ಶಿವಮೊಗ್ಗ

ಮೋದಿ ಪ್ರಧಾನಿ ಅಭ್ಯರ್ಥಿ: ಬಿಜೆಪಿ ಹುಮ್ಮಸ್ಸು

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಸೆ.14
ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಿಸಿರುವುದು ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಎಂದು ಜಿಲ್ಲಾಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು, ದೇಶದ 75ರಷ್ಟು ಕೈಗಾರಿಕೋದ್ಯಮಿಗಳು, ಯುವಕರು ಸೇರಿದಂತೆ ಬಹುತೇಕ ಮಂದಿ ಮೋದಿ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ನರೇಂದ್ರ ಮೋದಿ ಆಯ್ಕೆ ಸಂಚಲನ ಸೃಷ್ಟಿಸಿರುವುದು ಕಾಂಗ್ರೆಸ್ ದುರಾಡಳಿತದ ಕಾರಣದಿಂದ ಎಂದರು.
ಕಾಂಗ್ರೆಸ್‌ಗೆ ಸವಾಲು: ಮೋದಿ ನೋಡಿ ಕಾಂಗ್ರೆಸ್ ಜಂಘಾಬಲವೇ ಉಡುಗಿ ಹೋಗುತ್ತಿದೆ. ಕಾಂಗ್ರೆಸ್‌ಗೆ  ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದ ಅವರು, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದು ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಚಿದಂಬರಂ ವಿಫಲರಾಗಿದ್ದಾರೆ. ದೇವಾಲಯದಲ್ಲಿರುವ ಬಂಗಾರವನ್ನು ವಿದೇಶದಲ್ಲಿ ಒತ್ತೆ ಇಟ್ಟು, ಹಣಕಾಸು ಸ್ಥಿತಿ ಸುಧಾರಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಪಕ್ಷದ ಭವಿಷ್ಯದ ದೃಷ್ಟಿಯಿಂದ ಹಿಂದಿನ ಎಲ್ಲಾ ಅನಾಹುತಗಳಿಂದ ಹೊರಬಂದು ಚಟುವಟಿಕೆಗಳನ್ನು ಚುರುಕುಗೊಳಿಸುವತ್ತ ಕಾರ್ಯಕರ್ತರು ಹಾಗೂ ಪ್ರಮುಖರು ಮುಂದಾಗಬೇಕು.
ಮುಂದಿನ ಲೋಕಸಭೆ ಚುನಾವಣೆ ಬಿಜೆಪಿಗೆ ಬಹಳ ಪ್ರಮುಖವಾಗಿದೆ ಎಂದರು.
ಹೊಸ ಹುಮ್ಮಸ್ಸು: ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವುದು ಎಲ್ಲರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದೆ. ಆದರೆ, ಇದೇನೂ ಹೊಸದಲ್ಲ. 90 ರ ದಶಕದಲ್ಲಿ ವಾಜಪೇಯಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದೆವು. ಆಗ ನಮಗೆ ಆಡಳಿತ ನಡೆಸುವ ಅವಕಾಶ ಸಿಕ್ಕಿತ್ತು. 2004 ರಲ್ಲಿ ಲಾಲ್‌ಕೃಷ್ಣ ಅಡ್ವಾಣಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದೆವು. ಆದರೆ, ಪರಿಸ್ಥಿತಿ ಬೇರೆಯದೇ ಆಯಿತು. ಇದೀಗ ನಾವು 280ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆಗೆ ನಮ್ಮ ಸಂಪರ್ಕವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಸಂಪೂರ್ಣ ವಿಫಲ: ಪ್ರಧಾನಿ ಮನಮೋಹನ್ ಸಿಂಗ್ ಸಮಸ್ಯೆ ಬಂದಾಗಲೆಲ್ಲ ಮೌನಕ್ಕೆ ಶರಣಾಗುತ್ತಾರೆ. ಕಳೆದ 10 ವರ್ಷಗಳಿಂದ ಯುಪಿಎ ಆಡಳಿತ ನೋಡಿರುವ ಜನತೆ ಸಾಕಷ್ಟು ನೊಂದಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞರಾಗಿರುವ ಮನಮೋಹನ್ ಸಿಂಗ್ ಪರಿಣಿತ ಪ್ರಧಾನಿ ಆಗಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಪ್ರಧಾನಿಯಿಂದ ಹಿಡಿದು ಹಿಂದೆ ವಿತ್ತ ಸಚಿವರಾಗಿದ್ದ ಪ್ರಣಬ್ ಮುಖರ್ಜಿ, ಹಾಲಿ ಹಣಕಾಸು ಸಚಿವ ಚಿದಂಬರಂ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಎಲ್ಲರೂ ಕಾಂಗ್ರೆಸ್ ಕಾ ಹಾಥ್ ಆಮ್ ಆದ್ಮಿ ಕೆ ಸಾಥ್ ಎಂದು ಜನರ ದಾರಿ ತಪ್ಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಸೂಡಾ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ, ಶೋಭಾ ಅರಸ್, ಯು.ಎಚ್. ರಾಮಪ್ಪ, ಲಕ್ಷ್ಮಣ್, ರಾಮಚಂದ್ರ ಮತ್ತಿತರರು ಇದ್ದರು.
ವಿವಿಧ ತಾಲೂಕು ಪದಾಧಿಕಾರಿಗಳ ಆಯ್ಕೆ
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಸಾಗರದ ಜಗದೀಶ್ ಒಡೆಯರ್ ಅವರನ್ನು ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ನೇಮಕ ಮಾಡಿದ್ದಾರೆ.
ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ತೀರ್ಥಹಳ್ಳಿ- ಭಾರತಿ, ವಿನೋದ ಎಸ್ ಶೆಟ್ಟಿ, ಪರ್ವಿನ್‌ಗೌಸ್, ಕೊಡಸಗೊಳ್ಳಿ ಶಾಮಣ್ಣ, ವನಿತಾ, ವೀಣಾ ಹೆಗಡೆ, ಉಮೇಶ್ ಕಂಚುಗಾರ್, ರಾಘವೇಂದ್ರ, ರಮೇಶ್ ಯಳಗಲ್, ಶೇಖರಪ್ಪ , ಗೀತಾ, ರೂಪಾ, ಶಾಂತಾ, ಕೆ. ಪ್ರಕಾಶ್, ಪ್ರವೀಣ, ಕೆ.ಜೆ. ಜಾನ್, ಕೃಷ್ಣಮೂರ್ತಿ ಭಂಡಾರಿ, ಚಂದ್ರಕಾಂತ ಜಿಂಗಾಡೆ, ಆಶಾ, ಶಕುಂತಲಮ್ಮ, ಕೃಷ್ಣಮೂರ್ತಿ, ಈಶ್ವರ, ಯೋಗೀಶ್, ಎಂ.ಎಸ್. ಸುರೇಶಪ್ಪ, ಬಿ.ಜಿ. ರಾಮಲಿಂಗಯ್ಯ, ಧನಲಕ್ಷ್ಮಿ ಮತ್ತು ಶಕುಂತಲಮ್ಮ.
ಜಿಲ್ಲಾ ಸಮಿತಿ ಸದಸ್ಯರು- ಶಿವಮೊಗ್ಗ ಗ್ರಾಮಾಂತರ- ಮಹಾದೇವಿ, ದೇವಿಬಾಯಿ, ದುಮ್ಮಳ್ಳಿ ರುದ್ರೇಶ್, ರಾಜೀವ್ ಮತ್ತು ವಿರೂಪಾಕ್ಷ. ಶಿವಮೊಗ್ಗ ನಗರ- ಟಿ.ಜಿ. ಶ್ರೀಧರರಾವ್, ಡಿ.ಎಂ. ರಂಗನಾಥ್, ಟಿ.ಎಂ. ಸತ್ಯನಾರಾಯಣ ರಾವ್, ಸೀತಾಲಕ್ಷ್ಮಿ, ರತ್ನಮ್ಮ, ಮೀನಾಕ್ಷಿ, ಣಭಾಸ್ಕರ್‌ಭಟ್, ಎನ್.ಡಿ. ಸತೀಶ್, ಎ.ಪಿ. ತೇಜಸ್ವಿ, ಕೆ.ಸಿ.ನಾಗರಾಜ್ ಮತ್ತು ಎಸ್.ವಿ. ರಾಘವೇಂದ್ರರಾವ್ ಅವರನ್ನು ನೇಮಕ ಮಾಡಲಾಗಿದೆ ಎಂದು  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.