ಶಿವಮೊಗ್ಗ

ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 13
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಮುಖ್ಯ ಗುರಿ ಎಂದು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಮಹಿಳಾ ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದ್ದಾರೆ.
ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡುತ್ತೇನೆ. ವಿರೋಧ ಪಕ್ಷದ ಶಾಸಕಿಯಾಗಿದ್ದರೂ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದರು.
ಸೇತುವೆ ಕಾಮಗಾರಿ: ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಬಗ್ಗೆ, ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ನಿಲವುಗಳನ್ನು ಹಂಚಿಕೊಂಡರು. ಗ್ರಾಮೀಣ ಕ್ಷೇತ್ರದಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು.
ಕ್ಷೇತ್ರದ ಎರಡು ಭಾಗಗಳನ್ನು ಸಂಪರ್ಕಿಸುವಂತಹ ಸೇತುವೆ ಅನುಷ್ಠಾನ ನೆನೆಗುದಿಗೆ ಬಿದ್ದಿದೆ. ಇದೂ ಕೂಡ ಆದಷ್ಟು ಬೇಗ ಆಗಬೇಕಿದೆ ಎಂದು ಹೇಳಿದರು.
ರೈತರ ಕೃಷಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ. ಈ ಸಂಬಂಧ ಶೀಘ್ರ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಹೊಳೆಹೊನ್ನೂರಿನಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಕುಂಸಿ, ಹೊಳಲೂರು ಹೋಬಳಿ ವ್ಯಾಪ್ತಿಯಲ್ಲಿಯೂ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ ಎಂದರು.
ತುಂಗಾ ಏತ ನೀರಾವರಿ ಯೋಜನೆ ಆದೇಶವಾಗಿದೆಯೇ ಹೊರತು ಅನುಷ್ಠಾನದ ದಿಸೆಯಲ್ಲಿ ಹಲವು ಕಾರ್ಯ ಆಗಬೇಕಾಗಿದೆ. ಇದನ್ನು ಜಾರಿಗೊಳಿಸಿ ಕುಂಸಿ, ಹಾರ್ನಹಳ್ಳಿ ಗ್ರಾಮಗಳಿಗೆ ಅನುಕೂಲ ಮಾಡಿಕೊಡುತ್ತೇನೆ. ಪಕ್ಷದ ಕಾರ್ಯಕರ್ತರ ಸಹಕಾರದೊಂದಿಗೆ ಬಡವರಿಗೆ ಆಶ್ರಯ ನಿವೇಶನ, ಬಿಪಿಎಲ್ ಕಾರ್ಡ್, ವೃದ್ಧಾಪ್ಯ ವೇತನ ಇತ್ಯಾದಿ ಸರ್ಕಾರಿ ಸೌಲಭ್ಯ ಸಿಗುವಂತೆ ನೋಡಿಕೊಳ್ಳುತ್ತೇನೆ ಎಂದರು.
ಅಧ್ಯಕ್ಷರ ಅನವೊಲಿಕೆ: ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರುವುದು ದುಡುಕಿನ ನಿರ್ಧಾರ ಎಂದು ಪ್ರತಿಕ್ರಿಯಿಸಿದ ಅವರು, ಅವರೊಂದಿಗೆ ಮಾತನಾಡುತ್ತೇನೆ. ಜಿಲ್ಲಾಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿಯುವಂತೆ ಅವರ ಮನವೊಲಿಸುತ್ತೇನೆ ಎಂದು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಟಿ.ಬಿ. ಜಗದೀಶ್, ಮುಖಂಡರಾದ ಕೆ.ಪಿ. ಓಂಕಾರಪ್ಪ, ಸಿ.ಪಿ. ನಾಗರಾಜ್, ಲಿಂಗರಾಜ್, ಹಲವರು ಇದ್ದರು.

ಶಾಸಕಿ ಹೇಳಿದ್ದು
  ಕುಂಸಿ ಹಾಗೂ ಹೊಳೆಹೊನ್ನೂರು ಎರಡು ತಾಲೂಕು ಕೇಂದ್ರವಾಗುವ ಅರ್ಹತೆ ಹೊಂದಿವೆ. ಮೊದಲು ಈ ಎರಡು ಗ್ರಾಮ ಪಂಚಾಯ್ತಿಗಳನ್ನು ಉನ್ನತೀಕರಿಸಬೇಕು. ಈ ದಿಕ್ಕಿನಲ್ಲಿ ಪ್ರಯತ್ನ ನಡೆಸುತ್ತೇನೆ.
  ಗೋರಕ್ ಸಿಂಗ್ ವರದಿ ಜಾರಿಯಾಗಬೇಕು. ಇದರಿಂದ ರೈತರಿಗೆ ಖಂಡಿತಾ ಅನುಕೂಲವಾಗಲಿದೆ.
  ನನ್ನ ಗೆಲವಿಗೆ ಪ್ರತಿಸ್ಪರ್ಧಿಗಳ ವಯಸ್ಸು ಕಾರಣ ಅಲ್ಲ. ನಾನು ಕಳೆದ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಮತಗಳನ್ನು ಬಸವಣ್ಯಪ್ಪ ಈ ಬಾರಿ ಪಡೆದಿದ್ದಾರೆ. ಅಂದರೆ ನನಗೆ ವಯಸ್ಸಾಗಿದೆ ಎಂದು ಅರ್ಥವೇ?
  ಕೂಡ್ಲಿ ಕ್ಷೇತ್ರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು. ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.