ಶಿವಮೊಗ್ಗ

ಶಿವಮೊಗ್ಗದಲ್ಲಿ ಶೀಘ್ರ ಮಣಿಪಾಲ ಆಸ್ಪತ್ರೆ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಜೂ.8
ಶಿವಮೊಗ್ಗದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಮತ್ತು ಮಣಿಪಾಲ್ ವಿಶ್ವವಿದ್ಯಾಲಯದ ಒಡಂಬಡಿಕೆಯಲ್ಲಿ ಮಣಿಪಾಲ್ ಆಸ್ಪತ್ರೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದೆಂದು ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಣಿಪಾಲ ಆಸ್ಪತ್ರೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಇದರ ಶಾಖೆ ಶಿವಮೊಗ್ಗದಲ್ಲಿ ಸ್ಥಾಪನೆಯಾಗಬೇಕು, ಆ ಮೂಲಕ ಬಡ ರೋಗಿಗಳಿಗೆ ವರವಾಗಬೇಕು ಎಂಬ ಕಾರಣದಿಂದ ಮಣಿಪಾಲ್ ಗ್ರೂಪ್‌ನ್ನೊಂದಿಗೆ ನಾವು ಒಡಂಬಡಿಕೆ ಮಾಡಿಕೊಂಡು ಬಾಪೂಜಿ ವಿದ್ಯಾಸಂಸ್ಥೆಯ ಪ್ರಸ್ತುತ ಕಟ್ಟಡದಲ್ಲಿಯೇ ಆಸ್ಪತ್ರೆ ಸ್ಥಾಪಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ಆಸ್ಪತ್ರೆಗೆ ಆರಾಧ್ಯ ಮಣಿಪಾಲ ಎಂದು ನಾಮಕರಣ ಮಾಡಿದ್ದೇವೆ ಎಂದರು.
ಶೀಘ್ರದಲ್ಲಿಯೇ ಆಸ್ಪತ್ರೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 100 ಹಾಸಿಗೆಗಳ ಸೌಲಭ್ಯವಿರುತ್ತದೆ. ನಂತರ ಇದನ್ನು ವಿಸ್ತರಿಸಲಾಗುವುದು ಎಂದು ವಿವರಿಸಿದರು.
ಸಾಮಾನ್ಯ ಕಾಯಿಲೆಗಳು, ಶಸ್ತ್ರಚಿಕಿತ್ಸೆ, ಹೃದಯ ಸಂಬಂಧಿ ಕಾಯಿಲೆ, ತುರ್ತು ಚಿಕಿತ್ಸಾ ಘಟಕ, ಮಕ್ಕಳ ವಿಭಾಗ, ಪ್ರಸೂತಿ ಮತ್ತು ಸ್ತ್ರೀ ರೋಗ, ಚರ್ಮ ಮತ್ತು ಲೈಂಗಿಕ ರೋಗ, ಮೂಳೆ ಸಂಬಂಧಿತ ರೋಗಗಳು ಹೀಗೆ ವಿವಿಧ ಘಟಕಗಳನ್ನು ಮೊದಲ ಹಂತದಲ್ಲಿಯೇ ಆರಂಭಿಸಲಾಗುತ್ತದೆ. ರೋಗಿಗಳಿಗೆ ವಿಶೇಷ ಹಾಗೂ ಹೆಚ್ಚುವರಿ ವೈದ್ಯಕೀಯ ಸೇವೆಯ ಅಗತ್ಯವಿದ್ದಲ್ಲಿ ಮಣಿಪಾಲದಿಂದ ತಜ್ಞ ವೈದ್ಯರನ್ನು ಕರೆಸಲಾಗುವುದು. ಹಂತ- ಹಂತವಾಗಿ ಆಸ್ಪತ್ರೆಯನ್ನು ವಿಸ್ತರಿಸಲಾಗುತ್ತದೆ ಎಂದರು.
ಆರೋಗ್ಯ ಶಿಬಿರ: ಶಿವಮೊಗ್ಗದಲ್ಲಿ ಮಣಿಪಾಲ ಶಾಖಾ ಆಸ್ಪತ್ರೆ ತೆರೆಯುವ ಮುನ್ನವೇ ಮಣಿಪಾಲ್ ಆಸ್ಪತ್ರೆಯವರು ನಾಲ್ಕು ಆರೋಗ್ಯ ಶಿಬಿರ ನಡೆಸಿದ್ದು, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದಾರೆ. ಜೂ. 8ರಂದು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಸುತ್ತಮುತ್ತಲಿನ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು. ಶಿವಮೊಗ್ಗದಲ್ಲಿ ಪ್ರಾರಂಭವಾಗುವ ಮಣಿಪಾಲ ಆಸ್ಪತ್ರೆಯಲ್ಲಿ ವಾಜಪೇಯಿ, ಬಿಪಿಎಲ್ ಕಾರ್ಡ್ ಮತ್ತಿತರ ಯೋಜನೆಯ ವಿಶೇಷ ಸೌಲಭ್ಯಗಳನ್ನು ಕೂಡ ನೀಡಲಾಗುವುದು ಎಂದರು. ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ವಿ.ಪಿ.ಆರಾಧ್ಯ, ಸಹ ಸಂಯೋಜಕ ಡಾ. ಸಂಜಯ್ ಎಸ್. ಭಾರದ್ವಾಜ್ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಅಸಮರ್ಥ ಗೃಹ ಸಚಿವ
ಶಿವಮೊಗ್ಗ: ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ನಿಂತು ಹೋಗಿವೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಹೆಚ್ಚಿದ್ದು, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಒಂದು ಸಣ್ಣ ಜಗಳವನ್ನು ಬಗೆಹರಿಸಲು ಮುಖ್ಯಮಂತ್ರಿಗಾಗಲೀ, ಗೃಹ ಸಚಿವರಿಗಾಗಲೀ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾನೂನು ವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣ ಹದಗೆಟ್ಟಿದ್ದು, ಗೃಹ ಸಚಿವರಂತೂ ಸಂಪೂರ್ಣ ಅಸಮರ್ಥರಾಗಿದ್ದಾರೆ. ಅವರನ್ನು ತಕ್ಷಣವೇ ಸ್ಥಾನದಿಂದ ಕೆಳಗಿಳಿಸಬೇಕು ಎಂದರು. ಬಿಜೆಪಿಯಲ್ಲೂ ಆಂತರಿಕ ಜಗಳವಿತ್ತು. ಆದರೆ, ಅಭಿವೃದ್ಧಿಯನ್ನು ನಾವು ಮರೆಯಲಿಲ್ಲ. ಈಗ ಕಾಂಗ್ರೆಸ್‌ನ ಕಚ್ಚಾಟ ಬೀದಿಗೆ ಬಿದ್ದಿದೆ. ಇವರಷ್ಟು ರಂಪಾಟ ಮಾಡಿಕೊಳ್ಳಲಿಲ್ಲ. ಸರ್ಕಾರ ಇದೆಯೇ ಎಂಬ ಅನುಮಾನ ಬರುತ್ತಿದೆ. ಜಾತಿಗಳ ನಡುವೆ ವಿಷಬೀಜ ಬಿತ್ತಲಾಗುತ್ತಿದೆ. ಗುಂಪುಗಾರಿಕೆ ಹೆಚ್ಚಾಗುತ್ತಿದೆ.
ರಾಜ್ಯಪಾಲರೂ ಛೀಮಾರಿ ಹಾಕುವಷ್ಟರ ಮಟ್ಟಿಗೆ ಸರ್ಕಾರ ನಡೆಯುತ್ತಿದೆ ಎಂದರು. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗಿನ ಜೋಷ್ ಈಗ ಕಾಣುತ್ತಿಲ್ಲ. ಒಟ್ಟಾರೆ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಮತ್ತು ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕು ಎಂಬುದು ನಮ್ಮ ಆಗ್ರಹವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.