ಫ್ಲೆಕ್ ಹಾವಳಿ: ಸಾರ್ವಜನಿಕರಿಗೆ ಕಿರಿಕಿರಿ
ಕ.ಪ್ರ.ವಾರ್ತೆ ಶಿವಮೊಗ್ಗ ನ.20
ನಗರದಲ್ಲಿ ತಮ್ಮ ಮುಖಾರವಿಂದವನ್ನು ಜನರಿಗೆ ತೋರ್ಪಡಿಸಲು ಇನ್ನಿಲ್ಲದ ಹರಸಾಹಸಪಡುವ ರಾಜಕೀಯ ನಾಯಕರ ಫ್ಲೆಕ್ಸ್ ಧಾವಂತ ಲಕ್ಷಾಂತರ ರುಪಾಯಿ ಖರ್ಚು ಮಾಡಿದ ಫುಟ್ಪಾತ್ಅನ್ನು ಬಲಿ ತೆಗೆದುಕೊಳ್ಳುತ್ತಿದೆ.
ಈ ವಿಚಾರದಲ್ಲಿ ಕೈಗನ್ನಡಿಯಂತಿರುವುದು ಕುವೆಂಪು ರಂಗಮಂದಿರ ಮುಂಭಾಗದ ರಸ್ತೆಯಲ್ಲಿರುವ ಫುಟ್ಪಾತ್. ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಸಾವಿರಾರು ಮಂದಿ ಕುವೆಂಪು ರಂಗಮಂದಿರಕ್ಕೆ ಬಂದು ಹೋಗುತ್ತಾರೆಂಬ ಕಾರಣಕ್ಕೆ ರಾಜಕೀಯ ನಾಯಕರು ಇಲ್ಲಿ ಫ್ಲೆಕ್ಸ್ ಹಾಕುವ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಇದರಿಂದ ಅಂದವಾಗಿದ್ದ ಫುಟ್ಪಾತ್ ಕಿತ್ತುಹೋಗಲಾರಂಭಿಸಿದೆ.
ಕನಕ ಜಯಂತಿಯ ಅಂಗವಾಗಿ ಮಂಗಳವಾರದಿಂದೀಚೆಗೆ ಹತ್ತಾರು ಫ್ಲೆಕ್ಸ್ಗಳನ್ನು ಇಲ್ಲಿ ಅಳವಡಿಸಲಾಗಿದ್ದು, ಹೀಗೆ ಅಳವಡಿಸುವುದಕ್ಕಾಗಿ ಫುಟ್ಪಾತ್ಅನ್ನು ಅಗೆದು ಕಂಬ ನೆಡಲಾಗಿದೆ. ಇದರಿಂದ ಫುಟ್ಪಾತ್ ಸಡಿಲಗೊಂಡಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ನಡೆದಾಡಲು ಯೋಗ್ಯವಲ್ಲದ ಸ್ಥಳವಾಗುತ್ತದೆ ಎಂಬುದು ಸಾರ್ವಜನಿಕರ ಆತಂಕ.
ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಫುಟ್ಪಾತ್ ನಿರ್ಮಿಸಲಾಗಿದೆ. ಜನರ ತೆರಿಗೆ ಹಣದಿಂದಲೇ ಈ ಕಾಮಗಾರಿ ನಡೆದಿದೆ. ಆದರೆ, ಬುದ್ಧಿಗೇಡಿ ರಾಜಕಾರಣಿಗಳು ತಮ್ಮ ಫ್ಲೆಕ್ಸ್ ಹಾಕಿಸುವ ತರಾತುರಿಯಲ್ಲಿ ಸಾವಿರಾರು ಜನಸಾಮಾನ್ಯ, ಶಾಲಾ- ಕಾಲೇಜು ಮಕ್ಕಳು ನಡೆದಾಡುವ ದಾರಿ ಹಾಳು ಮಾಡುವುದು ಎಷ್ಟು ಸರಿ ಎಂಬುದು ಹಿರಿಯ ನಾಗರಿಕ ನಾಗರಾಜ ಶೆಟ್ಟಿಯವರ ಪ್ರಶ್ನೆ.
ಕುವೆಂಪು ರಂಗಮಂದಿರ ಮುಂಭಾಗವಷ್ಟೇ ಅಲ್ಲದೆ, ಬಿ.ಎಚ್. ರಸ್ತೆಯ ಅನೇಕ ಕಡೆಗಳಲ್ಲೂ ಇದೇ ಪರಿಸ್ಥಿತಿ ಇದೆ. ನಗರಸಭೆ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ. ಫುಟ್ಪಾತ್ ಕಿತ್ತು ಹಾಕುತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ. ಅಧಿಕಾರಿಗಳು ಈ ವಿಚಾರವನ್ನು ನಗರಸಭೆ ಗಮನಕ್ಕೆ ತಂದಿದ್ದರೂ ಅದು ತನಗೆ ಗೊತ್ತೇ ಇಲ್ಲವೆಂಬಂತೆ ವರ್ತಿಸುತ್ತಿದೆ.
ಫ್ಲೆಕ್ಸ್ಗೆ ಆದ್ಯತೆ ದೊಡ್ಡ ದುರಂತ
ಕನಕ ಜಯಂತಿ ಕಾರ್ಯಕ್ರಮಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಫ್ಲೆಕ್ಸ್ ಧಾವಂತವನ್ನು ಗಂಭೀರವಾಗಿ ಪರಿಗಣಿಸಿದಂತಿದೆ.
ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರ ಜಯಂತಿಯ ಶುಭ ಕೋರಿ ಹಾಕಿರುವ ಅನೇಕ ಫ್ಲೆಕ್ಸ್ಗಳಲ್ಲಿ ಕನಕದಾಸರ ಫೋಟೋ ಚಿಕ್ಕದಾಗಿದೆ. ನಮ್ಮ ಫೋಟೋಗಳೇ ದೊಡ್ಡದಾಗಿವೆ. ವಾಸ್ತವವಾಗಿ ನಮಗೆ ಮುಖವೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ನಾವು ಏನು ಸಾಧನೆ ಮಾಡಿದ್ದೇವೆಂದು ಫ್ಲೆಕ್ಸ್ ಹಾಕಿಕೊಳ್ಳಬೇಕು. ಕನಕ, ಬುದ್ಧ, ಗಾಂಧಿ, ಅಂಬೇಡ್ಕರ್ ಅವರನ್ನು ಹೋಲಿಸಿಕೊಂಡರೆ ನಾವು ಕ್ರಿಮಿಗಳಷ್ಟೆ ಎಂದ ಅವರು, ಫ್ಲೆಕ್ಸ್ಗೆ ಆದ್ಯತೆ ಕೊಡುತ್ತಿರುವುದು ದೊಡ್ಡ ದುರಂತ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

