ಶಿವಮೊಗ್ಗ

ಆಧುನಿಕ ಆಲೆಮನೆ!

Published On :

 ಬಿ.ವಿ. ಶೇಷಗಿರಿ
ಶಿರಾಳಕೊಪ್ಪ: ಕಬ್ಬಿನ ಹಾಲು ಎಂದಾಕ್ಷಣ ನೆನಪಿಗೆ ಬರುವುದು ಮಲೆನಾಡಿನ ಆಲೆಮನೆಗಳು. ಆದರೆ, ಇಂದು ಆಧುನಿಕತೆಯ ಭರಾಟೆಯಿಂದ ಆಲೆಮನೆಗಳು ಕಾಣೆ ಆಗುತ್ತಿರುವುದರ ಜತೆಗೆ ಕಬ್ಬು ಬೆಳೆಯುವುದು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಹಲವಾರು ರೈತರು ಕಬ್ಬನ್ನು ಬೆಳೆಯುತ್ತಿದ್ದಾರೆ. ಅಲ್ಲಲ್ಲಿ ಆಲೆಮನೆಗಳು ಕಬ್ಬನ್ನು ಅರಿಯುತ್ತಾ, ಉತ್ತಮವಾದ ಬೆಲ್ಲ, ತಯಾರಿಸುತ್ತಿದ್ದಾರೆ. ಜತೆಗೆ ಜೋನಿ ಬೆಲ್ಲ, ಅಂಟುಕೋಲು ಬೆಲ್ಲ ತಯಾರಿಸಲಾಗುತ್ತಿದೆ. ಈ ಬೆಲ್ಲಕ್ಕೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆಯೂ ಇದೆ.
ಆಲೆಮನೆಗಳು ಕಡಿಮೆಯಾಗಲು ಕಾರಣ: ಈ ಮೊದಲು ಗ್ರಾಮಾಂತರ ಪ್ರದೇಶಗಳಲ್ಲಿ ಆಲೆಮನೆಗಳು ಹಗಲು- ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದವು. ಕಬ್ಬನ್ನು ಅರಿಯುವ ಯಂತ್ರಕ್ಕೆ ಎತ್ತುಗಳನ್ನು ಕಟ್ಟಿ ಕಾರ್ಯನಿರ್ವಹಿಸುತ್ತಿದ್ದರು. ಹಾಗೆಯೇ ಮನೆಮಂದಿ ಆಳುಗಳೊಂದಿಗೆ ಜತೆಯಾಗಿ ಹಗಲು- ರಾತ್ರಿ ಕಾರ್ಯನಿರ್ವಹಿಸುತ್ತಿದ್ದರು.
ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಅಷ್ಟಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಕಡಿಮೆ ಆಗುತ್ತಿದೆ. ಜತೆಗೆ ಕೂಲಿ ಕೆಲಸ ಮಾಡುವ ಜನರ ಕೊರತೆ ಬಲು ದೊಡ್ಡ ಸಮಸ್ಯೆ ಆಗಿ ಪರಿಣಮಿಸಿದೆ.
ಕ್ರಷರ್‌ನಂತಹ ಯಂತ್ರಗಳು ಬಂದ ನಂತರ ಕಬ್ಬನ್ನು ನುರಿಯುವ ಕಾರ್ಯ ಜೋರಾಗಿ ನಡೆಯಲು ಪ್ರಾರಂಭವಾದಂತೆ ಗ್ರಾಮಗಳಲ್ಲಿ ಎತ್ತಿನಿಂದ ಕಬ್ಬನ್ನು ಅರಿಯುವ ಕಾರ್ಯಕ್ಕೆ ಇತಿಶ್ರೀ ಹೇಳಿರುವ ರೈತರು ಕ್ರಷರ್ ಕಡೆಗೆ ಒಲವು ತೋರಿದ್ದರು. ಆದರೆ, ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಕಾರಣದಿಂದ ಸಮಯಕ್ಕೆ ಸರಿಯಾಗಿ ಕಬ್ಬನ್ನು ನುರಿಯಲು ಆಗದ ಕಾರಣ ಗ್ರಾಮಸ್ಥರು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕಾಯಿತು.
ಟ್ರ್ಯಾಕ್ಟರ್ ಬಳಕೆ: ರೈತರು ಇಂದು ಕಬ್ಬನ್ನು ಅರಿಯಲು ಎತ್ತು, ಯಂತ್ರದ ಬದಲು ಟ್ರ್ಯಾಕ್ಟರ್ ಬಳಕೆ ಮಾಡಿಕೊಳ್ಳುವತ್ತ ತಮ್ಮ ಚಿತ್ತ ಬದಲಿಸಿದ್ದಾರೆ. ಖರ್ಚನ್ನು ಕಡಿಮೆ ಮಾಡಿಕೊಳ್ಳುತ್ತಾ ಕೆಲಸದ ಒತ್ತಡ ಕಡಿಮೆ ಮಾಡಿಕೊಂಡಿರುವ ಉದಾಹರಣೆ ಕಾಣುತ್ತಿದೆ.
ಕಬ್ಬನ್ನು ಅರಿಯುವ ಯಂತ್ರಕ್ಕೆ ಈಗ ಎತ್ತಿನ ಬದಲು ಟ್ರ್ಯಾಕ್ಟರ್‌ಅನ್ನು ಹಗ್ಗದಿಂದ ಗಾಣಕ್ಕೆ ಕಟ್ಟಿ ಟ್ರ್ಯಾಕ್ಟರ್ ಮೂಲಕ ಸ್ಟೇರಿಂಗ್‌ಅನ್ನು ಒಂದು ಹಗ್ಗದಿಂದ ಕಟ್ಟಿ, ಚಾಲಕ ಕೆಳಗೆ ಇಳಿಯುತ್ತಾನೆ. ಯಾವುದೇ ವ್ಯಕ್ತಿಯ ಸಹಾಯವಿಲ್ಲದೆ ಒಬ್ಬರೆ ಯಂತ್ರಕ್ಕೆ ಕಬ್ಬನ್ನು ಕೊಡುತ್ತಾ ಕಾರ್ಯ ನಿರ್ವಹಿಸುತ್ತಾನೆ. ಇದರಿಂದ ಎತ್ತುಗಳ ಬಳಕೆ ಇಲ್ಲ.
 ಎತ್ತಿನ ಜತೆಗೆ ಒಬ್ಬ ಮನುಷ್ಯ ಬೇಕಿತ್ತು, ಈಗ ಆ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಟ್ರ್ಯಾಕ್ಟರ್‌ನಿಂದ ಕೆಲಸವು ಯಾವುದೇ ಶ್ರಮ, ತೊಂದರೆ ಇಲ್ಲದೆ ನಡೆಯುವಂತಾಗಿ ರೈತರ ಮುಖದಲ್ಲಿ ಗೆಲವು ಕಾಣುತ್ತಿದೆ.
ಇಂತಹ ಒಂದು ಉತ್ತಮ ಕಾರ್ಯ ನಿರ್ವಹಣೆಯನ್ನು ಶಿರಾಳಕೊಪ್ಪ ಹತ್ತಿರದ ಮಾಳಗೊಂಡನಕೊಪ್ಪ ಗ್ರಾಮದ ರೈತರು ಅನುಸರಿಸುತ್ತಿದ್ದಾರೆ. ಗ್ರಾಮದ ಶಿರಳ್ಳಿ ಏಕಾಂತಪ್ಪ ಹಾಗೂ ಮಕ್ಕಳು ಇಂತಹ ಕಾರ್ಯ ನಿರ್ವಹಿಸುತ್ತಿದ್ದು, ಈ ಭಾಗದ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಜನರಿಗೆ ಕಬ್ಬಿನ ಹಾಲಿನ ಸವಿ ಉಣಬಡಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.