ಸುದ್ದಿ ಸಂಕ್ಷೇಪ
ಕಾರ್ಮಿಕ ವಿರೋಧಿ ನೀತಿ: ಆರೋಪ
ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ವಿರೋಧಿ ಧೋರಣೆ ಪ್ರದರ್ಶಿಸುತ್ತಿದ್ದಾರೆ. ರಾಜ್ಯದಲ್ಲಿ ಪುನಃ ಕರಾಳ ಎಸ್ಮಾ ಸೇವೆಗಳ ನಿರ್ವಹಣಾ ಕಾನೂನು ಜಾರಿಗೆ ತರಲು ಮುಂದಾಗಿದ್ದು, ಈ ಕ್ರಮದ ವಿರುದ್ಧ ಹೋರಾಟ ಹಮ್ಮಿಕೊಂಡಿರುವುದಾಗಿ ಸಿಐಟಿಯು ಸಂಘಟನೆ ತಿಳಿಸಿದೆ.
ಕನಿಷ್ಠ ವೇತನವನ್ನು ರು. 10,000 ಕ್ಕೆ ನಿಗದಿಗೊಳಿಸಬೇಕು, ಎಲ್ಲಾ ಅಸಂಘಟಿಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಕಾರ್ಮಿಕರನ್ನು ಅಕ್ರಮವಾಗಿ ಕ್ಯಾಶುಯಲ್, ಹಂಗಾಮಿ ಮತ್ತು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಅಂಗನವಾಡಿ, ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತರಿಗೆ ಸೇವಾ ಭದ್ರತೆ ನೀಡಬೇಕು, ಕೆಎಸ್ಆರ್ಟಿಸಿ ಮತ್ತು ಇತರೆ ಅಗತ್ಯ ಸೇವೆಗಳ ಕಾರ್ಮಿಕರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳು ನಿಲ್ಲಬೇಕೆಂದು ಸಂಘಟನೆಯ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ ತಿಳಿಸಿದ್ದಾರೆ.
ಇಂದು ವಿಧಾನಸೌಧ ಮುತ್ತಿಗೆ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಜ.23ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುತ್ತಿದ್ದು, ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದ್ದಾರೆ.
ಜಾಗೃತಿ ಕಾರ್ಯಕ್ರಮ
ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಜ.23ರಂದು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ರಸ್ತೆ ಸಂಚಾರಿ ನಿಯಮಗಳ ಮತ್ತು ರಸ್ತೆ ಅಪಘಾತ ತಡೆ ಜಾಗೃತಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮವನ್ನು ಪೊಲೀಸ್ ವೃತ್ತ ನಿರೀಕ್ಷಕ ಜಯರಾಜ್ ಉದ್ಘಾಟಿಸಿ, ಉಪನ್ಯಾಸ ನೀಡುವರು. ರೆಡ್ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ರವಿ, ರೇಷ್ಮಾ ಉಪಸ್ಥಿತರಿರಲಿದ್ದು, ಪ್ರೊ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸುವರು.
ಇಂದು ಜೆಡಿಎಸ್ ಸಭೆ
ಸೊರಬ: ಜ.29ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ವತಿಯಿಂದ ರಾಜ್ಯಮಟ್ಟದ ಯುವ ಚೇತನ ಸಮಾವೇಶ ಹಾಗೂ ಲೋಕಸಭಾ ಚುನಾವಣೆ ಪೂರ್ವ ಸಿದ್ಧತಾ ಸಭೆಯನ್ನು ಜ.23ರ ಗುರುವಾರ ಬೆಳಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಕೇಂದ್ರ ಕಾರ್ಯಾಲಯದಲ್ಲಿ ರಾಜ್ಯ ಯುವಘಟಕದ ಪದಾಧಿಕಾರಿಗಳು ಮತ್ತು ಜಿಲ್ಲಾ, ತಾಲೂಕು ಯುವ ಘಟಕಗಳ ಅಧ್ಯಕ್ಷರನ್ನು ಕರೆಯಲಾಗಿದೆ ಎಂದು ರಾಜ್ಯ ಯುವ ಜನತಾದಳದ ಅಧ್ಯಕ್ಷ ಮಧು ಬಂಗಾರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಸುರಕ್ಷತೆಯಿಂದ ಅನಾಹುತ ತಡೆ ಸಾಧ್ಯ: ನಟರಾಜ್
ಸೊರಬ: ಯುವಕರಲ್ಲಿ ರಸ್ತೆ ಸುರಕ್ಷೆಯ ಬಗ್ಗೆ ಅರಿವು ಮೂಡಿದಾಗ ಮಾತ್ರ ಮುಂದೆ ಆಗಬಹುದಾಗ ಹೆಚ್ಚಿನ ಅನಾಹುತಗಳನ್ನು ತಡೆಯಲು ಸಾಧ್ಯ ಎಂದು ತಹಸೀಲ್ದಾರ್ ಪಿ.ಜಿ. ನಟರಾಜ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಕ್ಷಣಾ ಇಲಾಖೆಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಂಗಳವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ನೀಡಿ: ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಆರಕ್ಷಕ ವೃತ್ತ ನಿರೀಕ್ಷಕ ಡಿ. ನಾಗರಾಜು, ಸರ್ಕಾರದ ಸುರಕ್ಷತೆಯನ್ನು ಪಾಲಿಸದಿದ್ದರೆ ಅವಲಂಬಿತ ಕುಟುಂಬಕ್ಕೆ ತೊಂದರೆಯಾಗುವುದರ ಜೊತೆಗೆ ಅಪಘಾತ ಮಾಡಿದ ವ್ಯಕ್ತಿಯೇ ನೊಂದವರಿಗೆ ಪರಿಹಾರ ಕೊಡುವ ಪರಿಸ್ಥಿತಿ ಒದಗುತ್ತದೆ. ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ಕ್ರಮವನ್ನು ಪಾಲಿಸುವುದರ ಜೊತೆಗೆ ಮುಂದಾಗುವ ಅನಾಹುತ, ಅಪರಾಧಗಳನ್ನು ತಡೆಯಲು ರಕ್ಷಣಾ ಇಲಾಖೆಯೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕು ಎಂದರು.
ಜಾಗೃತಿ ಜಾಥಾ: ಅಪಘಾತ, ಸಾಮಾಜಿಕ ಅಭದ್ರತೆ ಮೊದಲಾದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ, ಮುಂಜಾಗ್ರತೆ ಉಪಾಯಗಳ ಕುರಿತು ಮಾರ್ಗದರ್ಶನ ನೀಡಿದರು. ನಂತರ ಕಾಲೇಜು ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಸಪ್ತಾಹದ ಕುರಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

