ನೋಟ್ಬುಕ್ ವಿತರಣೆ
ಸೊರಬ: ಸಮಾಜದಲ್ಲಿ ಬದುಕುವ ಜೀವಿತ ಅವಧಿಯ ಅಲ್ಪಸಮಯವನ್ನಾದರೂ ಸಾಮಾಜಿಕ ಸೇವೆಗೆ ಮೀಸಲಿಡಬೇಕು ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಮೇಶ್ ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಚಂದ್ರಗುತ್ತಿಯ ಕರವೇ ಘಟಕವು ಶಿವರಾಮೇಗೌಡ ಅವರ ಹುಟ್ಟುಹಬ್ಬ ಪ್ರಯುಕ್ತ ಏರ್ಪಡಿಸಿದ್ದ ಉಚಿತ ನೋಟ್ಬುಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕರವೇ ಘಟಕದ ಕೆ.ಲಿಂಗರಾಜಗೌಡ 7ನೇ ತರಗತಿಯಲ್ಲಿ ಅಧಿಕ ಅಂಕ ಗಳಿಸುವ ಬಾಲಕಿ, ಬಾಲಕಿಗೆ ಮುಂದಿನ ವ್ಯಾಸಂಗಕ್ಕೆ ಅಗತ್ಯವಿರುವ ಸಹಕಾರ ನೀಡುವುದಾಗಿ ಘೋಷಿಸಿದರು.
ಅಧ್ಯಕ್ಷ ವಿಜಯಗೌಳಿ, ಚಂದ್ರಗುತ್ತಿ ಘಟಕದ ಅಧ್ಯಕ್ಷ ಪ್ರಸನ್ನ ಶೇಟ್, ಕೆ.ಲಿಂಗರಾಜಗೌಡ, ದಿನೇಶ್, ಕಿರಣ, ಅಣ್ಣಪ್ಪ, ಗಣೇಶ ಮರ್ಡಿ, ಸತ್ಯ, ಪ್ರಶಾಂತ ಜೆ.ಎಸ್.ನಾಯ್ಕ್, ಪ್ರಕಾಶ ಮಿರ್ಜಿ, ಎಲ್. ವೆಂಕಟೇಶ್ ಶಾಲಾ ಮುಖ್ಯೋಪಾಧ್ಯಾಯ ಶಿವರಾಮ ಜೋಯ್ಸ್, ಮೆಸ್ಕಾಂ ಇಲಾಖೆಯ ಮುಕ್ತರ್ ಅಹ್ಮದ್ ಇದ್ದರು.
ಇಂದಿನಿಂದ ಯುವಜನ ಮೇಳ
ಹೊಸನಗರ: ತಾಲೂಕುಮಟ್ಟದ ಯುವಜನ ಮೇಳ ಕಾರಣಗಿರಿಯಲ್ಲಿ ಫೆ.8, 9ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಯುವಜನ ಮೇಳ ಸ್ವಾಗತ ಸಮಿತಿ ಅಧ್ಯಕ್ಷ ಕಾರಗಡಿ ಜಯರಾವ್ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವ ಒಕ್ಕೂಟ, ಗ್ರಾಮ ಪಂಚಾಯತಿ ತ್ರಿಣಿವೆ, ಸಿದ್ಧಿವಿನಾಯಕ ಯುವಕ ಸಂಘದ ಆಶ್ರಯದಲ್ಲಿ ನಡೆಯಲಿರುವ ಯುವಜನ ಮೇಳವನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ. ತಾಪಂ ಅಧ್ಯಕ್ಷೆ ನಾಗರತ್ನ ದೇವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
10ರಂದು ಬಿಜೆಪಿ ಕಾರ್ಯಕರ್ತರ ಸಮಾವೇಶ
ಸಾಗರ: ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಫೆ.10 ರಂದು ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಕಾನ್ವೆಂಟ್ ಶಾಲೆಯ ಎದುರಿನ ನೆಹರು ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಚೇತನರಾಜ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡುವರು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಯು.ಎಚ್. ರಾಮಪ್ಪ ಮಾತನಾಡಿ, ಸಾಗರದಲ್ಲಿ ನಡೆಯುವ ಸಮಾವೇಶ ಇಡೀ ರಾಜ್ಯಕ್ಕೆ ಸಂದೇಶ ಕೊಡಲಿದೆ. ಸಮಾವೇಶದಲ್ಲಿ ಸುಮಾರು 10 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಶರಾವತಿ ಸಿ.ರಾವ್, ಕಾರ್ಯದರ್ಶಿ ಕಸ್ತೂರಿ ನಾಗರಾಜ್, ನಗರ ಘಟಕದ ಅಧ್ಯಕ್ಷ ಸತೀಶಬಾಬು, ರವೀಶಕುಮಾರ್ ಇತರರು ಇದ್ದರು.
ಇಂದಿನಿಂದ ಉದ್ಘಾಟನೆ
ಸಾಗರ: ತಾಲೂಕಿನ ಕೋಗೋಡು ಶ್ರೀಕೇಶವನಾಥಸ್ವಾಮಿ ದೇವಾಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯವು ಫೆ.8, 9 ಮತ್ತು 10ರಂದು ರಾಮಚಂದ್ರಾಪುರಮಠದ ರಾಘವೇಶ್ವರಭಾರತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಕೀಚಕ ವಧೆ- ಕರ್ಣಪರ್ವ ನಾಟಕ ಇಂದು
ಸಾಗರ: ಶ್ರೀ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರಿಂದ ಫೆ.8 ರ ಶನಿವಾರ ರಾತ್ರಿ 9-30 ರಿಂದ ಸಾಗರದ ನೆಹರೂ ಮೈದಾನದಲ್ಲಿ ಕೀಚಕ ವಧೆ- ಕರ್ಣಪರ್ವ- ಅಭಿಮನ್ಯು ಅಪರೂಪದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಕೊಳಗಿ ಕೇಶವ ಹೆಗಡೆ, ಮಯ್ಯ, ರಾಮಕೃಷ್ಣ, ಪರಮೇಶ್ವರ ಭಂಡಾರಿ, ಕೋಟ ಅವರ ಹಿಮ್ಮೇಳವಿದ್ದು ಕೊಂಡದಕುಳಿ ರಾಮಚಂದ್ರ ಹೆಗಡೆ, ವಿದ್ಯಾಧರ ಜಲವಳ್ಳಿ, ಬಳ್ಕೂರು ಕೃಷ್ಣಯಾಜಿ, ಶಶಿಕಾಂತ ಶೆಟ್ಟಿ, ತೋಟಿಮನೆ ಗಣಪತಿ ಹೆಗಡೆ, ಕಣ್ಣಿಮನೆ ಗಣಪತಿ ಭಟ್, ರಮೇಶ ಭಂಡಾರಿ ಮುಂತಾದ ಖ್ಯಾತ ಕಲಾವಿದರು ಭಾಗವಹಿಸುವರು. ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.
ಗುಣಮುಖ ನಾಟಕ ಪ್ರದರ್ಶನ ಇಂದು
ಶಿವಮೊಗ್ಗ: ನಮ್ ಟೀಂ ರಂಗ ತಂಡ ಫೆ.8ರಂದು ಸಂಜೆ 7 ಗಂಟೆಗೆ ಡಿವಿಎಸ್ ರಂಗಮಂದಿರದಲ್ಲಿ ಗುಣಮುಖ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿಯವರು ನಾಟಕ ನಿರ್ದೇಶಿಸಿದ್ದು, ಈಗಾಗಲೇ ರಾಜ್ಯದ ಹಲವೆಡೆ 14 ಪ್ರದರ್ಶನ ಕಂಡಿದೆ. ಫೆ.8 ಮತ್ತು 9ರಂದು ಡಿವಿಎಸ್ ರಂಗಮಂದಿರದಲ್ಲಿ ಲಂಕೇಶ್ ಅವರ ಸಾಹಿತ್ಯ ಕುರಿತ ವಿಚಾರ ಸಂಕಿರಣವನ್ನು ಹೊಂಗಿರಣ ಸಂಸ್ಥೆ ಆಯೋಜಿಸಿದ್ದು, ಈ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ನಾಟಕದಲ್ಲಿ ಡಾ. ಸಾಸ್ವೆಹಳ್ಳಿ ಸತೀಶ್, ಕೊಟ್ರಪ್ಪ, ಸುರೇಂದ್ರ, ಚಂದ್ರಶೇಖರ್, ಹಿರೇಗೋಣಿಗೆರೆ, ವಿಜಯಕುಮಾರ್, ಮೋಹನ್, ಚಂದ್ರಶೇಖರ ಶಾಸ್ತ್ರಿ ಮೊದಲಾದವರು ಅಭಿನಯಿಸಿದ್ದಾರೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, 9ರಂದು ಬೆಳಗ್ಗೆ ಈ ನಾಟಕದ ಕೃತಿ ಹಾಗೂ ರಂಗಕೃತಿ ಬಗ್ಗೆ ಚರ್ಚೆ ನಡೆಯಲಿದೆ. ನಿರ್ದೇಶಕ ನಟರಾಜ ಹೊನ್ನವಳ್ಳಿ ಭಾಗವಹಿಸುವರು. ರಂಗಾಸಕ್ತರು ಎರಡೂ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಮ್ ಟೀಂ ಕೋರಿದೆ.
11ರಂದು ಕೆಡಿಪಿ ಸಭೆ
ಶಿವಮೊಗ್ಗ: ಫೆ.11ರಂದು ಬೆಳಗ್ಗೆ 11ಗಂಟೆಗೆ ಜಿಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ 2014ರ ಜನವರಿ ಅಂತ್ಯದವರೆಗೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿದೆ.
ಅದ್ಧೂರಿ ರಥೋತ್ಸವ
ಸೊರಬ: ತಾಲೂಕು ಮೂಡಿ ಗ್ರಾಮದಲ್ಲಿ ಶಿವಲಿಂಗೇಶ್ವರ ಮಹಾಶಿವಯೋಗಿಗಳವರ ಮಹಾರಥೋತ್ಸವವು ಜರುಗಿತು. ಚನ್ನವೀರ ಮಹಾಶಿವಯೋಗಿಗಳವರ ಆಶೀರ್ವಾದ, ಮಠಾಧ್ಯಕ್ಷ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಯೊಂದಿಗೆ ಅಡ್ಡಪಲ್ಲಕ್ಕಿ ಉತ್ಸವ, ನಂತರ ಗೊಗ್ಗೆಹಳ್ಳಿ ಸಂಸ್ಥಾನಮಠದ ಸಂಗಮೇಶ್ವರ ಶಿವಾಚಾರ್ಯ ಅವರಿಂದ ಅಯ್ಯಾಚಾರ, ಶಿವದೀಕ್ಷೆ, ಷಟ್ಸ್ಥಳದ ಧ್ವಜಾರೋಹಣ, ಸಾಮೂಹಿಕ ವಿವಾಹ, ಶಿವಾನುಭವ ಸಮ್ಮೇಳನ ಜರುಗಿದವು. ಮೂಡಿ ಗ್ರಾಮದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಾವಿರಾರು ಭಕ್ತರು, ಶರಣರು ಮೊದಲಾದವರು ಇದ್ದರು.
ಬಿಎಸ್ವೈ, ನಾಗಲೋಟಿಮಠಗೆ ಚನ್ನಬಸವ ಪ್ರಶಸ್ತಿ
ಕಾರವಾರ: ಈ ಬಾರಿಯ ಚನ್ನಬಸವ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮರಣೋತ್ತರವಾಗಿ ದಿ. ಡಾ.ಎಸ್.ಜಿ. ನಾಗಲೋಟಿಮಠ ಅವರಿಗೆ ನೀಡಲಾಗುವುದು ಎಂದು ಚನ್ನಬಸವ ಟ್ರಸ್ಟ್ ಅಧ್ಯಕ್ಷ ಗಂಗಾಧರ ಚ. ಕಿತ್ತೂರ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಚನ್ನಬಸವ ಸ್ವಾಮಿಗಳು ಹಳೆಗನ್ನಡದಲ್ಲಿ ಬರೆದಿದ್ದ ವೈದ್ಯಕೀಯ ವಿಜ್ಞಾನವನ್ನು ಹೊಸಗನ್ನಡಕ್ಕೆ ಅನುವಾದಿಸಿದ ದಿ. ಡಾ. ಎಸ್.ಜಿ. ನಾಗಲೋಟಿಮಠ ಅವರ ಕೊಡುಗೆಯ ನಿಮಿತ್ತ ಪ್ರಶಸ್ತಿ ನೀಡಲಾಗುತ್ತಿದೆ. ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಫೆ.6ರಿಂದ ಪ್ರಾರಂಭವಾಗಿದ್ದು, ಫೆ.14ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಫೆ. 15ರಂದು ಸಂಜೆ 4 ಗಂಟೆಗೆ ಮಹಾರಥೋತ್ಸವ ನಡೆಯಲಿದ್ದು, ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಚಾಲನೆ ನೀಡಲಿದ್ದಾರೆ. ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

