ಈಶ್ವರಪ್ಪರದ್ದೂ ಗಣಿ ಇದೆ, ದಾಖಲೆ ಇಟ್ಟಿದ್ದೇನೆ
ಕ.ಪ್ರ.ವಾರ್ತೆ ಶಿವಮೊಗ್ಗ ಮೇ 2
ನಿಮಗೆ ತಿಳಿದಿರಲಿ, ಕೆ.ಎಸ್.ಈಶ್ವರಪ್ಪನವರದ್ದೂ ಗಣಿ ಇದೆ. ಹಿಂದೆ ನಾನು ಸಿಎಂ ಆಗಿದ್ದಾಗ ತಮಗೆ ಗಣಿಗಾರಿಕೆಗೆ ಪರವಾನಗಿ ಕೊಡಿ ಎಂದು ಬಂದಿದ್ದರು, ಆದರೆ ಕೊಟ್ಟಿರಲಿಲ್ಲ. ಮುಂದೆ ಬೇಕಾದಿತು ಎಂದು ಅದರ ದಾಖಲೆಯನ್ನೂ ಹಾಗೆ ಇಟ್ಟಿದ್ದೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾರೆ.
ಗುರುವಾರ ರಾತ್ರಿ ಇಲ್ಲಿನ ಮಿಶನ್ ಕಾಂಪೌಂಡ್ನಲ್ಲಿ ನಡೆದ ಕೆಜೆಪಿ ಸಭೆಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಕುಟುಂಬಕ್ಕೆ ಗಣಿಗಾರಿಕೆಗೆ ನಾನು ಅವಕಾಶ ಕೊಟ್ಟಿರಲಿಲ್ಲ, ಅದಕ್ಕೆ ಈ ಈಶ್ವರಪ್ಪ ಅಂಡ್ ಟೀಮ್ ತಮ್ಮ ವಿರುದ್ಧ ತಿರುಗಿಬಿದ್ದಿದ್ದರು ಎಂದು ಹೇಳಿದ ಅವರು, ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಹೋಗಿದ್ದಕ್ಕೆ ನನ್ನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಭಂಡತನ: ಆತ್ಮೀಯ ಈಶ್ವರಪ್ಪನವರು ನನ್ನನ್ನು ಸಾವಿರಾರು ಬಾರಿ ಅಪರಾಧಿ ಎಂದರು, ಆರೋಪ ಮುಕ್ತರಾದ ನಂತರ ಅಧಿಕಾರ ಎಂದರು. ಆದರೆ, ನ್ಯಾ.ಪಿಂಟೋ ಅವರು ನೀಡಿರುವ ತೀರ್ಪಿನಲ್ಲಿ, ನನ್ನನ್ನು ಜೈಲಿಗೆ ಕಳುಹಿಸಿದ ಪ್ರಕರಣದ ಕುರಿತು ಪಾಕಿಸ್ತಾನದಲ್ಲೂ ಈ ರೀತಿ ಆಗಿಲ್ಲ. ಖಾಸಗಿ ದೂರೊಂದರ ಮೇಲೆ ಜೈಲಿಗೆ ಕಳುಹಿಸಿದ್ದು ಇದೇ ಮೊದಲು ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ ಎಂದರು
ಇದೇ ಈಶ್ವರಪ್ಪನವರ ಮೇಲೆ ರಾಜ್ಯಪಾಲರರು ಪ್ರಾಸಿಕ್ಯೂಶನ್ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದ ಮೇಲೆ ಇವರಿಗೆ ಮರ್ಯಾದೆ ಇದ್ದರೆ ತಕ್ಷಣವೇ ಡಿಸಿಎಂ ಹುದ್ದೆಗೆ ರಾಜಿನಾಮೆ ನೀಡಬೇಕಾಗಿತ್ತು. ಆದರೆ, ಅವರದ್ದು ಭಂಡತನ, ಮುಂದುವರಿದಿದ್ದಾರೆ. ಸಿಎಂ ಶೆಟ್ಟರ್ ಕೂಡ ಅವರನ್ನು ಮುಂದುವರಿಸಿದ್ದಾರೆ ಎಂದು ಟೀಕಿಸಿದರು.
ಈಶ್ವರಪ್ಪರನ್ನು ಸೋಲಿಸಿ: ಇಂತಹ ಈಶ್ವರಪ್ಪ ವಿರುದ್ಧ ಪ್ರಾಮಾಣಿಕರಾದ ರುದ್ರೇಗೌಡರನ್ನು ಕೆಜೆಪಿಯಿಂದ ಕಣಕ್ಕಿಳಿಸಿದ್ದೇನೆ. ಅವರನ್ನು ಗೆಲ್ಲಿಸಿ. ಅಧಿಕಾರ, ಹಣ, ಹೆಂಡದ ಮೂಲಕ ಚುನಾವಣೆ ನಡೆಸುತ್ತಿರುವ ಈಶ್ವರಪ್ಪನವರನ್ನು ಸೋಲಿಸಿ ಎಂದು ಜನತೆಗೆ ಕರೆ ನೀಡಿದರು.
ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು ಶೇ.33 ಮತಗಳನ್ನು. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.43ರಷ್ಟು ಮತ ಗಳಿಸಿತು. ಈ ಮಧ್ಯೆ ರಾಘವೇಂದ್ರ ಚುನಾವಣೆಗೆ ನಿಲ್ಲಲು ಅವಕಾಶ ನೀಡದಂತೆ ಈಶ್ವರಪ್ಪ ಪ್ರಯತ್ನಪಟ್ಟರು, ರಾಘವೇಂದ್ರ ಗೆದ್ದಮೇಲಂತೂ ನನ್ನ ಜೊತೆಗೆ ಅತಿಯಾದ ಆತ್ಮೀಯತೆಯಿಂದ ನಡೆದುಕೊಳ್ಳಲು ಆರಂಭಿಸಿದರು ಎಂದು ವ್ಯಂಗ್ಯವಾಡಿದರು.
ಸರ್ವರಿಗೂ ಸಮಬಾಳು: ಹಜ್ ಭವನ ನಿರ್ಮಾಣ ಪ್ರಕ್ರಿಯೆ ಆರಂಭಿಸಿದ್ದು ಯಾರು ಸ್ವಾಮಿ, ಕನಕ ಜಯಂತಿ ಆಚರಣೆ, ಕನಕ ಪೀಠದ ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಅಲ್ಲ ಈ ಯಡಿಯೂರಪ್ಪ ಎಂದು ಹೇಳಿದ ಅವರು ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಎಂಬ ಮಾತಿನಂತೆ ಸರ್ಕಾರ ನಡೆಸಿದ್ದೇನೆ. ಅನೇಕ ಜನಪರ ಕಾರ್ಯಕ್ರಮ ತಂದಿದ್ದೇನೆ. ಅದನ್ನು ಜನ ಮರೆತಿಲ್ಲ ಎಂದು ಹೇಳಿದರು.
ಅನೇಕ ಮಾಧ್ಯಮಗಳು ಚುನಾವಣೆಯಲ್ಲಿ ಬರಬಹುದಾದ ಫಲಿತಾಂಶವನ್ನು ಈಗಲೇ ಊಹಿಸುತ್ತಿವೆ. ಕೆಜೆಪಿಯನ್ನು ಇತರೆ ಸ್ಥಾನದಲ್ಲಿ ತರಲೂ ಹಿಂಜರಿಯುತ್ತಿವೆ. ಆದರೆ, ಅವರ ನಿರೀಕ್ಷೆಗಳು ಮಾತ್ರ ಉಲ್ಟಾಪಲ್ಟಾ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಫಲಿತಾಂಶ ಬಂದ ನಂತರ ತಿಳಿಯುತ್ತದೆ, ಮುಂದೆ ಕೆಜೆಪಿಯನ್ನು ಮುಂಚೂಣಿಯಲ್ಲಿ ತೋರಿಸಬೇಕಾಗುವ ಸ್ಥಿತಿ ಬರುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ನೆಲ ಜಲ ಭಾಷೆ ಸಂಸ್ಕೃತಿ ಉಳಿಸಲು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಹಿಂದೆ ಅನೇಕ ಕಾರಣಗಳಿಂದಾಗಿ ಪ್ರಾದೇಶಿಕ ಪಕ್ಷ ವಿಫಲವಾದವು. ಆದರೆ, ಈಗ ಕಾಲ ಪಕ್ವವಾಗಿದ್ದು, ಅದರ ಅವಶ್ಯಕತೆ ಇದೆ ಎಂದರು.
ಮಾದರಿ ನಗರ: ನನಗೆ ಸಿಕ್ಕ ಅವಕಾಶದಲ್ಲಿ ಶಿವಮೊಗ್ಗವನ್ನು ಮಾದರಿ ನಗರವಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸಾಮಾಜಿಕ ನ್ಯಾಯ ಪಾಲನೆಯಲ್ಲೂ ಸೂಕ್ತ ನಿರ್ಧಾರಗಳನ್ನು ಕೈಗೊಂಡೆ. ದುರ್ದೈವ ಎಂದರೆ ಈಶ್ವರಪ್ಪನವರಂತಹ ಸ್ನೇಹಿತರು ಸೇರಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಮೇಲಿನ ಅತಿಯಾದ ಪ್ರೀತಿ ವಿಶ್ವಾಸದಿಂದ ಒಂದಂಶದ ಕಾರ್ಯಕ್ರಮ ಹಾಕಿಕೊಂಡು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಅವರಿಗೆ ದೇವರು ಒಳ್ಳೆಯದು ಮಾಡಲಿ. ಹಣದ ಭ್ರಮೆಯಲ್ಲಿರುವ ಈಶ್ವರಪ್ಪವರಿಗೆ ಜನರೇ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ವಿವಿಧ ಸಮುದಾಯದ ಮುಖಂಡರು ವೇದಿಕೆಯಲ್ಲಿದ್ದರು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರುದ್ರೇಗೌಡ, ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಬಸವಣ್ಯಪ್ಪ, ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

