ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ
ಕ.ಪ್ರ.ವಾರ್ತೆ ಸಾಗರ ನ. 26
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಹಿನ್ನಡೆಯಾಗಿದೆ. ಕ್ಷೇತ್ರದ ಶಾಸಕರಾಗಿರುವ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳೆಲ್ಲ ಹುಸಿಯಾಗಿದೆ.
ಬಗರ್ಹುಕುಂ ಹಕ್ಕುಪತ್ರ ವಿತರಣೆ ಸೇರಿದಂತೆ ಅನೇಕ ಜನಪರ ಕಾರ್ಯಗಳು ನೆನೆಗುದಿಗೆ ಬಿದ್ದಿದ್ದು, ಇದು ಈಡೇರದಿದ್ದರೆ ಡಿಸೆಂಬರ್ನಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಮಾಡಲಾಗುವುದು ಎಂದು ಬೇಳೂರು ಅಭಿಮಾನಿ ಬಳಗದ ಪ್ರಮುಖರು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಳಗದ ಆರ್.ಸಿ. ಮಂಜುನಾಥ್ ಮಾತನಾಡಿ, ಬೇಳೂರು ಶಾಸಕರಾಗಿದ್ದಾಗ ಬಗರ್ಹುಕುಂ ಮಂಜೂರಾತಿಗೆ ಸಂಬಂಧಿಸಿದಂತೆ ಸುಮಾರು 2500 ಫಲಾನುಭವಿಗಳ ಕಡತ ತಯಾರಿಸಿ ಆ ಪೈಕಿ 420 ಫಲಾನುಭವಿಗಳಿಗೆ ಮಂಜೂರಾತಿ ನೀಡಲು ಅನುಮತಿ ನೀಡಲಾಗಿತ್ತು. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಕೇವಲ 75 ಫಲಾನುಭವಿಗಳಿಗೆ ಮಾತ್ರ ಹಕ್ಕುಪತ್ರ ನೀಡಿದ್ದಾರೆ. ಕೂಡಲೆ ಉಳಿದವರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಅಸಹಕಾರ: 1991ರಲ್ಲಿ ಬಗರ್ಹುಕುಂ ಕಾಯ್ದೆ ಜಾರಿಗೆ ಬಂದಾಗ ತಾಲೂಕಿನಲ್ಲಿ ಫಾರಂ ನಂ. 50ರಲ್ಲಿ 21931 ಅರ್ಜಿಗಳು ಬಂದಿದ್ದವು. 1999ರ ತಿದ್ದುಪಡಿ ಮಸೂದೆಯಂತೆ ಫಾರಂ ನಂ. 53ರಲ್ಲಿ 23393 ಅರ್ಜಿಗಳು ಬಂದಿತ್ತು. ಆದರೆ, 2004ರವರೆಗೆ ಎರಡೂ ಫಾರಂಗಳಿಂದ ಕ್ರಮವಾಗಿ 14283, 13560 ಅರ್ಜಿಗಳನ್ನು ವಜಾ ಮಾಡಲಾಗಿತ್ತು. ಆ ನಂತರ ಬೇಳೂರು ಶಾಸಕರಾಗಿದ್ದಾಗ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಿಂಬರಹದ ಆಧಾರದಲ್ಲಿ ಮಂಜೂರಾತಿಗೆ ಕ್ರಮ ಕೈಗೊಳ್ಳಲು ಕಳಿಸಲಾಗಿತ್ತು. ಈ ಪ್ರಕಾರ 2500 ಫಲಾನುಭವಿಗಳ ಕಡತ ತಯಾರಿಸಿ ಮಂಜೂರಾತಿಗೆ ಶಿಫಾರಸು ಮಾಡಲಾಗಿತ್ತು. ಆಗಿನ ತಹಸೀಲ್ದಾರರ ಅಸಹಕಾರದಿಂದ ಅರ್ಹ ಫಲಾನುಭವಿಗಳಿಗೆಲ್ಲರಿಗೂ ಹಕ್ಕುಪತ್ರ ನೀಡಲು ಸಾಧ್ಯವಾಗಲಿಲ್ಲ ಎಂದರು.
ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಾಲುಬಾಯಿ ರೋಗದಿಂದ ಸಾವಿರಾರು ಜಾನುವಾರುಗಳು ಮೃತಪಟ್ಟಿದ್ದರೂ ಗಂಭೀರ ಪ್ರಯತ್ನ ಮಾಡಿಲ್ಲ. ನಗರಸಭೆ ಚುನಾವಣೆ ನಡೆದು ಇಷ್ಟು ತಿಂಗಳಾದರೂ ಆಯ್ಕೆಯಾದ ಜನಪ್ರತಿನಿಧಿಗಳ ಕೈಗೆ ಅಧಿಕಾರ ಬಂದಿಲ್ಲ. ಇದರಿಂದಾಗಿ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇವೆಲ್ಲವುಗಳ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಡಿಸೆಂಬರ್ ತಿಂಗಳಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಬಳಗದ ಎಂ.ಜಿ. ದೀನದಯಾಳು, ಕಲಸೆ ಚಂದ್ರಪ್ಪ, ಗಣಪತಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

