ಪತ್ರಕರ್ತರ ಸಂಘದ ಕ್ರೀಡಾಕೂಟ
ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರು ಹಾಗೂ ಅವರ ಕುಟುಂಬದವರಿಗಾಗಿ ವಾರ್ಷಿಕ ಕ್ರೀಡಾಕೂಟ ಏರ್ಪಡಿಸಿತ್ತು. ಈ ಸಂದರ್ಭ ಪತ್ರಕರ್ತರೊಂದಿಗೆ ಅವರ ಕುಟುಂಬದವರೂ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಪತ್ರಕರ್ತರಿಗೆ ಓಟ, ನಡಿಗೆ, ಗುಂಡು ಎಸೆತ, ಮೂರು ಕಾಲಿನ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದರೆ, ಪತ್ರಕರ್ತರ ಕುಟುಂಬದ ಮಹಿಳೆಯರಿಗಾಗಿ ಮಡಿಕೆ ಒಡೆಯುವುದು, ಆಶುಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆ ನಡೆದಿದ್ದವು. ಅದೇ ರೀತಿ ಪತ್ರಕರ್ತರ ಮಕ್ಕಳಿಗಾಗಿ ಕಪ್ಪೆ ಓಟ, ಬಾಲ್ ಎಸೆತ ಸೇರಿದಂತೆ ಬಗೆಬಗೆಯ ಆಟೋಟಗಳು ನಡೆದವು. ಮಧ್ಯಾಹ್ನದ ತರುವಾಯ ಗುಂಪು ಸ್ಪರ್ಧೆಗಳು ನಡೆದವು. ಪ್ರಮುಖವಾಗಿ ಕಬಡ್ಡಿ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಖುಷಿಯಿಂದ ಸ್ಪರ್ಧಾಳುಗಳು ತೊಡಗಿಸಿಕೊಂಡಿದ್ದರು. ಮುಂಜಾನೆ ಸಂಸದ ಬಿ.ವೈ. ರಾಘವೇಂದ್ರ ಶಾಟ್ಪುಟ್ ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಹಾಜರಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಎನ್.ಮಂಜುನಾಥ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್, ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ, ಪದ್ಮನಾಭ ಮತ್ತಿತರರು ಇದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೂಚನೆ
ಶಿವಮೊಗ್ಗ: ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ನಿರ್ದೇಶಕರು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಶೇಷವಾಗಿ ವಿಜ್ಞಾನ, ಗಣಿತ ಮತ್ತು ಆಂಗ್ಲಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪದವಿ ಬಿಎಸ್ಸಿ, (ಪಿಸಿಎಂ, ಸಿಪಿಜಡ್) ಹಾಗೂ ಬಿಎ (ಆಂಗ್ಲ) ವ್ಯಾಸಂಗಕ್ಕೆ ರೆಗ್ಯೂಲರ್ ಆಗಿ ಹಾಗೂ ವೇತನ ಸಹಿತವಾಗಿ ನಿಯೋಜಿಸಲು ಸುತ್ತೋಲೆ ಹೊರಡಿಸಿರುತ್ತಾರೆ. ಆಸಕ್ತ ಶಿಕ್ಷಕರು ಫೆ.15 ರೊಳಗಾಗಿ ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಿ, ಸ್ವೀಕೃತಿ ಪಡೆದುಕೊಳ್ಳುವಂತೆ ಹಾಗೂ ವಿವರಗಳಿಗಾಗಿ ತಮ್ಮ ಸಮೀಪದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜಪ್ಪ ಬಿ.ಸಿ. ಅವರು ತಿಳಿಸಿದ್ದಾರೆ.
ಇಂದು ರಥೋತ್ಸವ
ಸಾಗರ: ಯಡೇಹಳ್ಳಿಯ ವರಸಿದ್ಧಿ ವಿನಾಯಕ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಫೆ. 3ರಂದು ಮಹಾ ಬ್ರಹ್ಮ ರಥೋತ್ಸವ ನಡೆಯಲಿದೆ. ಈ ನಿಮಿತ್ತ ಬೆಳಗ್ಗೆ ದೇವಾಲಯದ ಆವರಣದಲ್ಲಿ ಸಾಮೂಹಿಕ ಗಣಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಬ್ರಹ್ಮ ರಥೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ರಿಂದ ರಥದ ರಾಜಬೀದಿ ಉತ್ಸವ, ಸಂಜೆ 7 ಗಂಟೆಗೆ ವಿವಿಧ ಮನರಂಜನಾ ಕಾರ್ಯಕ್ರಮ ಮತ್ತು ಮಹಿಳೆಯರು ಹಾಗೂ ಬಾಲಕಿಯರಿಗಾಗಿ ನೃತ್ಯ ಸ್ಪರ್ಧೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

