ಶಿವಮೊಗ್ಗ

ನಾಡಿಗೆ ನೀರ ಮೇಲೆ ಸನ್ಮಾನ

Published On :

ಹೊನ್ನೇಮರಡು (ಸಾಗರ): ಮಲೆನಾಡಿನೊಳಗೆ ಹಾಳಾಗುತ್ತಿರುವ ಸಂಬಂಧ, ಮನುಷ್ಯತ್ವ ಹಾಗೂ ಅದು ಸರಿದಾರಿಗೆ ಬರಬೇಕಾದ ರೀತಿಯ ಕುರಿತು ಮೆದು ದನಿಯಲ್ಲಿ ಮನಮುಟ್ಟುವಂತೆ ಸಾಹಿತ್ಯ ಕಟ್ಟಿ ಕೊಟ್ಟ ಸಾಹಿತಿ ನಾ. ಡಿಸೋಜ ಅವರು ಮಡಿಕೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಿಯೋಜಿತಗೊಂಡ ಹಿನ್ನೆಲೆಯಲ್ಲಿ ಅವರಿಗೊಂದು ಅಪರೂಪರದ ಸನ್ಮಾನ ಶುಕ್ರವಾರ ಏರ್ಪಾಡಾಗಿತ್ತು.
ಶರಾವತಿ, ಮುಳುಗಡೆ, ಮಲೆನಾಡು ನಾ. ಡಿಸೋಜ ಅವರ ಸಾಹಿತ್ಯದ ಮೂಲ ವಿಷಯ. ಅದರಲ್ಲೂ ಅವರ ಸಾಹಿತ್ಯದಲ್ಲಿ ಬಂದು ಹೋಗುವ ಸ್ಥಳದಲ್ಲಿಯೇ ಅವರು ಸಾಹಿತ್ಯಾಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದರು.
ಭಾರತೀಯ ಸಾಹಸ ಸಮನ್ವಯ ಕೇಂದ್ರವು ಹೊನ್ನೇಮರಡು ಹಿನ್ನೀರಿನ ಮೇಲೆ ನಾ. ಡಿಸೋಜ ಅವರನ್ನು ಆತ್ಮೀಯವಾಗಿ ಗೌರವಿಸಿತು. ವಿಶೇಷವೆಂದರೆ, ತೆಪ್ಪದಲ್ಲಿ ನಾ. ಡಿಸೋಜ ದಂಪತಿ ಕುಳ್ಳಿರಿಸಿ ಶರಾವತಿ ನದಿ ನೀರಿನ ಮಧ್ಯೆ ಗೌರವಿಸಲಾಯಿತು. ಕಾರ್ಯಕ್ರಮ ಆಯೋಜಕ ಸಂಸ್ಥೆಯ ಪರವಾಗಿ ಪ್ರಸಾರ ಭಾರತಿ ಕಾರ್ಯಕ್ರಮ ನಿರ್ಮಾಪಕರಾದ ಎಚ್.ಎನ್. ಆರತಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾ. ಡಿಸೋಜ ಅವರು, ದೋಣಿಯಲ್ಲಿ ಕೂರಿಸಿ ನನ್ನ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆಂದರು.
ಪರಿಸರ ಕಾಳಜಿ ಅಗತ್ಯ: ಅಭಿವೃದ್ಧಿ ಹೆಸರಲ್ಲಿ ಹಲವು ಗೊಂದಲವನ್ನು ನಾವು ಸೃಷ್ಟಿ ಮಾಡಿಕೊಂಡಿದ್ದೇವೆ. ಅನೇಕ ರಾಷ್ಟ್ರಗಳಲ್ಲಿ ಸಾಕಷ್ಟು ಅಣೆಕಟ್ಟು ಕಟ್ಟಿ ಕೆಟ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ನಮ್ಮಲ್ಲೂ ಅಣೆಕಟ್ಟು ನಿರ್ಮಾಣ ಹಲವಾರು ಸಮಸ್ಯೆಗೆ ಕಾರಣವಾಗಿದೆ. ಅಣೆಕಟ್ಟು ಬೇಡವೇ ಎಂದು ಕೇಳಬಹುದು. ಆದರೆ, ಅಣೆಕಟ್ಟು ಬೇಕು. ಮನುಷ್ಯನ ಅಭಿವೃದ್ಧಿ ಗಮನಿಸದೆ ಪರಿಸರ ಕಾಳಜಿಯನ್ನೂ ಹೊಂದಬೇಕು. ಪರಿಸರ ಮರೆತರೆ ಅದು ನಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಗತಿ ವಿರೋಧಿಯಲ್ಲ: ನಾನು ಖಂಡಿತವಾಗಿ ಪ್ರಗತಿಯ ವಿರೋಧಿಯಲ್ಲ. ಪರಿಸರ ಉಳಿಸಿ ನಮ್ಮ ಪ್ರಗತಿ ಮಾಡಬೇಕು ಎಂದ ಅವರು ನಗರ ಪ್ರದೇಶ ಬೆಳಗಿಸಲು ಗ್ರಾಮಗಳನ್ನು ಮುಳುಗಿಸುವ ಅಭಿವೃದ್ಧಿ ಬೇಡ ಎಂಬುದು ನನ್ನ ವಾದ. ಅಭಿವೃದ್ಧಿಗೆ ಮತ್ತೊಂದು ದಾರಿ ಹುಡುಕಿಕೊಳ್ಳೋಣ ಎಂದರು.
ಭಾರತೀಯ ಸಾಹಸ ಸಮನ್ವಯ ಕೇಂದ್ರದ ಸ್ವಾಮಿ, ನಮಿಟೋ ಕಾಮ್ದಾರ್, ಪತ್ರಕರ್ತ ಮೋಹನ್ ಜಿ.ಎನ್., ಗ್ರಾಪಂ ಅಧ್ಯಕ್ಷ ನಾಗರಾಜ್, ಹೊಂಗಿರಣ ಶಿಕ್ಷಣ ಸಂಸ್ಥೆಯ ಶೋಭಾ, ಶಿವಮೂರ್ತಿ, ಲಂಬೋದರ ಮತ್ತಿತರರು ಇದ್ದರು.



ನಾನು ನೀರಿನ ಮೇಲೆ ಸನ್ಮಾನ ಮಾಡಿಸಿಕೊಳ್ಳುತ್ತಿರುವಾಗ ವಿಶೇಷವೆನಿಸಿ ಸಂತಸವಾಗುತ್ತಿದೆ. ಹಾಗೆಯೇ ಬೇಸರವೂ ಇದೆ. ನಾನಿರುವ ನೀರಿನ ಕೆಳಗೆ ಹಿಂದೆ ಹಲವಾರು ಹಳ್ಳಿಗಳಿದ್ದವು, ಹಲವಾರು ಜನ ಬದುಕು ಕಂಡುಕೊಂಡಿದ್ದರು. ಕೃಷಿ ಭೂಮಿ ಇತ್ತು. ಎಲ್ಲವೂ ಇವತ್ತು ಡ್ಯಾಂ ಕಟ್ಟಿದ್ದರಿಂದಾಗಿ ನೀರಿಗೆ ಬಲಿಯಾಗಿದೆ. ಅದು ಅನಿವಾರ್ಯ ಅನ್ನಿಸಿದರೂ ಮಾನವೀಯವಾಗಿ ನೋಡುವಾಗ ನನ್ನನ್ನು ಕಾಡುತ್ತಿದೆ
- ನಾ. ಡಿಸೋಜ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.