'ಕೃಷಿ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಿ'
ಸಾಗರ: ಜನಸಮೂಹಕ್ಕೆ ಘಾಸಿಯಾಗುವ ವರದಿ ಅನುಷ್ಠಾನಕ್ಕೆ ಬರುವ ಸಂದರ್ಭದಲ್ಲಿ ಜನ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಅದನ್ನು ವಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟರು.
ಇಲ್ಲಿನ ಶೃಂಗೇರಿ ಶಂಕರಮಠದ ಆವರಣದಲ್ಲಿ ಗುರುವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರ ಸಂಕಷ್ಟಗಳ ಬಗ್ಗೆ ಚುನಾವಣಾ ಅಭ್ಯರ್ಥಿಗಳಿಗೆ ಪ್ರಶ್ನಾವಳಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷಿ ಪ್ರಥಮ ವಿಷಯವಾಗಲಿ: ರಾಜ್ಯದ 140 ತಾಲ್ಲೂಕುಗಳಲ್ಲಿ ಅಡಕೆ ಬೆಳೆಗಾರರಿದ್ದಾರೆ. 100ಕ್ಕೂ ಹೆಚ್ಚು ಶಾಸಕರು, 10ಕ್ಕೂ ಹೆಚ್ಚು ಸಂಸದರು ಬೆಳೆಗಾರರನ್ನು ಪ್ರತಿನಿಧಿಸುತ್ತಿದ್ದಾರೆ. ಈ ಎಲ್ಲ ಪ್ರತಿನಿಧಿಗಳಿಗೆ ಅಡಕೆ ಬೆಳೆಗಾರರ ಸಮಸ್ಯೆ ಪ್ರಥಮ ವಿಷಯವಾಗಬೇಕೆ ವಿನಹ ರಾಜಕೀಯ ಪ್ರಥಮ ವಿಷಯವಾಗಬಾರದು. ಅಡಿಕೆ, ಭತ್ತ ಸೇರಿದಂತೆ ವಿವಿಧ ಕೃಷಿ ಹುಟ್ಟುವಳಿಗಳನ್ನು ಪ್ರತಿನಿಧಿಸುವ ಕೆಲಸ ಜನಪ್ರತಿನಿಧಿಗಳು ಮಾಡಬೇಕಾಗಿದೆ. ಆಗ ಪ್ರತಿಯೊಂದು ಚುನಾವಣೆಗೂ ಹೊಸ ಅರ್ಥ ಬರುತ್ತದೆ ಎಂದರು.
ಪ್ರಸ್ತುತ ಕಸ್ತೂರಿ ರಂಗನ್ ವರದಿ ಬಗ್ಗೆ ಪರ-ವಿರೋಧದ ಹೇಳಿಕೆಗಳು ಬರುತ್ತಿದೆ. ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಪಟ್ಟಂತೆ ಹೊರಬಂದಿದ್ದರೂ, ವರದಿಯಲ್ಲಿ ಸಾಗರ ಪ್ರಾಂತ್ಯದ ಶೇ. 71 ಭಾಗ ಅರಣ್ಯವೆಂದೂ, ಶೇ 29 ಭಾಗ ಜನವಸತಿ ಪ್ರದೇಶವೆಂದೂ ಗುರುತಿಸಲಾಗಿದೆ. ಅನೇಕ ಜನರಿಗೆ ವರದಿಯಲ್ಲಿ ಹುದುಗಿರುವ ಪ್ರಮುಖಾಂಶಗಳು ಗೊತ್ತಿರುವುದಿಲ್ಲ. ಈ ವರದಿಯನ್ನು ಕೇರಳದಂತಹ ರಾಜ್ಯದಲ್ಲಿ ಪ್ರಬಲವಾಗಿ ವಿರೋಧಿಸಿದ್ದು, ನಮ್ಮ ರಾಜ್ಯದಲ್ಲಿ ಮಾತ್ರ ಇನ್ನು ವರದಿ ಪರಿಶೀಲನೆ ನಡೆಯುತ್ತಿದೆ. ಇಂತಹ ವರದಿಗಳು ಮಾನವನ ಅಸ್ತಿತ್ವವನ್ನೆ ಪ್ರಶ್ನಿಸುವಂತಹದ್ದು ಎಂದರು.
ಹೋರಾಡಲು ಸಿದ್ಧರಾಗಬೇಕು: ಪ್ರಶ್ನಾವಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ರೈತಮುಖಂಡ ಕೆ.ಟಿ.ಗಂಗಾಧರ್, ನಮ್ಮ ಕೃಷಿ ನಮ್ಮ ಸಂಸ್ಕೃತಿಯಾಗಿದೆ. ಅಡಕೆಯಂತಹ ಸಾಂಪ್ರಾದಾಯಿಕ ಬೆಳೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಸಂದರ್ಭ ಬಂದಾಗ ಕಾನೂನು ತಿದ್ದುಪಡಿ ತರಬೇಕು. ತಿದ್ದುಪಡಿಗೆ ಮೀನಮೇಷ ಎಣಿಸಿದಾಗ ಅದನ್ನು ಕಾರ್ಯಗತಗೊಳಿಸಲು ನಾವು ಹೋರಾಟದ ಹಾದಿಯನ್ನು ತುಳಿಯಲು ಹಿಂದೇಟು ಹಾಕಬಾರದು ಎಂದರು.
ಮಾಜಿ ಶಾಸಕ ಎಲ್.ಟಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ವಕ್ತಾರ ಕೆ.ದಿವಾಕರ್, ಉತ್ತರ ಕನ್ನಡದ ಜೆಡಿ(ಎಸ್) ಮುಖಂಡ ಶಶಿಭೂಷಣ ಹೆಗಡೆ, ಬಿಜೆಪಿ ಪ್ರಮುಖ ಕೆ.ಎನ್.ಶ್ರೀಧರ್, ಆಮ್ ಆದ್ಮಿ ಪಕ್ಷದ ಅಮೃತರಾಸ್, ಪಾಂಡುರಂಗ ಹೆಗಡೆ ಹಾಜರಿದ್ದರು. ಅಶ್ವಿನಿಕುಮಾರ್ ಸ್ವಾಗತಿಸಿದರು. ಕೆ.ಎನ್.ವೆಂಕಟಗಿರಿ ವಂದಿಸಿದರು. ಶೈಲೇಂದ್ರ ಬಂದಗದ್ದೆ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

