ಶಿವಮೊಗ್ಗ

ಕೂಲಿ ಕಾರ್ಮಿಕರ ಗುಳೆ: ಜಯ ಕರ್ನಾಟಕ ಪ್ರತಿಭಟನೆ

Published On :

ಶಿಕಾರಿಪುರ: ತಾಲೂಕಿನಿಂದ ಬೇರೆಡೆಗೆ ಗುಳೆ ಹೋಗುತ್ತಿರುವ ಕೂಲಿ ಕಾರ್ಮಿಕರನ್ನು ತಡೆಯಬೇಕು ಹಾಗೂ ಸ್ಥಳೀಯವಾಗಿ ಸಿಗುತ್ತಿರುವ ಜಲ್ಲಿಕಲ್ಲು ಬೆಲೆಯನ್ನು ಇಳಿಸಬೇಕು ಎಂದು ಆಗ್ರಹಿಸಿ ತಾಲೂಕು ಜಯಕರ್ನಾಟಕ ನೇತೃತ್ವದಲ್ಲಿ ನೂರಾರು ಕೂಲಿಕಾರ್ಮಿಕರು ಗುರುವಾರ ಇಲ್ಲಿನ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ತಾಲೂಕಿನ ಹಾರೋಗೊಪ್ಪ ಸುತ್ತಮುತ್ತಲಿನ ಜಲ್ಲಿಕಲ್ಲುಗಳನ್ನು ಸ್ಥಳೀಯವಾಗಿ ಕಟ್ಟಡ ಕಾಮಗಾರಿಗೆ ಬಳಸಿಕೊಳ್ಳಲು ಕೇಂದ್ರದ ಸ್ಪಷ್ಟ ಆದೇಶವಿದ್ದರೂ ಸರ್ಕಾರಿ ಅಧಿಕಾರಿಗಳ ಒಳಒಪ್ಪಂದಕ್ಕೆ ಸಾರ್ವಜನಿಕರು ಹೊರ ಜಿಲ್ಲೆಗಳ ಜಲ್ಲಿಕಲ್ಲುಗಳನ್ನು ಉಪಯೋಗಿಸುತ್ತಿದ್ದಾರೆ. ಇದನ್ನು ತಡೆಗಟ್ಟುವಂತೆಯೂ ಕ್ರಮಕೈಗೊಳ್ಳಬೇಕು ಎಂದು ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಬೊಕ್ಕಸಕ್ಕೆ ನಷ್ಟ: ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾ. ಜಯಕರ್ನಾಟಕ ಅಧ್ಯಕ್ಷ ಕೃಷ್ಣ ಹುಲಗಿ, ಸರ್ಕಾರಿ ಆದೇಶದನ್ವಯ ತಾಲೂಕಿನ ಎರೆಕಟ್ಟೆ, ಹಾರೋಗೊಪ್ಪ, ಸಿದ್ದಗಿನಹಾಳ್‌ನಲ್ಲಿನ ಕಲ್ಲುಗಣಿ ಮೂಲಕ ಉತ್ಪಾದಿಸಲ್ಪಡುವ ಜಲ್ಲಿಕಲ್ಲನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುವ ಕಾಮಗಾರಿಗಳಿಗೆ ಬಳಸಲು ಅರಣ್ಯ ಇಲಾಖೆ ಮೂಲಕ ಪಡೆಯುವಂತೆ ಸ್ಪಷ್ಟ ಆದೇಶವಿದ್ದರೂ ಕಮೀಷನ್ ಆಸೆಗಾಗಿ ಹೆಚ್ಚಿನ ಹಣ ನೀಡಿ ಇದುವರೆಗೂ ಹೊರ ಜಿಲ್ಲೆಗಳ ಕಲ್ಲನ್ನು ಬಳಸಿಕೊಳ್ಳುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವುಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕ್ರಮಕ್ಕೆ ಆಗ್ರಹ: ಬಡ ಕೂಲಿಕಾರ್ಮಿಕರ ವಲಸೆ ತಪ್ಪಿಸಿ ಸರ್ಕಾರದ ಬೊಕ್ಕಸದ ನಷ್ಟ ತಪ್ಪಿಸಲು ಈ ಕೂಡಲೇ ಸರ್ಕಾರ ಸ್ಥಳೀಯವಾಗಿ ದೊರೆಯುವ ಅಧಿಕೃತ ಜಲ್ಲಿಕಲ್ಲುಗಳನ್ನು ಬಳಸಿಕೊಳ್ಳಲು ಆದೇಶಿಸಿ, ಲಕ್ಷಾಂತರ ಹಣ ತೆತ್ತು ಸಾಲ ಮಾಡಿ ಟ್ರಾಕ್ಟರ್ ಮತ್ತಿತರ ವಾಹನ ಖರೀದಿಸಿರುವ ವಾಹನ ಮಾಲಿಕರು ಜಲ್ಲಿಕಲ್ಲುಗಳನ್ನು ನಂಬಿ ಇದೀಗ ಸಾಲದ ಕಂತು ಪಾವತಿಸಲಾಗದೆ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಕೂಡಲೇ ಹೊರ ಜಿಲ್ಲೆಯಿಂದ ಬರುತ್ತಿರುವ ಜಲ್ಲಿಕಲ್ಲುಗಳನ್ನು ಜಪ್ತಿಗೊಳಿಸಿ ಸ್ಥಳೀಯ ಜಲ್ಲಿಕಲ್ಲುಗಳನ್ನು ಉಪಯೋಗಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಆರಂಭದಲ್ಲಿ ಅರಣ್ಯ ಇಲಾಖೆ ಮುಂಭಾಗ ದರಣಿ ನಡೆಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ನೂರಾರು ಕೂಲಿಕಾರ್ಮಿಕರು, ಟ್ರಾಕ್ಟರ್ ಮೂಲಕ ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಅರಣ್ಯ ಸಚಿವರು,ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರದೀಪ, ಸುರೇಶ್, ಮಹೇಶ್, ಜಯಾನಾಯ್ಕ, ಗಂಗಾನಾಯ್ಕ, ಸುಭಾಷ್, ನಾಗರಾಜನಾಯ್ಕ, ರಾಮಾನಾಯ್ಕ, ಷಣ್ಮುಖಪ್ಪ, ಜಗದೀಶ್, ರಾಜಶೇಖರ್, ಉಮೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.