ಶಿವಮೊಗ್ಗ

'ವೈಜ್ಞಾನಿಕ ಬೆಲೆ ಸಿಕ್ಕಲ್ಲಿ ರೈತರ ಕಷ್ಟ ದೂರ'

Published On :

ಶಿವಮೊಗ್ಗ: ರೈತರು ಬೆಳೆ ಬೆಳೆಯುವ ಮುನ್ನವೇ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಿರಬೇಕು. ಹಾಗಿದ್ದಾಗ ಮಾತ್ರ ರೈತರು ತಮ್ಮ ಸಂಕಷ್ಟಗಳಿಂದ ಹೊರಬರಲು ಸಾಧ್ಯ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ. ಆರ್. ಎಂ. ಮಂಜುನಾಥಗೌಡ ಹೇಳಿದರು.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಬಾರ್ಡ್ ಆಯೋಜಿಸಿದ್ದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕುರಿತಾದ ರೈತರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ರೈತರು ಬಿತ್ತನೆಗೆ ಮುನ್ನವೇ ತಾವು ಯಾವ ಬೆಳೆ ಬೆಳೆದರೆ ಎಷ್ಟು ಲಾಭ ಸಿಗುತ್ತದೆ ಎಂಬ ಲೆಕ್ಕಾಚಾರ ಹಾಕುವಂತಿರಬೇಕು. ಆಗ ರೈತರಿಗೆ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ರೈತರಿಗೆ ತಮ್ಮ ಬೆಳೆಗೆ ಯಾವ ಬೆಲೆ ಸಿಗುತ್ತದೆ ಎಂಬುದು ಗೊತ್ತಾಗಬೇಕು. ಇಂತಹ ವ್ಯವಸ್ಥೆಯಿಂದ ಮಾತ್ರ ರೈತರು ಉತ್ತಮ ರೀತಿಯಲ್ಲಿ ಬದುಕಬಹುದೇ ವಿನಃ ಕೇವಲ ಸಾಲ ಮನ್ನಾ, ಬಡ್ಡಿ ಮನ್ನಾ ಕ್ರಮಗಳಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ, ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣ ನೀಡಲಾಗುತ್ತದೆ. ಸರ್ಕಾರಗಳು ಬಡ್ಡಿ ರಹಿತ ಸಾಲ ನೀಡುತ್ತದೆ.
 ಇದರಿಂದ ಸಮಸ್ಯೆ ಪರಿಹಾರವಾಗಿದೆಯೇ ಎಂದು ಪ್ರಶ್ನಿಸಿದ ಮಂಜುನಾಥ ಗೌಡ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಆಗ ಮಾತ್ರ ರೈತರ ಆತ್ಮಹತ್ಯೆಯನ್ನು ತಡೆಗಟ್ಟಬಹುದು. ಬೆಳಗಾವಿಯಲ್ಲಿ ವಿಠಲ ಅರಬಾವಿ ಆತ್ಮಹತ್ಯೆ ಕೂಡ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ಇರುವುದೇ ಕಾರಣ ಎಂದರು.
ವೈಜ್ಞಾನಿಕ ಬೆಲೆ ಜೊತೆಗೆ ಉತ್ತಮ ಮಾರುಕಟ್ಟೆ ಸೌಲಭ್ಯವೂ ಅತಿ ಮುಖ್ಯ. ಸಾಂಪ್ರದಾಯಿಕ ಮಾರುಕಟ್ಟೆಯನ್ನು ಮೀರಿ ರೈತರು ವ್ಯವಹರಿಸಬೇಕು. ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಇದನ್ನು ಬಳಸಿಕೊಂಡು ಹೊಸ ರೀತಿಯ ವ್ಯಾಪಾರ ವಹಿವಾಟು ನಡೆಸಬೇಕು. ಇ- ಮಾರುಕಟ್ಟೆ ಇಂದು ವಿದೇಶಗಳಲ್ಲಿ ಜನಪ್ರಿಯವಾಗಿದೆ. ಇದನ್ನು ನಮ್ಮ ದೇಶದಲ್ಲಿಯೂ ರೈತರು ಬಳಸುವಂತಾಗಬೇಕು.
ಇಲ್ಲಿಯೇ ಕುಳಿತು ದೆಹಲಿಯ ವ್ಯಾಪಾರಿಯೊಬ್ಬರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುವ ವ್ಯವಸ್ಥೆಗೆ ನಾವು ತೆರೆದುಕೊಳ್ಳಬೇಕು. ಅದೇ ರೀತಿ ಫಾರ್ವರ್ಡಿಂಗ್ ಟ್ರೇಡಿಂಗ್ ಕೂಡ ರೈತರಿಗೆ ವರದಾನವಾಗಬಹುದು ಎಂದರು.
ರೈತರ ಆತ್ಮಹತ್ಯೆ ತಡೆಗಟ್ಟಲು ಅಗತ್ಯವಾದ ಇಂತಹ ಕಾರ್ಯಕ್ರಮಗಳ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು ಯೋಚಿಸಬೇಕೆಂದು ಸಲಹೆ ನೀಡಿದರು.
ಬೆಂಗಳೂರು ಜಿ.ಕೆ.ವಿ.ಕೆ.ಯ ಪ್ರೊ. ಡಾ. ವೆಂಕಟರೆಡ್ಡಿ ಉಪನ್ಯಾಸ ನೀಡಿದರು. ನಬಾರ್ಡ್ ಎಜಿಎಂ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗಭೂಷಣ, ಪ್ರಗತಿಪರ ರೈತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.