ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳ ಅತಂತ್ರ ಸ್ಥಿತಿ
ಶಿರಾಳಕೊಪ್ಪ, ಮಾ.25 ಹೆರಿಗೆಗೆಂದು ಬಂದಂತಹ ಮಹಿಳೆಯರು ಹೆರಿಗೆ ಆಗಿ ಎರಡು ದಿನ ಕಳೆದರೂ ವೈದ್ಯರು ಸಿಗದ ಪರಿಸ್ಥತಿ ಶಿರಾಳಕೊಪ್ಪ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದೆ.
ಮಾತ್ರವಲ್ಲದೆ ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಬರುವ ರೋಗಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಸುತ್ತಾಡಿ ಹಾಗೆಯೇ ಹೋಗುತ್ತಿರುವುದಾಗಿ ಚಿಕಿತ್ಸೆಗೆ ಬಂದವರ ಆರೋಪವಾಗಿದೆ.
ಶನಿವಾರ ಮಧ್ಯಾಹ್ನ ಸಮಯದಲ್ಲಿ ಮಹಿಳೆಯೊಬ್ಬರು ಹೆರಿಗೆ ನೋವೆಂದು ಇಲ್ಲಿನ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂದು ರಾತ್ರಿ 12ಗಂಟೆಗೆ ಬಂದಂತಹ ಇಬ್ಬರು ಮಹಿಳೆಯರಿಗೆ ಹೆರಿಗೆಯೂ ಆಗಿದೆ. ಆದರೆ ಆ ಸಮಯದಲ್ಲಿ ವೈದ್ಯರಾರೂ ಇರಲಿಲ್ಲ. ಬದಲಾಗಿ ಅಲ್ಲಿಯೇ ಇಂದ್ದ ನರ್ಸ್ ಹಾಗೂ ಅಲ್ಲಿಯ ರಾತ್ರಿ ಗಸ್ತಿನ ವ್ಯಕ್ತಿ ಹೆರಿಗೆ ಮಾಡಿಸಿದ್ದಾರೆ.
ವೈದ್ಯರ ದರ್ಶನವಿಲ್ಲ: ಇಷ್ಟೆಲ್ಲ ಆದರೂ ಭಾನುವಾರ ಯಾರೊಬ್ಬ ವೈದ್ಯರಿಲ್ಲದೇ ಹಾಗೆಯೇ ಕಾಲಹಾಕುತ್ತಿರುವದಾಗಿ ಶಿರಾಳಕೊಪ್ಪದ ಹೆಣ್ಣು ಮಗುವಿನ ತಾಯಿ ಹಾಸಿಯಾ ಬೇಗಂ, ಹಾಗೂ ನೇರಲಗಿ ಗ್ರಾಮದ ಮತ್ತೊಬ್ಬ ಮಹಿಳೆ ಮಂಜುಳಾ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರತಿ ಹೆರಿಗೆಗೆ ರು. 500 ಕೊಟ್ಟಿರುವುದಾಗಿಯೂ ತಿಳಿಸಿದ್ದಾರೆ. ನಾವು ಬೇರೆ ಖಾಸಗಿ ಆಸ್ಪತ್ರೆಗೆ ಹೋಗೋಣವೆಂದರೆ ಸರ್ಕಾರದ ಸೌಲಭ್ಯ ದೊರೆಯುವಿಲ್ಲವೆಂಬ ಆತಂಕದಿಂದ ಇಲ್ಲಿ ಬಂದದ್ದಾಗಿ ಮಹಿಳೆಯರು ತಿಳಿಸಿದ್ದಾರೆ.
ರಾತ್ರಿ ಸೊಳ್ಳೆಕಾಟ ಎಂದು ತಮ್ಮ ಸಮಸ್ಯೆ ಹೇಳಿಕೊಂಡ ಮಹಿಳೆಯರು ಆಗ ತಾನೇ ಹುಟ್ಟಿದ ಇಂತಹ ಮಕ್ಕಳಿಗೆ ಸೊಳ್ಳೆ ಬತ್ತಿ ಹಚ್ಚಬಾರದೆಂದು ನಾವು ಹಚ್ಚದೇ ಸೊಳ್ಳೆ ಕಡಿಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿರುವುದಾಗಿ ತಿಳಿಸಿದ್ದಾರೆ.
ಹಾಗೆಯೇ ಭಾನುವಾರ ಮತ್ತೊಬ್ಬ ಮಹಿಳೆ ಕೊರಟಿಕೆರೆ ತಾಂಡಾದ ಲಂಬಾಣಿ ಜನಾಂಗದ ಕುಮಾರಿ ಬಾಯಿ ಎಂಬ ಮಹಿಳೆ ಹೆರಿಗೆಗೆಂದು ಬಂದು ಕಾಯುತ್ತಾ ಕುಳಿತಿದ್ದು, ಅವಳ ಹೆರಿಗೆಯನ್ನು ನರ್ಸ್ ಅವರೇ ಮಾಡಿಸಬೇಕು ಇದು ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಸ್ಥಿತಿಇದಾಗಿದೆ.
ಭೂತ ಬಂಗಲೆಯ ಭಾಸ: ಶಿರಾಳಕೊಪ್ಪ ಸಮುದಾಯ ಆಸ್ಪತ್ರೆ, 30 ಹಾಸಿಗೆಯ ದೊಡ್ಡದಾದ ಎಲ್ಲಾ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗೆ ಸುತ್ತಮುತ್ತಲ ಹಲವು ಗ್ರಾಮಗಳ ಹಾಗು ಪಕ್ಕದ ತಾಲೂಕುಗಳಿಂದಲೂ ರೋಗಿಗಳು ಆಗಮಿಸುತ್ತಾರೆ.
ಈ ಆಸ್ಪತ್ರೆಗೆ ವೈದ್ಯರೇ ಇರದಿರುವದರಿಂದ ಹೆಚ್ಚಾಗಿ ರೋಗಿಗಳೂ ಇರದೇ ಸಂಜೆ ಆಯಿತೆಂದರೆ ಭೂತ ಬಂಗಲೆಯಲ್ಲಿ ಇರುವಂತೆ ಭಾಸವಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.
ಒಟ್ಟು 5 ವೈದ್ಯರು ಇರಬೇಕಾದ ಆಸ್ಪತ್ರೆ ಇದಾಗಿದ್ದು, ಇಬ್ಬರು ಖಾಯಂ ವೈದ್ಯರಿದ್ದಾರೆ.
ಇನ್ನು ಇಬ್ಬರು ಸೋಮವಾರದಿಂದ ಗುರುವಾರದವರೆಗೆ ಡೆಪುಟೇಶನ್ ಇರುವದಾಗಿ ಇಲ್ಲಿಯ ನರ್ಸ್ ಪತ್ರಿಕೆಗೆ ತಿಳಿಸಿದ್ದಾರೆ.
ಆದರೆ ನಾಗರಿಕರ ಹೇಳಿಕೆಯಂತೆ ವೈದ್ಯರು ಯಾವಾಗ ಬರುತ್ತಾರೆ ಯಾವಾಗ ಇರುತ್ತಾರೆ ಎಂಬುದೇ ಗೊತ್ತಾಗುವದಿಲ್ಲ ಎಂದು ತಿಳಿಸಿದ್ದಾರೆ.
ಈ ಎಲ್ಲ ಅವ್ಯವಸ್ಥೆಗಳನ್ನು ನೋಡುತ್ತಿರುವ ನಾಗರಿಕರು ಸರ್ಕಾರಿ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆ ಕಡೆ ನೋಡುತ್ತಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

