ನಿರೀಕ್ಷೆಗೂ ಮೀರಿ ಜನರ ಸ್ಪಂದನೆ: ಇಬ್ರಾಹಿಂ
ಕ.ಪ್ರ.ವಾರ್ತೆ ಭದ್ರಾವತಿ ಮೇ 2
ತಾವು ಪ್ರಚಾರ ಕಾರ್ಯದಲ್ಲಿ ಭೇಟಿ ನೀಡಿದ ಸ್ಥಳಗಳಲ್ಲೆಲ್ಲಾ ನಿರೀಕ್ಷೆಗೂ ಮೀರಿದ ಸ್ಪಂದನೆ ಕಂಡುಬಂದಿದ್ದು, ಪ್ರಚಾರ ಕಾರ್ಯದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದೆ ತಮ್ಮ ಪ್ರತಿಸ್ಪರ್ಧಿಗಳೂ ತಮಗೆ ಪ್ರಚಾರ ಕಾರ್ಯದಲ್ಲಿ ಯಾವುದೇ ತೊಂದರೆ ನೀಡದಿರುವುದರಿಂದ ಕ್ಷೇತ್ರದ ಜನತೆಗೆ ಮತ್ತು ತಮ್ಮ ಪ್ರತಿಸ್ಪರ್ಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ತಿಳಿಸಿದರು.
ಗುರುವಾರ ಪತ್ರಿಕಾ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಭದ್ರಾವತಿ ಕ್ಷೇತ್ರದ ಜನತೆ ಆತ್ಮಸಾಕ್ಷಿಯಿಂದ ನನಗೆ ಮತನೀಡಿ ಆಶೀರ್ವದಿಸಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿಯ ಇತಿಹಾಸ ಸೃಷ್ಟಿಸಲು ಹಸ್ತದ ಗುರುತಿಗೆ ಮತನೀಡಿ ನನಗೆ 5 ವರ್ಷ ಸೇವೆ ಮಾಡುವ ಅವಕಾಶ ನೀಡಿ ಎಂದು ವಿನಂತಿಸಿದರು.
ಜೆಡಿಎಸ್ ಮೊದಲಾದವರು ಹಣ ಹಂಚುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ನಮ್ಮ ಗದ್ದೆ-ತೋಟಗಳಿಗೆ ಅವರು ನೀರು- ಗೊಬ್ಬರ ನೀಡುವುದಾದರೆ ನಾನೇಕೆ ಬೇಡವೆನ್ನಲಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಇಬ್ರಾಹಿಂ ಉತ್ತರಿಸಿದರು.
ರಕ್ತಗತ ಅಭಿಮಾನ: ಭದ್ರಾವತಿಯ ಜನ ನನ್ನ ಆಸ್ತಿ ಎಂದು ನಾನೆಂದೂ ಹೇಳಿಲ್ಲ. ಹುಟ್ಟಿದ ಊರು, ಜನರು ಮತ್ತು ಜಾಗವನ್ನು ಯಾರೂ ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳುವುದಿಲ್ಲ. ಅವುಗಳ ಬಗ್ಗೆ ಅಭಿಮಾನ ರಕ್ತಗತವಾಗಿ ಬರಬೇಕೆಂದು ಹೇಳಿದರು.
5 ವರ್ಷಗಳಲ್ಲಿ ಜನ ನನ್ನ ಸಾಧನೆ ಗುರುತಿಸಿ ನನ್ನನ್ನು ಸನ್ಮಾನಿಸುವಂತೆ ನಾನು ಕಾರ್ಯನಿರ್ವಹಿಸುತ್ತೇನೆ. ಜನರಲ್ಲಿ ಆರ್ಥಿಕ ಸಾಮರ್ಥ್ಯ ಹೆಚ್ಚಿದರೆ ಊರಿನ ವಾಣಿಜ್ಯೋದ್ಯಮ ಮತ್ತು ಆರ್ಥಿಕ ಸ್ಥಿತಿಗತಿಗಳು ತಾವೇ ಸುಧಾರಿಸುತ್ತವೆ. ಹೊಳೆಹೊನ್ನೂರು ಮತ್ತು ಸೀಗೆಬಾಗಿಗಳಲ್ಲಿ ಉದ್ಯಾನವನ ಮತ್ತು ಕ್ರೀಡಾಂಗಣ ಸ್ಥಾಪಿಸುತ್ತೇನೆ. ಪಟ್ಟಣದ ಮಧ್ಯಭಾಗದಲ್ಲಿರುವ 800 ವರ್ಷಗಳ ಇತಿಹಾಸವಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿ ದೇವಾಲಯಕ್ಕೆ ಹೋಗುವ ರಸ್ತೆಯನ್ನು 80 ಅಡಿ ರಸ್ತೆಯನ್ನಾಗಿ ಮಾರ್ಪಾಡು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗಿರಿಯಪ್ಪ, ಎಚ್.ಸಿ. ದಾಸೇಗೌಡ ಮತ್ತು ಗುರುಶಾಂತಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

