ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗ ಆರಂಭಿಸಿ
ಕ.ಪ್ರ.ವಾರ್ತೆ ಭದ್ರಾವತಿ ಫೆ. 4
ಸ್ವಯಂ ಉದ್ಯೋಗ ನಿರುದ್ಯೋಗ ಸಮಸ್ಯೆಯನ್ನು ಸಾಕಷ್ಟು ನಿವಾರಿಸಿದೆ ಎಂದು ಶಾಸಕ ಎಂ.ಜೆ.ಅಪ್ಪಾಜಿ ನುಡಿದರು.
ಮಂಗಳವಾರ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯತ್, ಲಯನ್ಸ್ ಕ್ಲಬ್ ಹಾಗೂ ನೆಮ್ಮದಿ ಪ್ರತಿಷ್ಠಾನಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದು ಬುದ್ಧಿವಂತರ ಕೊರತೆಯಿಲ್ಲವಾದರೂ ನಿರುದ್ಯೋಗ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ ಎಂದರು.
ಸ್ವಯಂ ಉದ್ಯೋಗ: ಜಿಲ್ಲಾ ಕೈಗಾರಿಕಾ ಕೇಂದ್ರವು ಸಣ್ಣ ಕೈಗಾರಿಕೆ ಮತ್ತು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಹತ್ತು ಲಕ್ಷ ರು.ಗಳ ವರೆಗೆ ಸಾಲಸೌಲಭ್ಯವನ್ನು ನೀಡಲು ಮುಂದಾಗಿರುವುದು ಯುವಜನತೆಗೆ ಆಶಾಕಿರಣವಾಗಿದೆ. ವಿದ್ಯಾವಂತ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಮುಂದಾಗಬೇಕು.
ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ವಿದ್ಯಾರ್ಥಿಗಳಿಗೆ ನಡೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ. ಕಲಿತ ವಿದ್ಯೆಗೂ ಮಾಡುತ್ತಿರುವ ಕಸುಬಿಗೂ ಸಂಬಂಧವಿಲ್ಲದ ಅನೇಕ ಉದ್ಯಮಿಗಳು ಯಶಸ್ಸನ್ನು ಕಂಡಿದ್ದಾರೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಬದ್ಧತೆ ಇದ್ದರೆ ಬದುಕನ್ನು ಸುಂದರವಾಗಿಸಿಕೊಳ್ಳಬಹುದೆಂದು ಅಪ್ಪಾಜಿ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಭದ್ರಾವತಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಶೈಲೇಂದ್ರ ಮಾತನಾಡಿ, ಭಾರತದ ಐಟಿಗೆ ಸ್ಫುಟ ನೀಡುವಂತಹ ಕಾರ್ಯ ಆಗಬೇಕಾಗಿದೆ. ಯುವಜನರು ಸಮರೋಪಾದಿಯಲ್ಲಿ ತಮ್ಮ ಪ್ರತಿಭೆಗಳನ್ನು ಹೆಚ್ಚಿಸಿಕೊಳ್ಳುವತ್ತ ಹೆಚ್ಚು ಗಮನವೀಯಬೇಕಾಗಿದೆ. ಆಗ ಮಾತ್ರ ರಾಷ್ಟ್ರದ ಜಿಡಿಪಿ ಸುಧಾರಿಸಬಲ್ಲದು ಎಂದರು.
ಮಾರ್ಗದರ್ಶನ ಅಗತ್ಯ: ಜಿ.ಪಂ. ಸದಸ್ಯೆ ಜಿ.ಸುಜಾತ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟವೆಂದರಲ್ಲದೆ ನೆಮ್ಮದಿ ಪ್ರತಿಷ್ಠಾನ ನೀಡುವ ಮಾರ್ಗದರ್ಶನ ಪಡೆದು ಶಿಬಿರಾರ್ಥಿಗಳು ಉದ್ಯಮಶೀಲತೆ ಹೆಚ್ಚಿಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಜೀವನ ನಿರ್ವಹಣೆಗೆ ಉದ್ಯೋಗ ಅನಿವಾರ್ಯವೆಂದು ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ಎಂ.ಶ್ರೀನಿವಾಸ್ ತಿಳಿಸಿದರು.
ವಾಸಂತಿ ಪ್ರಾರ್ಥಿಸಿದರು. ಜಿ.ಪಂ. ಖಾದಿ ಗ್ರಾಮೋದ್ಯೋಗ ಉಪನಿರ್ದೇಶಕ ಎಚ್.ಕೆ.ರುದ್ರಪ್ಪ ಸ್ವಾಗತಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಕೈಗಾರಿಕಾ ವಿಸ್ತರಣಾಧಿಕಾರಿ ರವೀಂದ್ರನಾಥ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

