ಮುಗಿಯಿತು ಪರೀಕ್ಷೆ, ಫಲಿತಾಂಶದ ನಿರೀಕ್ಷೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 6
ಮುಂಚಿನಿಂದಲೂ ರಾಜ್ಯ ರಾಜಕೀಯದಲ್ಲಿ ಶಿವಮೊಗ್ಗದ ಪ್ರಭಾವ ಗಾಢವಾಗಿ ಮೂಡಿಬಂದಿದೆ. ಶಾಂತವೇರಿ ಗೋಪಾಲಗೌಡ, ಕಡಿದಾಳು ಮಂಜಪ್ಪ, ಜೆ.ಎಚ್. ಪಟೇಲ್, ಎಸ್. ಬಂಗಾರಪ್ಪ, ಯಡಿಯೂರಪ್ಪ, ಈಶ್ವರಪ್ಪ ಹೀಗೆ ಘಟಾನುಘಟಿ ನಾಯಕರು ಮುಂಚೂಣಿಯಲ್ಲಿದ್ದವರು. ಇಂತಹ ಕ್ಷೇತ್ರದಲ್ಲೀಗ ಚುನಾವಣೆ ಮುಗಿದಿದ್ದು ಲೆಕ್ಕಾಚಾರ ಆರಂಭವಾಗಿದೆ.
ಯಾರು ರಾಜಕೀಯದಿಂದ ಪಕ್ಕಕ್ಕೆ ಸರಿಯುತ್ತಾರೆ, ಯಾರು ಮುಂದುವರಿಯುತ್ತಾರೆ, ಮುಂದೆ ರಾಜ್ಯ ಮಟ್ಟದಲ್ಲಿ ಅಧಿಕಾರ ಹಿಡಿಯುವವರ್ಯಾರು ಎಂಬ ಚರ್ಚೆಯೂ ನಡೆದಿದೆ.
ಈ ಮಧ್ಯೆ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಒಳಾಂತರದಲ್ಲಿ ಲೆಕ್ಕಾಚಾರ ನಡೆದಿದ್ದು, ಯಾವ ಕ್ಷೇತ್ರದಲ್ಲಿ ಯಾರು ಎಷ್ಟು ಮತ ಗಳಿಸಬಹುದು, ಯಾರಿಗೆ ಹಿನ್ನಡೆಯಾಗಬಹುದು, ಯಾರು ಕೈಕೊಟ್ಟರು ಎಂಬಿತ್ಯಾದಿ ವಿಷಯಗಳ ವಿಚಾರವಾಗಿ ಚುನಾವಣಾ ಮರುದಿನ ಚರ್ಚೆಗಳು ನಡೆಯಿತು.
ಬಿಜೆಪಿ, 2 ನಿರೀಕ್ಷೆಯಷ್ಟೆ: ಬಿಜೆಪಿಗೆ ಜಿಲ್ಲೆಯಲ್ಲಿ ಎರಡು ಕ್ಷೇತ್ರದ ಮೇಲಷ್ಟೇ ಹೆಚ್ಚಿನ ನಿರೀಕ್ಷೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಸಾಂಪ್ರದಾಯಿಕವಾಗಿ ಬೀಳುತ್ತಿದ್ದ ಬ್ರಾಹ್ಮಣ ಮತಗಳು ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಕೈಕೊಡುವುದು ನಿಚ್ಚಳವಾಗಿರುವುದರಿಂದ ಪಕ್ಷದ ಮುಖಂಡರು ಲೀಡ್ನ ಲೆಕ್ಕಾಚಾರದಲ್ಲಿ ತೀರಾ ತಗ್ಗಿಬಂದಿದ್ದಾರೆ.
10-12 ಸಾವಿರ ಲೀಡ್ ಎಂದು ಹೇಳುತ್ತಿದ್ದವರು ಈಗ 1-2 ಸಾವಿರದ ಲೆಕ್ಕಾಚಾರ ಹೇಳುತ್ತಾರೆ. ಇನ್ನೊಂದೆಡೆ ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್ಗೆ ಸಾರಾಸಗಟು ಆಗಿದೆ ಎಂಬ ಸಂದೇಹವಿದ್ದು, ಈ ಬೆಳವಣಿಗೆ ನಡೆದರೆ ಕ್ಷೇತ್ರ ಕಳೆದುಕೊಳ್ಳುವ ಆತಂಕ ಆ ನಾಯಕರಲ್ಲಿ ಇದೆ.
ಇಲ್ಲಿ ಬಿಜೆಪಿ ಸೋತರೆ ಈಶ್ವರಪ್ಪನವರ ಸುತ್ತಕೋಟೆ ಕಟ್ಟಿರುವವರ ಮೇಲೆ ಜನರ ಆಕ್ರೋಶವೇ ಕಾರಣ ಎಂಬ ಪಕ್ಷದೊಳಗಿನ ಇನ್ಸೈಡ್ ಮಾತೂ ಇದೆ.
ಇನ್ನು ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಜ್ಞಾನೇಂದ್ರರಿಗೆ ಸುಲಭವಿಲ್ಲ, ಸಾಕಷ್ಟು ಪೈಪೋಟಿ ಇದೆ ಎಂದು ಆ ಪಕ್ಷದ ಮುಖಂಡರು ಅಭಿಪ್ರಾಯಪಡುತ್ತಾರೆ. ಕೆಜೆಪಿ ಅಭ್ಯರ್ಥಿ ಮಂಜುನಾಥ ಗೌಡರು ಪಡೆಯುವ ಮತಗಳ ಮೇಲೆ ಬಿಜೆಪಿ ಗೆಲುವು ನಿರ್ಧಾರವಾಗಲಿದೆ ಎಂದೂ ಹೇಳುತ್ತಾರೆ. ಈ ಎರಡೂ ಕ್ಷೇತ್ರ ಗೆಲ್ಲುತ್ತೇವೆಂದು ಬಿಜೆಪಿ ಮುಖಂಡರು ಹೇಳಿದರು, ಒಳಗೆ ಮಾತ್ರ ಅಳುಕು ಇದ್ದೇ ಇದೆ.
ಕಾಂಗ್ರೆಸ್, 3 ಗೆಲುವು, 3 ಸವಾಲು: ಶಿವಮೊಗ್ಗ, ಸಾಗರ, ತೀರ್ಥಹಳ್ಳಿಯಲ್ಲಿ ನಾವು ಗೆಲ್ಲೋದು ಖಚಿತ. ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ.
ಆದರೆ, ಶಿವಮೊಗ್ಗ ಗ್ರಾಮಾಂತರ, ಸೊರಬ, ಭದ್ರಾವತಿ, ಶಿಕಾರಿಪುರದ ಮೇಲೆ ನಂಬಿಕೆ ಇಲ್ಲ. ಶಿಕಾರಿಪುರ ಹಾಗೂ ಸೊರಬದಲ್ಲಿ ತೀವ್ರ ಪೈಪೋಟಿ ಇದೆ, ಸೋತೆಬಿಡುತ್ತೇವೆಂದು ಹೇಳುವುದಿಲ್ಲ ಎಂದು ವಿವರಿಸುತ್ತಾರೆ.
ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ಮೇಲೆ ಉಳಿಸಿಕೊಂಡಿರುವ ಪ್ರೀತಿ ಮತವಾಗಿ ಪರಿವರ್ತನೆಯಾಗುತ್ತದೆ. ಅಲ್ಲಿ ಕೆಜೆಪಿಯ ಅಬ್ಬರ ಜನರಿಗೆ ಬೇಸರ ತರಿಸಿದೆ.
ಇದು ಕಾಂಗ್ರೆಸ್ಗೆ ಅನುಕೂಲವಾಗಲಿದೆ. ಅದೇ ರೀತಿ ಸಾಗರದಲ್ಲಿ ಕಾಗೋಡು ತಿಮ್ಮಪ್ಪನವರ ಗೆಲುವಿನ ಅಂತರ ಕಡಿಮೆಯಾಗಬಹುದಷ್ಟೆ.
ಶಿವಮೊಗ್ಗದಲ್ಲಿ ಬ್ರಾಹ್ಮಣ ಹಾಗೂ ಮುಸ್ಲಿಂ ಮತಗಳ ಸಮೀಕರಣ ಗೆಲುವು ತಂದುಕೊಡಲಿದೆ ಎಂದು ಮುಖಂಡರು ಲೆಕ್ಕಹೇಳುತ್ತಾರೆ.
ಜಿಲ್ಲೆಯಲ್ಲಿ ಕೆಜೆಪಿ ಪರಿಣಾಮದಿಂದಲೂ ಕಾಂಗ್ರೆಸ್ಗೆ ಅನುಕೂಲವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
ಕೆಜೆಪಿ, 1 ಗೆಲುವು, 3 ಬೋನಸ್: ನಾಲ್ಕು ತಿಂಗಳ ಹಿಂದಷ್ಟೇ ಹುಟ್ಟಿದ ಕರ್ನಾಟಕ ಜನತಾಪಕ್ಷ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಸ್ಥಾನ ಗಳಿಸುವುದು ಖಚಿತ, ಸವಾಲ್ ಸ್ವೀಕರಿಸುತ್ತೀರಾ ಎಂದು ಆತ್ಮವಿಶ್ವಾಸದಿಂದ ಆ ಪಕ್ಷದ ಮುಖಂಡರು ಹೇಳುತ್ತಾರೆ.
ಶಿಕಾರಿಪುರದಲ್ಲಿ ಸುಲಭ ಜಯ, ಉಳಿದಂತೆ ಶಿವಮೊಗ್ಗ, ಸೊರಬದಲ್ಲಿ ಕಡಿಮೆ ಅಂತರದಲ್ಲಿ ಕೆಲವು ನಿಶ್ಚಿತ. ಶಿವಮೊಗ್ಗ ಗ್ರಾಮಾಂತರ ಅಥವಾ ಸಾಗರದ ಗೆಲವು ನಮಗೆ ಬೋನಸ್ ಅಂಕ ಎಂದು ಅಭಿಪ್ರಾಯಪಡುತ್ತಾರೆ.
ಭದ್ರಾವತಿಯಲ್ಲಿ ಪಕ್ಷೇತರ ಅಭ್ಯರ್ಥಿ ಸಂಗಮೇಶ್ ಅವರಿಗೆ ನಮ್ಮ ಬೆಂಬಲ ಘೋಷಿಸಿದ್ದು, ಇಲ್ಲೂ ಸಹ ನಮಗೆ ಅನುಕೂಲಕರವಿದೆ ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್, 2 ಬೋನಸ್: ಮಲೆನಾಡಲ್ಲಿ ಬೆಳೆ ತೆಗೆಯಲು ಹೊರಟ ಜೆಡಿಎಸ್ಗೆ ಸೊರಬ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಸಾಕಷ್ಟು ಪೈಪೋಟಿ ಇದೆ, ಆದರೂ ಎರಡು ಸೀಟು ಖಚಿತ. ಭದ್ರಾವತಿಯಲ್ಲಿ ಗೆದ್ದೇ ಬಿಡುತ್ತೆವೆಂಬ ಸ್ಥಿತಿ ಇತ್ತು. ಆದರೆ, ಈಗ ತೀವ್ರ ಪೈಪೋಟಿ ಇದೆ, ಗೆಲ್ಲುವ ವಿಶ್ವಾಸವಿದೆ. ಅದೇ ರೀತಿ ಸಾಗರ, ಶಿವಮೊಗ್ಗದಲ್ಲಿ ಅಚ್ಚರಿ ಫಲಿತಾಂಶ ನೀಡುತ್ತೇವೆಂದು ಆ ಪಕ್ಷದ ಹಿರಿಯರು ಅಭಿಪ್ರಾಯಪಡುತ್ತಾರೆ. ಗೆಲ್ಲುವ ವಿಶ್ವಾಸ 2 ಕ್ಷೇತ್ರದ ಮೇಲಷ್ಟೆ.
ಒಟ್ಟಾರೆ ದೊಡ್ಡಮಟ್ಟದಲ್ಲಿ ಲಿಂಗಾಯಿತ ಮತಗಳು ಕೆಜೆಪಿಯತ್ತಲೂ, ಈಡಿಗ ಮತಗಳು ಬಿಜೆಪಿಯ ಕೈಬಿಟ್ಟಿದ್ದು ಚುನಾವಣೆಯ ಪ್ರಧಾನ ಅಂಶಗಳು. ಇದರೊಂದಿಗೆ ಫಲಿತಾಂಶ ಕೂಡ ಸಾಕಷ್ಟು ಬದಲಾಗುವ ಲಕ್ಷಣ ಕಂಡುಬಂದಿದೆ. ಕಳೆದ ಚುನಾವಣೆಯಲ್ಲಿ ಐದು ಕ್ಷೇತ್ರ ಗೆದ್ದಿದ್ದ ಬಿಜೆಪಿಗೆ ಈಗ ಶೂನ್ಯಸಾಧನೆಯ ಆತಂಕ ಮನೆ ಮಾಡಿದೆ. ಪಕ್ಷದ ಮುಖಂಡರ, ಕಾರ್ಯಕರ್ತರ ಎಲ್ಲರ ಕುತೂಹಲದ ನಿರೀಕ್ಷೆಗೆ ನಾಳಿನ ಫಲಿತಾಂಶ ಉತ್ತರ ನೀಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

