ನಿರ್ವಹಣೆ ಇಲ್ಲದೆ ಸೊರಗಿದ ಹೈಟೆಕ್ ನಿಲ್ದಾಣ
ಕ.ಪ್ರ. ವಾರ್ತೆ, ಹೊಸನಗರ, ಸೆ.4
ಹೈಟೆಕ್ ಚಚ್ನೊಂದಿಗೆ ಮೈದಳೆದ ಪಟ್ಟಣದ ಖಾಸಗಿ ಬಸ್ ನಿಲ್ದಾಣ ವರ್ಷ ಕಳೆಯುದರೊಳಗೆ ನಿರ್ವಹಣೆ ಇಲ್ಲದೆ ನಲುಗಿ ಹೋಗಿದೆ.
ಆರಂಭದಲ್ಲಿ 24 ಗಂಟೆಕಾಲ ದೊರೆಯುತ್ತಿದ್ದ ನೀರು ಬರುತ್ತಿಲ್ಲ. ಶ್ವಾನಗಳು, ಜಾನುವಾರುಗಳಿಗೂ ತಡೆಯಿಲ್ಲದಂತಾಗಿದ್ದು ನಿಲ್ದಾಣವನ್ನು ತಮ್ಮದೆ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ. ಇನ್ನು ಸ್ವಚ್ಛತೆ ಎಂಬುದು ದಿನಕಳೆದಂತೆ ಎಲ್ಲಿ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಮತ್ತು ಶೌಚಾಲಯದ ಅಸಮರ್ಪಕ ವ್ಯವಸ್ಥೆಯಿಂದಾಗಿ ದಿನಕ್ಕೊಂದು ಅವ್ಯವಸ್ಥೆ ಕಂಡು ಬರುತ್ತಿದ್ದು, ಹೈಟೆಕ್ ಅಂದರೆ ಇದೇನಾ ಎಂಬ ಪ್ರಶ್ನೆ ಹುಟ್ಟು ಹಾಕುವಂತಿದೆ.
ಪ್ರಯಾಣಿಕರ ಅಸಮಾಧಾನ: ಇದ್ದ ನಿಲ್ದಾಣ ಕೆಡವಿ ಸುಸಜ್ಜಿತ ನಿಲ್ದಾಣದ ಕನಸಿನೊಂದಿಗೆ ಕಾಮಗಾರಿ ಪ್ರಾರಂಭಗೊಂಡು ಪೂರ್ಣಗೊಳ್ಳಬೇಕಾದರೆ ಬರೋಬ್ಬರಿ 6 ವರ್ಷ ತೆಗೆದುಕೊಂಡಿದ್ದು ಹಳೆಮಾತು. ಆದರೀಗ ಪಟ್ಟಣದ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ನಿಲ್ದಾಣ ಏನೋ ನಿರ್ಮಾಣಗೊಂಡಿದೆ ಅದು ಕೂಡ ಹೈಟೆಕ್ ಟಚ್ನೊಂದಿಗೆ. ಆದರೆ ದೂರದ ಬೆಟ್ಟ ನುಣ್ಣಗೆ ಎಂಬಂತೆ ಒಳಹೊಕ್ಕಾಗ ಇಲ್ಲಿರುವ ಅವ್ಯವಸ್ಥೆ ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಿಲ್ದಾಣ ಯಾವಾಗಲು ಪ್ರಯಾಣಿಕರಿಂದ ಗಿಜಿಗುಡುತ್ತಿದ್ದು, ಅವರಿಗಾಗಿ ಟಿವಿ ವ್ಯವಸ್ಥೆ ಕೂಡ ಮಾಡಲಾಗಿದೆ. ಪಟ್ಟಣ ಪಂಚಾಯ್ತಿ ಆದಾಯ ತರುವ ನಿಟ್ಟಿನಲ್ಲಿ ಹೋಟೆಲ್ ಅಂಗಡಿ ಮುಗ್ಗಟ್ಟಗಳನ್ನು ಹರಾಜು ನೀಡಿ ಹಲವು ಸಮಯವೆ ಕಳೆದಿದೆ. ಆದರಿನ್ನು ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷವೋ, ಇಲ್ಲ ಹರಾಜುದಾರರ ವೈಫಲ್ಯವೋ ಇನ್ನು ಹೋಟೆಲ್ ಆರಂಭವಾಗಿಲ್ಲ. ಪ್ರಯಾಣಿಕರು ಹೋಟೆಲ್ಗಾಗಿ ನಿಲ್ದಾಣದ ಹೊರಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಬೋರ್ಡ್ ರಚನೆಯಾಗಿಲ್ಲ: ಅರುಣಕುಮಾರ್ ಅಧ್ಯಕ್ಷರಾಗಿದ್ದಾಗ ಅವರ ಇಚ್ಛಾಶಕ್ತಿ ಪ್ರತಿಫಲವಾಗಿ ಹೈಟೆಕ್ ನಿಲ್ಧಾಣ ರೂಪುಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಅವರ ನಿರ್ಗಮನದ ಬೆನ್ನಲ್ಲೆ ನಿಲ್ದಾಣದ ನಿರ್ವಹಣೆ ಇಲ್ಲದಂತಾಗಿದ್ದು ಇಂತಹ ನಿಲ್ದಾಣ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆ ಕೂಡ ಜನತೆಯದ್ದಾಗಿದೆ. ನಿರ್ವಹಣೆ ಇಲ್ಲದಿರುವುದಕ್ಕೆ ನೂತನವಾಗಿ ಆಯ್ಕೆಗೊಂಡ ಪಟ್ಟಣ ಪಂಚಾಯ್ತಿ ಸದಸ್ಯರ ಬೋರ್ಡ್ ಇನ್ನು ರಚನೆಯಾಗದಿರುವುದೆ ಕಾರಣ ಎಂಬ ಮಾತು ಕೇಳಿ ಬರುತ್ತಿದ್ದು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಆಕ್ರೋಶ ಕೂಡ ಪ್ರಯಾಣಿಕರಿಂದ ವ್ಯಕ್ತವಾಗುತ್ತಿದೆ.
ಆರೋಪ: ಕೆಲವು ತಿಂಗಳ ಹಿಂದೆ ನಿರ್ಮಾಣಗೊಂಡ ನಿಲ್ದಾಣದ ಅವ್ಯವಸ್ಥೆ ಗೂಡಾಗಿ ಪರಿಣಮಿಸುತ್ತಿದೆ. ಅಲ್ಲದೆ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪಾರ್ಕ್ ಪಟ್ಟಣದ ಅಂದ ಹೆಚ್ಚಿಸುವುದಕ್ಕಿಂತ ಅವ್ಯವಸ್ಥೆಯಿಂದಾಗಿ ಹಾಳುಗೆಡವಿದೆ.
ಪಾರ್ಕ್ ಲೈಟ್ ಉರಿಯುತ್ತಿಲ್ಲ. ಜಾನುವಾರುಗಳ ಮೇವಿನ ತಾಣವಾಗಿದೆ. ಸ್ವಚ್ಛಂದ ಹುಲ್ಲುಹಾಸು ಬದಲಿಗೆ ಗಿಡಗಂಟಿಗಳು ಎಲ್ಲೆಂದರಲ್ಲಿ ಮೇಳೈಸಿ ಇಲ್ಲಿ ಪಟ್ಟಣ ಪಂಚಾಯ್ತಿ ಇದೆಯೋ ಇಲ್ಲವೋ ಎಂಬ ಅನುಮಾನ ಹುಟ್ಟಿಸಿದೆ ಎಂದು ತಾಲೂಕು ಬಿಜೆಪಿ ಕಾರ್ಯದರ್ಶಿ ಮನೋಹರ್ ಆರೋಪಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣ ಹೈಟೆಕ್ ಟಚ್ನೊಂದಿಗೆ ಇಡೀ ಜಿಲ್ಲೆಯ ಗಮನ ಸೆಳೆದಿತ್ತು. ಆದರೆ ನಿರ್ವಹಣೆ ಬರದಿಂದಾಗಿ ಆರಂಭದಲ್ಲಿ ಬಂದ ಮೆಚ್ಚುಗೆಯ ಮಾತುಗಳು ಟೀಕೆಯಾಗಿ ಪರಿವರ್ತನೆಯಾಗುವುದರೊಳಗೆ ಇಲ್ಲಿನ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಯಾಣಿಕರ ಆರೋಪಗಳೇನು?
ಆರಂಭದಲ್ಲಿ 24 ಗಂಟೆಕಾಲ ದೊರೆಯುತ್ತಿದ್ದ ನೀರು ಬರುತ್ತಿಲ್ಲ. ಶ್ವಾನಗಳು, ಜಾನುವಾರುಗಳಿಗೂ ತಡೆಯಿಲ್ಲ
ಶೌಚಾಲಯದ ಅಸಮರ್ಪಕ ವ್ಯವಸ್ಥೆಯಿಂದಾಗಿ ದಿನಕ್ಕೊಂದು ಅವ್ಯವಸ್ಥೆ ಕಂಡು ಬರುತ್ತಿದೆ
ಪ್ರಯಾಣಿಕರು ಹೋಟೆಲ್ಗಾಗಿ ನಿಲ್ದಾಣದ ಹೊರಗೆ ಹೋಗಬೇಕಾದ ಅನಿವಾರ್ಯತೆ
ನಿರ್ವಹಣೆ ಇಲ್ಲದಿರುವುದಕ್ಕೆ ನೂತನವಾಗಿ ಆಯ್ಕೆಗೊಂಡ ಪಪಂ ಸದಸ್ಯರ ಬೋರ್ಡ್ ರಚನೆಯಾಗದಿರುವುದೆ ಕಾರಣ
-ರವಿ ಬಿದನೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

