ಸೌಲಭ್ಯ ಇರದ ಕಾರಣ ವ್ಯವಸ್ಥಾಪನಾ ಸಮಿತಿ ಉಚಿತವಾಗಿ ಉಪಹಾರ ಮತ್ತು ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಂ ಶೆಟ್ಟಿ, ಮಹಾಬಲೇಶ್ವರ್ ಭಟ್, ವಿವೇಕಕಾಮತ್ ಉದಯಪೂಜಾರಿ, ರಾಜೇಂದ್ರಶೆಟ್ಟಿ, ಅರುಣ, ಲಕ್ಷ್ಮೀ, ತ್ರಿವೇಣಿ, ರಾಮಚಂದ್ರಜೋಗಿ, ಅರ್ಚಕರಾದ ನಾಗೇಶಜೋಗಿ, ಪವಿತ್ರಭಟ್, ಕೊಳಕಿ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.

ಧಾರ್ಮಿಕ ಪುಸ್ತಕ ಮಾರಾಟ
ಸೊರಬ: ತಾಲೂಕಿನ ಎಲ್ಲೆಡೆ ಸಂಭ್ರಮ, ಸಡಗರ ಮಹಾಶಿವರಾತ್ರಿ ಪೂಜೆ, ಜಾಗರಣೆ ನಡೆಯಿತು. ಪಟ್ಟಣದ ಉಮಾಮಹೇಶ್ವರ ದೇಗುಲದಲ್ಲಿ ರುದ್ರಾಭಿಷೇಕ, ಸಮೀಪದ ಯಲಸಿ ರಾಮೇಶ್ವರ ದೇಗುಲದಲ್ಲಿ ರುದ್ರಾಭಿಷೇಕ, ಪಾರಾಯಣ, ತಾಲೂಕಿನ ಕುಪ್ಪಗಡ್ಡೆ ರಾಮೇಶ್ವರ, ಕೋಟಿಪುರದ ಕೈಟಭೇಶ್ವರ, ಚಿಟ್ಟೂರು ಸಿದ್ಧರಾಮೇಶ್ವರ, ಪುರದ ಸೋಮೇಶ್ವರ ಮೊದಲಾದ ಶಿವ ದೇಗುಲಗಳಲ್ಲಿ ವಿಶೇಷಪೂಜೆ ನಡೆದವು.
ಇಲ್ಲಿನ ಉಮಾಮಹೇಶ್ವರ ಭಾವೆ ಫೌಂಡೇಶನ್‌ನವರು ಮಂದಾರ ಚಿತಳೆ ಇವರಿಂದ ಸುಗಮ ಸಂಗೀತ, ದ್ವಾದಶ ಜ್ಯೋತಿರ್ಲಿಂಗ ದರ್ಶನ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ 150ನೇ ಜಯಂತಿ ಪ್ರಯುಕ್ತ ರಂಗನಾಥ ದೇಗುಲದ ಆವರಣದಲ್ಲಿ ರಾಮಕೃಷ್ಣಾಶ್ರಮ ಮಂಗಳೂರು, ರಾಷ್ಟ್ರೋತ್ಥಾನ ಬಳಗ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಇವರಿಂದ ಧಾರ್ಮಿಕ ಪುಸ್ತಕ ಮಾರಾಟ, ಪ್ರದರ್ಶನ ವಿವಿಧ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಾಲೂಕಿನ ಚಿಮ್ಮನೂರು ಗ್ರಾಮದಲ್ಲಿ ಅಲ್ಲಿನ ತೀರ್ಥರಾಮೇಶ್ವರ ಯುವಕ ಸಂಘದ ವತಿಯಿಂದ ಹಬ್ಬದ ಪ್ರಯುಕ್ತ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಏರ್ಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.